ತಾಯಿ ಹಾಗೂ ಮಗುವಿನ ಮರಣ ಪ್ರಮಾಣ ತಪ್ಪಿಸಲು ಜಿಲ್ಲಾ ಮಟ್ಟದಲ್ಲಿ ಇಲಾಖೆಯಿಂದ ಪ್ರಯತ್ನ

VK NEWS
By -
0

 ಕೋಲಾರ: ‘ತಾಯಿ ಹಾಗೂ ಮಗುವಿನ ಮರಣ ಪ್ರಮಾಣ ತಪ್ಪಿಸಲು ಜಿಲ್ಲಾ ಮಟ್ಟದಲ್ಲಿ ಇಲಾಖೆಯಿಂದ ಪ್ರಯತ್ನ ನಡೆಸಲಾಗುತ್ತಿದ್ದು, ಅದಕ್ಕಾಗಿ ವಿನೂತನ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಯಶಸ್ಸು ಕೂಡ ದೊರೆತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಡಾ.ಜಿ.ಶ್ರೀನಿವಾಸ್‌ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಯೋಜನೆ ಹಾಗೂ ಆರೋಗ್ಯ ದಿನಾಚರಣೆಗಳ ಕುರಿತು ಮಾಧ್ಯಮದವರಿಗೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.


‘ಜಿಲ್ಲಾ ಮಟ್ಟದಲ್ಲಿ ಆರ್‌ಆರ್‌ಆರ್‌ ಮಾಡೆಲ್ ‌ಆಫ್ ಮಿಟಿಗೇಷನ್ ಮೆಟರ್ನಲ್ ಮೋರ್ಟಲಿಟಿ (ಎಂಎಂಎಂ) ಯೋಜನೆ ‌ಜಾರಿ ಮಾಡಲಾಗಿದೆ. ಗರ್ಭಿಣಿಗೆ ಉಂಟಾಗಿರುವ ಸಮಸ್ಯೆಯನ್ನು ಪುನರ್‌ ಪರಿಶೀಲನೆ ನಡೆಸುವುದು, ವಿಳಂಬ ತಡೆಯುವುದು ಹಾಗೂ ತ್ವರತಿಗತಿಯಲ್ಲಿ ಸ್ಪಂದಿಸುವ ವಿಧಾನ ಅನುಸರಿಸಲಾಗುತ್ತಿದೆ. ಸ್ವಲ್ಪ ತಡ ಮಾಡಿದ್ದರೆ ಸಾವು ಸಂಭವಿಸುತಿತ್ತು ಎನ್ನಲಾದ ಮೂರು ಪ್ರಕರಣಗಳಲ್ಲಿ ತಾಯಿಯನ್ನು ಉಳಿಸಿದ್ದೇವೆ’ ಎಂದು ಉದಾಹರಣೆ ಸಮೇತ ವಿವರಿಸಿದರು.


‘ಹಾಗೆಯೇ ಹಿಂದಿನ ಪ್ರಕರಣಗಳ ಡೆತ್‌ ಆಡಿಟ್ ಕೂಡ ಮಾಡಿದ್ದೇವೆ. ಏಳೆಂಟು ಪ್ರಕರಣಗಳಲ್ಲಿ ತಾಯಿಯನ್ನು ಉಳಿಸಿಕೊಳ್ಳಬಹುದಿತ್ತು ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ವಿಳಂಬವೇ ಹೆಚ್ಚಿನ ಪ್ರಕರಣಗಳಲ್ಲಿ ಸಾವಿಗೆ ಕಾರಣವಾಗಿದೆ’ ಎಂದರು.


‘ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೆಂದು ವೈದ್ಯರು ಖಾಸಗಿ ಕ್ಲಿನಿಕ್‌ಗೆ ಬರೆದು ಕೊಡುವುದು,‌ ತಮ್ಮ ಕ್ಲಿನಿಕ್ ಗೆ ಬರುವಂತೆ ಹೇಳುವುದು ಅಕ್ಷಮ್ಯ ಹಾಗೂ ಕಾನೂನು ಬಾಹಿರ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಈಚೆಗೆ ಕಳಪೆ ಗುಣಮಟ್ಟದ ಔಷಧ ಸಂಬಂಧ 70 ಸಾವಿರ ಬಾಟಲಿ ಸೀಜ್ ಮಾಡಿ ಗೋದಾಮಿನಲ್ಲಿ ಇಟ್ಟಿದ್ದೇವೆ. ಬೇರೆ ಹಣ ಬಳಕೆ‌‌ ಮಾಡಿ ಹೊಸ ಔಷಧ ತಂದಿದ್ದೇವೆ’ ಎಂದು ಮಾಹಿತಿ ನೀಡಿದರು.


ಆರ್‌ಸಿಎಚ್ ಅಧಿಕಾರಿ ಡಾ.ಚಾರಿಣಿ ಮಾತನಾಡಿ, ‘ಶಿಶು ಮರಣ ಪ್ರಮಾಣ ಹಾಗೂ ತಾಯಿ ಮರಣ ಪ್ರಮಾಣ ಕಡಿಮೆ‌ ಮಾಡುವುದು ನಮ್ಮ ಗುರಿ’ ಎಂದು ಹೇಳಿದರು.

ಕುಷ್ಠ ರೋಗ‌ ನಿವಾರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ‘ಮೆದುಳು ಆರೋಗ್ಯ ಸಂಬಂಧ ಪೈಲಟ್ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿ ಮಾಡಲಾಗಿದೆ. ನಿಮ್ಹಾನ್ಸ್ ಮೇಲಿನ ಒತ್ತಡ ಕಡಿಮೆ‌ ಮಾಡಲು ಈ ಯೋಜನೆ ಜಾರಿ ಮಾಡಲಾಗಿದೆ. ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯ ಒದಗಿಸಲಾಗಿದೆ‌. ಸಿಬ್ಬಂದಿ ಕೂಡ ಇದ್ದಾರೆ. ತಲೆನೋವು, ಪಾರ್ಶ್ವವಾಯು, ಡಿಮೆನ್ಸಿಯಾದ ಬಗ್ಗೆ‌ ಚಿಕಿತ್ಸೆ‌ ನೀಡಲಾಗುತ್ತದೆ‌. 10 ಹಾಸಿಗೆ ವ್ಯವಸ್ಥೆಯೂ ಇದೆ’ ಎಂದರು.

ಜಿಲ್ಲಾ ಸರ್ಜನ್‌ ಡಾ.ಜಗದೀಶ್ ಮಾತನಾಡಿ. ‘ಗೃಹ ಆರೋಗ್ಯ ಯೋಜನೆಯಡಿ ಶೇ 85ರಷ್ಟು ಮನೆಗಳನ್ನು ತಲುಪಿದ್ದೇವೆ. ಇದೊಂದು‌ ಪೈಲಟ್ ಯೋಜನೆ ಆಗಿದ್ದು, ತಪಾಸಣೆ ವೇಳೆ ಸಕ್ಕರೆ‌ ಕಾಯಿಲೆ ಅಧಿಕ‌ ಇರುವುದು ಪತ್ತೆಯಾಗಿದೆ. ಪ್ರತಿ ದಿನ ನಿಗಾ ಇಟ್ಟಿದ್ದೇವೆ. ಸೇವೆ ಸುಧಾರಣೆಗೆ ಕ್ರಮ ‌ವಹಿಸಿದ್ದೇವೆ’ ಎಂದರು. ‘ಹಕ್ಕಿ ಜ್ವರ ಸಂಬಂಧ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ‌ಕ್ರಮ ವಹಿಸಲಾಗಿದೆ. ಮೊಟ್ಟೆ, ಕೋಳಿ ಚೆನ್ನಾಗಿ ಬೇಯಿಸಿ ತಿಂದರೆ ಏನೂ ಸಮಸ್ಯೆ ಇಲ್ಲ’ ಎಂದು ಹೇಳಿದರು.


ಕುಟುಂಬ‌ ನಿಯಂತ್ರಣಾಧಿಕಾರಿ ಡಾ.ಚಂದನ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಡಾ.ಪ್ರಸನ್ನ ‌ಕುಮಾರ್, ಡಾ.ರವಿಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಪತ್ರಕರ್ತ ಕೆ.ಎಸ್.ಗಣೇಶ್, ವಾರ್ತಾ ಇಲಾಖೆಯ ಮಂಜೇಶ್‌, ಆರೋಗ್ಯ ಇಲಾಖೆಯ ರಾಜೇಶ್, ಆಂಜಿನಮ್ಮ ಹಾಗೂ ಪತ್ರಕರ್ತರು ಇದ್ದರು.

Post a Comment

0Comments

Post a Comment (0)