ವಿದ್ಯುತ್ ಅವಘಡಗಳಿಂದ ಮಕ್ಕಳ ಸಾವನ್ನಪ್ಪುತ್ತಿರುವ ಹಾಗೂ ಅಪಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದಾಖಲಾಗುತ್ತಿವೆ, ತುಮಕೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 6 ಮಕ್ಕಳು ವಿದ್ಯುತ್ ಅವಘಡಗಳಿಂದ ಸಾವನ್ನಪ್ಪಿದ್ದರೆ 4 ಮಕ್ಕಳು ವಿದ್ಯುತ್ ಅಪಘಾತಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗವು ಕೆಲವು ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ಮಕ್ಕಳ ಸುರಕ್ಷತೆಗೆ ತುರ್ತಾಗಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿತ್ತು.
ಶಾಲೆ, ಅಂಗನವಾಡಿ ಹಾಗೂ ವಸತಿ ನಿಲಯಗಳ ಆವರಣಗಳಿಂದ ವಿದ್ಯುತ್ ತಂತಿ, ಟ್ರಾನ್ಸ್ ಪಾರ್ಮರ್ ಗಳನ್ನು ತೆರವುಗೊಳಿಸಲು ಮತ್ತು ಸ್ಥಳಾಂತರಿಸಲು ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ತುಮಕೂರಿನ ಅಧೀಕ್ಷಕ ಇಂಜಿನಿಯರ್ ರವರ ಕಛೇರಿಯಲ್ಲಿ ತುಮಕೂರು ಜಿಲ್ಲೆಯ ಬೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳ ಜೊತೆಗೆ ಅಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ತುಮಕೂರು, ಕುಣಿಗಲ್, ತಿಪಟೂರು ಹಾಗೂ ಮಧುಗಿರಿ ವಿಭಾಗಳಲ್ಲಿ ಮಾರ್ಚ 2024ರ ಅಂತ್ಯದ ವೇಳೆಗೆೆ ಒಟ್ಟು 1183 ಶಾಲೆ, ಅಂಗನವಾಡಿ ಹಾಗೂ ವಸತಿ ನಿಲಯಗಳ ಆವರಣಗಳಿಂದ ವಿದ್ಯುತ್ ತಂತಿ, ಟ್ರಾನ್ಸ್ ಪಾರ್ಮರ್‌ಗಳನ್ನು ತೆರವುಗೊಳಿಸಿದ ಬಗ್ಗೆ ವರದಿ ನೀಡಿದರು. ಸಾವನ್ನಪ್ಪಿದ 6 ಮಕ್ಕಳ ಕುಟುಂಬಕ್ಕೆ ಒಟ್ಟು 29ಲಕ್ಷ ಪರಿಹಾರ ವಿತರಣೆ ಮಾಡಿರುವ ಮಾಹಿತಿ ನೀಡಿದರು. ಅಪಘಾತಕ್ಕೆ ಒಳಗಾಗಿ ಪರಿಹಾರಕ್ಕೆ ಅರ್ಹವಾದ 4 ಪ್ರಕರಣಗಳಲ್ಲಿ ಇನ್ನೂ ಪರಿಹಾರ ವಿತರಣೆಯಾಗಿಲ್ಲದಿರುವುದನ್ನು ಗಮನಿಸಿದ ಸದಸ್ಯರು ಶೀಘ್ರವೇ ಪರಿಹಾರ ವಿತರಿಸಲು ಸೂಚಿಸಿದರು. ಈ ಪ್ರಕರಣಗಳಲ್ಲಿ ಸಕಾಲದಲ್ಲಿ ವರದಿ ನೀಡದೆ ಪರಿಹಾರ ವಿತರಣೆಯ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲು ಸೂಚಿಸಿದರು.
ತೆರವು ಕಾರ್ಯಾಚರಣೆಯ ಜೊತೆಯಲ್ಲೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯುತ್ ಅವಘಡಗಳ ಬಗ್ಗೆ, ವಹಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜುಲೈ ತಿಂಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಆಂದೋಲನ ಮಾದರಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಸೂಚಿಸಿದರು. ಹಾಗೆಯೆ ಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡುವು ಸಮಯದಲ್ಲಿ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿರುವ ಶಾಲೆಗಳ ಮಾನ್ಯತೆಯನ್ನು ತಡೆಹಿಡಿಯುವ ಮೂಲಕ ಮಕ್ಕಳ ಸುರಕ್ಷತೆಗೆ ಆದ್ಯತೆ ವಹಿಸಬೇಕಿದೆ, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಒಟ್ಟಾರೆ ಕಳೆದು ನಾಲ್ಕು ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಸುಮಾರು 71 ಕೋಟಿ ವೆಚ್ಚದಲ್ಲಿ 1183 ಶಾಲೆ, ಅಂಗನವಾಡಿ ಹಾಗೂ ವಸತಿ ನಿಲಯಗಳ ಆವರಣಗಳಿಂದ ವಿದ್ಯುತ್ ತಂತಿ, ಟ್ರಾನ್ಸ್ ಪಾರ್ಮರ್ ಗಳನ್ನು ತೆರವುಗೊಳಿಸುವ ಮತ್ತು ಸ್ಥಳಾಂತರ ಪ್ರಕ್ರಿಯೆ ನಿರೀಕ್ಷೆ ಮೀರಿ ಚುರುಕಾಗಿ ನಡೆದಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅದಕ್ಕಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಜಿಲ್ಲೆಯ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳನ್ನು ಅಭಿನಂದಿಸುತ್ತದೆ ಎಂದರು. ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಸಭೆಯಲ್ಲಿ ಬೆಸ್ಕಾಂ ತುಮಕೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಶ್ರೀ ನರಸಿಂಹಮೂರ್ತಿ, ಕೆಪಿಟಿಸಿಎಲ್ ನ ಅಧೀಕ್ಷಕ ಇಂಜಿನಿಯರ್ ಶ್ರೀಮತಿ ಕಾಂತಲಕ್ಷ್ಮಿ , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀ ದಿನೇಶ್, ಕಾರ್ಯನಿರ್ವಹಕ ಇಂಜಿನಿಯರ್ ಗಳಾದ ಶ್ರೀ ಪ್ರಶಾಂತ್ ಹಾಗೂ ಶ್ರೀಮತಿ ಸಂಧ್ಯಾ, ಮಕ್ಕಳ ರಕ್ಷಣಾಧಿಕಾರಿ ಶ್ರೀ ಶಿವಣ್ಣ, ಬೆಸ್ಕಾಂನ ಎಲ್ಲಾ ವಿಭಾಗಳ ಕಾರ್ಯಪಾಲಕ ಇಂಜಿನಿಯರ್ ಗಳು, ಕೆಪಿಟಿಸಿಎಲ್ ನ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.