ತುಮಕೂರು ಜಿಲ್ಲಾಸ್ಪತ್ರೆಯ ನವಜಾತ ಶಿಶು ಎನ್.ಐ.ಸಿ.ಯು, ಹಾಗೂ ಎಸ್.ಎನ್.ಸಿ.ಯು ಗಳಲ್ಲಿ ಮಕ್ಕಳ ಅಗತ್ಯಕ್ಕೆ ತಕ್ಕಂತೆ ವಾರ್ಮರ್ ಗಳು ಹಾಗೂ ಪೋಟೋ ಥೆರಪಿ ಮೆಷಿನ್ ಗಳ ತೀವ್ರ ಕೊರತೆ ಇದ್ದು ಒಂದು ವಾರ್ಮರ್ ನಲ್ಲಿ ಎರಡರಿಂದ ಮೂರು ಮಕ್ಕಳನ್ನು ಇಟ್ಟಿರುವ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಒಂದು ವರ್ಷದ ಹಿಂದೆ ಬೇಟಿ ಮಾಡಿದ ಸಂದರ್ಭದಲ್ಲೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದಾಗ್ಯೂ ಯಾವುದೇ ಬದಲಾವಣೆ ಮಾಡದೆ ಇರುವ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಗಳ ನಿಮಿತ್ತ ತುಮಕೂರು ನಗರಕ್ಕೆ ಆಗಮಿಸಿದ್ದ ಡಾ.ತಿಪ್ಪೇಸ್ವಾಮಿ ಕೆ.ಟಿ. ಕುಣಿಗಲ್ ತಾಲ್ಲೂಕಿನಲ್ಲಿ ಮಾರಟಕ್ಕೆ ಒಳಗಾಗಿದ್ದ ಮಗುವಿನ ಆರೋಗ್ಯ ವಿಚಾರಿಸುವ ಸಲುವಾಗಿ ಜಿಲ್ಲಾಸ್ಪತ್ರೆಗೆ ದಿಡೀರ್ ಬೇಟಿನೀಡಿ ಪರಿಶೀಲಿಸಿದರು.
ಈ ರೀತಿ ಒಂದೇ ವಾರ್ಮರ್ ಗಳಲ್ಲಿ ಒಂದಕ್ಕಿಂತ ಹೆಚ್ಚಿನ ಶಿಶುಗಳನ್ನಿಡುವುದು ಶಿಶುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು ಇದನ್ನು ಸರಿಪಡಿಸಲು ಕ್ರಮಕೈಗೊಳ್ಳಲು ಸೂಚಿಸಿದರು. ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳು ತಮ್ಮ ಮೇಲಿನ ಹಂತಕ್ಕೆ ಈ ಬಗ್ಗೆ ಪತ್ರವ್ಯವಹಾರ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದರು. ಈ ಬಗ್ಗೆ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ವಿಚಾರಣೆ ನಡೆಸಲಿದೆ ಎಂದರು.
ಪರಿಶೀಲನೆಯ ವೇಳೆ ಪೌಷ್ಠಿಕ ಪುನಶ್ಚೇತನ ಕೇಂದ್ರಕ್ಕೂ ಬೇಟಿನೀಡಿದರು. 10 ಹಾಸಿಗೆಯ ಸುಸಜ್ಜಿತ ಪೌಷ್ಠಿಕ ಪುನಶ್ಚೇತನ ಕೇಂದ್ರದಲ್ಲಿ ಯಾವುದೇ ಮಕ್ಕಳು ಇರಲಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದರು ಕೂಡ ಈ ಕೇಂದ್ರದ ಸದುಪಯೋಗವಾಗುತ್ತಿಲ್ಲ. ಹಾಜರಿದ್ದ ಸಿಬ್ಬಂಧಿಗಳು ಅಂಗನವಾಡಿ ಕೇಂದ್ರಗಳಿಂದ ಮಕ್ಕಳು ಹೆಚ್ಚಿನ ಸಂಖ್ಯೆ ರೆಪರ್ ಆಗುತ್ತಿಲ್ಲ ಹಾಗೂ ಪುನಶ್ಚೇತನ ಕೇಂದ್ರಕ್ಕೆ ನಿಗದಿತವಾಗಿ ಆಹಾರ ಸಾಮಗ್ರಿ ವಿತರಣೆಯಾಗುತ್ತಿಲ್ಲ ಎಂದು ದೂರಿದರು. ಕೇಂದ್ರದ ಮುಂಬಾಗ ಜಾಗ ಅಸ್ವಚ್ಚವಾಗಿದ್ದು, ಮಕ್ಕಳ ಆಟದ ಜಾಗವು ನಿರ್ವಹಣೆಯಲ್ಲಿದೆ ಹಾಳಾಗಿರುವುದನ್ನು ಗಮನಿಸಿದರು. ಹಾಜರಿದ್ದ ಸಿಬ್ಬಂಧಿಗಳು ಸ್ವಚ್ಚತಾ ಏಜಿನ್ಸಿಯವರು ನಿಯಮಿತವಾಗಿ ಸ್ವಚ್ಚಗೊಳಿಸುತ್ತಿಲ್ಲವೆಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಮಕ್ಕಳ ವಾರ್ಡ್ಗೆ ಬೇಟಿ ನೀಡಿ ಪರಿಶೀಲಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು, ಪೋಷಕರೊಂದಿಗೆ ಮಾತನಾಡಿ ಅವರ ಅಹವಾಲು ಆಲಿಸಿದರು. ಗರ್ಬಿಣಿ ಬಾಣಂತಿಯರಿಗೆ ಕುಡಿಯಲು ಹಾಗೂ ಬಳಸಲು ಬಿಸಿನೀರಿನ ವ್ಯವಸ್ಥೆ ಮಾಡಲು ಸೂಚಿಸಿದರು.
ಒಟ್ಟಾರೆ ತುಮಕೂರು ಜಿಲ್ಲಾಸ್ಪತ್ರೆಯು ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ಸುರಕ್ಷತೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೆಕಾಗಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.
ಕುಣಿಗಲ್ ತಾಲ್ಲೂಕಿನಲ್ಲಿ ಮಾರಟಕ್ಕೆ ಒಳಗಾಗಿದ್ದ ಮಗುವಿನ ಆರೋಗ್ಯ ವಿಚಾರಿಸಿ ವೈಧ್ಯರಿಂದ ಮಾಹಿತಿ ಪಡೆದರು. ಮಗುವಿನ ಆರೋಗ್ಯ ಉತ್ತಮಗೊಂಡಿದ್ದು ಒಂದೆರಡು ದಿನಗಳಲ್ಲಿ ಡಿಶ್ಚಾರ್ಜ್ ಮಾಡುವುದಾಗಿ ವೈಧ್ಯರು ತಿಳಿಸಿದರು. ಬೇಟಿಯ ಸಮಯದಲ್ಲಿ ಜಿಲ್ಲಾಸ್ಪತ್ರೆಯ ವೈಧ್ಯಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂಧಿಗಳು ಹಾಜರಿದ್ದರು.