ಶ್ರೀ ಗುರುಭ್ಯೋ ನಮಃ ಪರಮ ಗುರುಭ್ಯೋನಮಃ ಶ್ರೀಮದಾನಂದ ತೀರ್ಥ ಭಗವತ್ ಪಾದಾಚಾರ್ಯ ಗುರುಭ್ಯೋನಮಃ
ಭಾದ್ರಪದ ಶುದ್ಧ ನವಮಿ ದಿನಾಂಕ 12.09.2024 ಗುರುವಾರ ಶ್ರೀ ಜಗನ್ನಾಥದಾಸರ ಆರಾಧನೆ.
ಅವರ ಬಗ್ಗೆ ಎರಡು ವಾಕ್ ಕುಸುಮಗಳನ್ನು ಸಮರ್ಪಿಸುವ ಪ್ರಯತ್ನ....
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹರಿದಾಸ ಸಾಹಿತ್ಯಕ್ಕೆ ಶ್ರೇಷ್ಠವಾದ ಸ್ಥಾನವಿದೆ. ಈ ಸಾಹಿತ್ಯ ಶ್ರೀ ಮದ್ವಾಚಾರ್ಯರ ಸಿದ್ಧಾಂತದ ರೂಪ. ಭಕ್ತಿ ಸಹಿತ ಕೀರ್ತನ ಸಾಹಿತ್ಯವೆಂದು ಕರೆಯಲಾಗಿದೆ ಇದು ಸಿದ್ಧಾಂತದ ಪ್ರಸಾರದ ಜೊತೆಗೆ ಸಂಸ್ಕೃತಿ ಸಾಹಿತ್ಯ ಸಂಗೀತ ಮುಂತಾದುಗಳನ್ನು ನಮಗೆ ವಿಶಿಷ್ಟವಾದ ಕೊಡುಗೆಯ ರೂಪದಲ್ಲಿ ಇತ್ತು ಸಮಾಜಕ್ಕೂ ಉಪಕಾರವಾಗಿದೆ. ಇಂತಹ ಸಾಹಿತ್ಯವನ್ನು ಪ್ರಸ್ತುತಪಡಿಸಿದ ಹರಿದಾಸರ ಪರಂಪರೆ ಇರುವುದು ನಮ್ಮ ಭಾಗ್ಯವಾಗಿದೆ. ದಾಸ ಚತುಷ್ಟಯರೆಂದು ಪ್ರಸಿದ್ಧವಾದವರಲ್ಲಿ ಒಬ್ಬರಾದ ಶ್ರೀ ಜಗನ್ನಾಥದಾಸರು ಉಭಯ ಶಾಸ್ತ್ರ ಪ್ರವೀಣರು. ಅವರ ಮೇರು ಕೃತಿಯಾದ ಹರಿಕಥಾಮೃತಸಾರ ಸರ್ವ ಮಾನ್ಯವಾಗಿದೆ. ಪ್ರಮೇಯಗಳ ವಿಶ್ವಕೋಶವೆನಿಸಿ ಸಿದ್ದಾಂತದ ಸಾರ ಸರ್ವಸ್ವವೆನಿಸಿದ ಅಪೂರ್ವ ಕೃತಿಯಾಗಿದೆ. ಇನ್ನು ಶ್ರೀ ಜಗನ್ನಾಥದಾಸರ ಕಿರು ಪರಿಚಯ.
ಶ್ರೀ ಜಗನ್ನಾಥದಾಸರು ಪ್ರಸಿದ್ಧ ಹರಿದಾಸರಲ್ಲಿ ಕೊನೆಯವರು ಇವರ ಜನ್ಮಸ್ಥಳ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬ್ಯಾಗವಟ ಎಂಬ ಗ್ರಾಮ. ತಂದೆ ನರಸಿಂಹದಾಸರು ಎಂದು ಪ್ರಸಿದ್ಧರಾದ ನರಸಪ್ಪ. ತಾಯಿ ಲಕ್ಷಮ್ಮ. ಗೋತ್ರ ಹರಿತಸ. ಯಜುರ್ವೇದ ಶಾಖಾ ಮನೆತನ. ಬಹುಕಾಲ ತಿರುಪತಿಯ ಶ್ರೀನಿವಾಸನನ್ನು ಸೇವಿಸಿದ ಫಲವಾಗಿ ಜನಿಸಿದ ಇವರಿಗೆ ತಂದೆ ತಾಯಿಗಳು ಇಟ್ಟ ಹೆಸರು ಶ್ರೀನಿವಾಸ. ಶ್ರೀನಿವಾಸನು ಆಶು ಕವಿಯು ಆಗಿದ್ದ. ಯವ್ವನದಲ್ಲಿ ವಿವಿಧ ಶಾಸ್ತ್ರಗಳ ಪಾಂಡಿತ್ಯ ಗಳಿಸಿ ಶ್ರೀನಿವಾಸಚಾರ್ಯರಾದರು. ಶ್ರೀ ರಾಘವೇಂದ್ರ ಮಠದ ಪರಂಪರೆಗೆ ಸೇರಿದ ವರದೇಂದ್ರ ತೀರ್ಥರು ಇವರ ವಿದ್ಯಾ ಗುರುಗಳು. ಆಗ ಉತ್ತರಾದಿ ಮಠಾಧೀಶರಾದ ಸತ್ಯಬೋಧ ತೀರ್ಥರಿಗೂ ತುಂಬಾ ಪ್ರಿಯರಾಗಿದ್ದರು. ತುಂಬು ತಾರುಣ್ಯದಲ್ಲಿ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ಕನ್ನಡ ದಾಸ ಸಾಹಿತ್ಯವೆಂದರೆ ಇವರಿಗೆ ಅಷ್ಟು ಸೇರುತ್ತಿರಲಿಲ್ಲ. ಪಾಂಡಿತ್ಯದ ಬೆಳಕಿನಲ್ಲಿ ಇದ್ದ ಇವರಿಗೆ ಪ್ರಾರಬ್ಧ ವಶಾದ್ ಶ್ರೀವಿಜಯ ದಾಸರಿಗೆ ಮಾಡಿದ ಅಪಚಾರ ಫಲವಾಗಿ ಭಯಂಕರ ಉದರ ಶೂಲೆ ಉಂಟಾಯಿತು. ಸೋತ್ತಮರಿಗೆ ಅಪಚಾರ ಮಾಡಿದ ಫಲವಾಗಿ ಭಯಂಕರವಾಗಿ ವ್ಯಾಧಿ ಉಲ್ಬಣಿಸಿತು. ಶ್ರೀ ರಾಘವೇಂದ್ರ ಸ್ವಾಮಿಗಳ ನಿರಂತರ ಸೇವೆ ಮಾಡಿದ ಇವರಿಗೆ ರಾಯರು ಸ್ವಪ್ನದಲ್ಲಿ ಬಂದು ನಿನ್ನಿಂದ ಸೋತ್ತಮರ ದ್ರೋಹವಾಗಿದೆ. ಅದರ ಫಲವಾಗಿ ನಿನಗೆ ಈ ರೋಗ ಬಂದಿದೆ ನೀನು ಅವರನ್ನೇ ಶರಣು ಹೋಗಬೇಕು. ಅದು ಬಿಟ್ಟು ಬೇರೆ ಯಾವ ಮಾರ್ಗವೂ ಇಲ್ಲ ಎಂದು ಸೂಚಿಸಿದಾಗ ವಿಜಯರಾಯರ ಕ್ಷಮೆ ಯಾಚನೆ ಮಾಡಿದರು. ಅವರು ದಿವ್ಯ ಜ್ಞಾನದಿಂದ ಇವರಿಗೆ ಆಯುಷ್ಯ ಕಮ್ಮಿ ಇದೆ ಎಂದು ತಿಳಿದು ಅವರ ಶಿಷ್ಯರಾದ ಶ್ರೀ ಗೋಪಾಲದಾಸರಿಂದ 40 ವರ್ಷ ಆಯುರ್ದಾನ ಮಾಡಿಸಿದರು. ಅವರು ನೀಡಿದ ಅರ್ಧಯುಷ್ಯದಿಂದ ಪೂರ್ಣವಾದ ಆಯುಷ್ಯ ಪ್ರಾಪ್ತವಾಯಿತು. ಮುಂದೆ ತಾವು ಹರಿದಾಸರಾಗುವ ಬಯಕೆ ಹೊಂದಿ ಗುರುಗಳ ಆದೇಶದಂತೆ ಪಂಡರಾಪುರಕ್ಕೆ ಪ್ರಯಾಣ ಮಾಡಿ, ಅಲ್ಲಿ ಚಂದ್ರಭಾಗ ನದಿಯಲ್ಲಿ ಮೀಯುವಾಗ ಜಗನ್ನಾಥ ವಿಠಲ ಎಂಬ ಅಂಕಿತ ಪ್ರಾಪ್ತಿಯಾಯಿತು. ಅಂದಿನಿಂದ ಜಗನ್ನಾಥದಾಸರು ಎಂದೇ ಖ್ಯಾತಿಯಾದರು ಮುಂದಿನ ಜೀವನವೆಲ್ಲ ಪಾಠ ಪ್ರವಚನ ಕೃತಿ ರಚನೆ ತೀರ್ಥಯಾತ್ರೆ, ಆರ್ತ ಜನರ ಉದ್ದಾರದ ಮೂಲಕ ತತ್ವ ಪ್ರಸಾರಕ್ಕೆ ಜೀವನವನ್ನು ಮುಡಿಪಾಗಿಟ್ಟರು. ರಂಗೋಲಿಯಲ್ಲಿ ಚಿತ್ರ ಬಿಡಿಸುವ ಕೌಶಲದಿಂದ ರಂಗನನ್ನು ಒಲಿಸಿಕೊಂಡು ರಂಗೋಲಿ ದಾಸರು ಎಂದು ಪ್ರಸಿದ್ಧಿ ಪಡೆದರು. ಇವರ ಸಮಕಾಲೀನ ಯತಿಗಳನ್ನು ನೋಡಿದರೆ ಇವರ ಜೀವನ ಎಷ್ಟು ಮಹತ್ವದಿಂದ ಕೂಡಿದೆ ಎಂದು ಅರ್ಥವಾಗುತ್ತದೆ. ಉತ್ತರಾದಿ ಮಠದ ಶ್ರೀ ಸತ್ಯಬೋಧ ತೀರ್ಥರು, ಶ್ರೀ ಸತ್ಯಸಂದತೀರ್ಥರು, ಶ್ರೀ ಸತ್ಯ ವರತೀರ್ಥರು, ಶ್ರೀ ಸತ್ಯಧರ್ಮ ತೀರ್ಥರು ಶ್ರೀ ರಾಘವೇಂದ್ರ ಮಠದ ಶ್ರೀ ವರದೇಂದ್ರತೀರ್ಥರು, ವಾಸುದೇವ ವಿಠಲಾಂಕಿತ ಶ್ರೀ ವ್ಯಾಸ ತತ್ವಜ್ಞರು, ಮತ್ತು ಭಾಗವತ ಸಾರೋದ್ಧಾರ ರಚಿಸಿದ ಶ್ರೀ ಮಾದನೂರು ವಿಷ್ಣು ತೀರ್ಥರು ಮೊದಲಾದ ಮಹನೀಯರ ಪ್ರೀತಿ ಮತ್ತು ಆದರಗಳಿಗೆ ಪಾತ್ರರಾದ ದಿವ್ಯ ಜೀವನ ಇವರದು. ತಿಮ್ಮಣ್ಣದಾಸರು ಮತ್ತು ದಾಮೋದರ ದಾಸರು ಎಂಬ ಪುತ್ರರು ಇವರಿಗೆ ಇದ್ದು ಅವರಿಬ್ಬರು ತಾರುಣ್ಯದಲ್ಲಿಯೇ ವಿಧಿವಶರಾದರು ಎಂಬ ಪ್ರತೀತಿ ಇದೆ.
ಇನ್ನು ಇವರ ಮಹಿಮೆಗಳು
ಒಬ್ಬ ಬಡ ಬ್ರಾಹ್ಮಣ ನಿತ್ಯ ಇವರನ್ನು ಸೇವಿಸುತ್ತಿದ್ದನು ಆದರೆ ಅವನು ಹಿಂದಿನ ಜನ್ಮದಲ್ಲಿ ಏನೂ ದಾನ ಮಾಡದ ಫಲವಾಗಿ ದರಿದ್ರನಾಗಿ ಜನಿಸಿದನು. ಇದನ್ನು ಅರಿತದಾಸರು ಅವನಲ್ಲಿದ್ದ ಒಂದು ತಂಬಿಗೆಯಲ್ಲಿ ಭಗವಂತನಿಗೆ ಪಾನಕ ಸಮರ್ಪಣೆ ಮಾಡಿಸಿ ಆ ತಂಬಿಗೆಯನ್ನು ದಾನವಾಗಿ ಕೊಡಿಸಿದರು. ದುರಿತ ಜನವನ ಕುಟಾರಿ ದುರ್ಜನ ಕುಲವೈರಿ ಎಂಬ ನರಸಿಂಹ ಸುಳಾದಿಯನ್ನು ರಚಿಸಿ ಅದರ ಪಾರಾಯಣ ಮಾಡಿಸಿ ಅವನನ್ನು ಶ್ರೀಮಂತನಾಗಿಸಿದರು. ಉಡುಪಿಯಲ್ಲಿ ಮೂಕನಿಗೆ ಮಾತು ಬರಸಿ ಅದನ್ನು ಪರೀಕ್ಷಿಸಲು ಯತ್ನಿಸಿದ ವಾಗ್ಮಿಯನ್ನು ಮೂಕನನ್ನಾಗಿಸಿದರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ನೇರ ಸಂಭಾಷಣೆ ಭಾಗ್ಯವನ್ನು ಹೊಂದಿದ್ದರು. ರಾಯರು ಪ್ರಹ್ಲಾದ ರಾಜರಾಗಿದ್ದಾಗ ಇವರು ಅವರ ತಮ್ಮಸಲ್ಹಾದನಾಗಿದ್ದರು.
ಇನ್ನು ಇವರ ಕೃತಿಗಳು
ಶ್ರೀ ಹರಿಕಥಾಮೃತಸಾರ ಇವರ ಮೇರು ಕೃತಿಯಾಗಿದೆ. ಇದಲ್ಲದೆ ತತ್ವ ಸುವ್ವಾಲಿ, ಇನ್ನೂರಕ್ಕು ಹೆಚ್ಚು ಕೀರ್ತನೆಗಳು, ನೂರಾರು ಸುಳಾಧಿಗಳನ್ನು ರಚಿಸಿದ್ದಾರೆ. ಶ್ರೀಪಾದರಾಜರ ಮಧ್ವನಾಮ ಹಾಗೂ ವರದೇಂದ್ರ ತೀರ್ಥ ವಿರಚಿತ ಕನ್ನಡ ತಂತ್ರ ಸಾರ ಗಳಿಗೆ ಫಲಸ್ತುತಿಗಳನ್ನು ರಚಿಸಿದ್ದಾರೆ. ನಾವು ಹೇಗೆ ಜೀವಿಸಬೇಕೆಂಬ ವಿಷಯವನ್ನು ಫಲವಿದು ಬಾಳುವುದಕ್ಕೆ ಎಂಬ ಪದದಲ್ಲಿ ಮನೋಜ್ಞವಾಗಿ ತಿಳಿಸಿದ್ದಾರೆ. ಇದನ್ನು ಅಣು ಹರಿಕಥಾಮೃತಸಾರ ಎಂದು ಕೂಡ ಕರೆಯಲಾಗುತ್ತದೆ.
ಹರಿಕಥಾಮೃತ ಸಾರವನ್ನು ಭಾಮಿನಿ ಷಟ್ಪದಿ ಯಲ್ಲಿ ರಚಿಸಿದ್ದಾರೆ. ಇದರಲ್ಲಿ 32 ಸಂದಿಗಳು, 986 ಪದ್ಯಗಳು ಇದೆ ಹರಿಕಥಾಮೃತಸಾರ ಎಂಬ ಹೆಸರೇ ಸೂಚಿಸುವಂತೆ ಇದು ಶ್ರೀಹರಿಯ ಅನಂತ ಸಕಲ ದೋಷ ದೂರತ್ವವನ್ನು ಪ್ರಧಾನವಾಗಿ ನಿರೂಪಿಸುತ್ತಾ ಅದರ ಅಂಗವಾಗಿ ಜಗತ್ ಸತ್ಯ ಪಂಚಭೇಧ, ದೇವತೆಗಳ ತಾರತಮ್ಯ, ಸಾಧನೆಗಳ ವಿವರ, ಉಪಾಸನೆಯ ರೀತಿ, ಭಕ್ತಿಯ ಮಹತ್ವ ಮೊದಲಾದ ತತ್ವಗಳನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ. 5 ಪದ್ಯಗಳ ಅನು ಕ್ರಮಣಿಕಾ ತಾರತಮ್ಯ ಸಂಧಿ ಅತಿ ಚಿಕ್ಕ ಸಂಧಿ ಆದರೆ 63 ಪದ್ಯಗಳ ಕಲ್ಪ ಸಾಧನ ಸಂಧಿ ಅತಿ ದೊಡ್ಡ ಸಂಧಿಯಾಗಿದೆ. ಪ್ರತಿ ಪದದಲ್ಲೂ ಭಗವಂತನ ಬಗ್ಗೆ ಭಕ್ತಿ ತುಂಬಿ ತುಳುಕುತ್ತದೆ. ಭಗವಂತನ ಕಾರುಣ್ಯವನ್ನು ಪರಿಪರಿಯಾಗಿ ನಿರೂಪಿಸಿದ್ದಾರೆ. ಭಗವಂತನ ಮಹಿಮೆಯನ್ನು ಭಕ್ತರಿಗೆ ತಲುಪಿಸುವ ಕಳಕಳಿಯಂತೂ ಎಂಥವನಿಗೂ ಇವರ ಬಗ್ಗೆ ಆತ್ಮೀಯ ಭಾವ ಮೂಡಿಸುತ್ತದೆ. ಅಲ್ಲಲ್ಲಿ ಸಂಸ್ಕೃತ ಭೂಯಿಷ್ಟ ಶೈಲಿ ಇದ್ದರೂ ಅದು ಕನ್ನಡಕ್ಕೆ ಹೊಂದಿಕೊಳ್ಳುವಂತೆ ಎಚ್ಚರವಹಿಸಿದ್ದಾರೆ. ಇದು ಅವರ ಅದ್ಭುತ ಕೌಶಲ್ಯಕ್ಕೆ ಉದಾಹರಣೆಯಾಗಿದೆ. ಇದು ದ್ವೈತ ವೇದಾಂತದ ಪ್ರಮೇಯ ಕೋಶವಾಗಿದೆ. ವಿದ್ವಾಂಸರಿಗೂ ಉಪಕಾರವಾದ ವೇದಾಂತದ ಕೈಪಿಡಿಯಾಗಿದೆ. ವ್ಯಾಸ ಸಾಹಿತ್ಯದ ಆವಿಷ್ಕಾರವೇ ಕನ್ನಡದ ದಾಸ ಸಾಹಿತ್ಯದ ಹರಿಕಥಾಮೃತಸಾರ. ಮಂಗಳಾಚಾರಣ ಸಂಧಿಯಲ್ಲಿ ಅನಿಷ್ಠ ನಿವೃತ್ತಿ ಪೂರ್ವಕ ಇಷ್ಟ ಪ್ರಾಪ್ತಿಗೆ ಅವರ ಕುಲದೇವರಾದ ನರಸಿಂಹ ದೇವರನ್ನು ಶ್ರೀ ರಮಣಕರ ಕಮಲ ಪೂಜಿತ .....ಕೈವಲ್ಯ ದಾಯಕ ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ ಎಂದು ಪ್ರಾರ್ಥಿಸಿದ್ದಾರೆ. ಪರಮಾತ್ಮನ ಕಥೆ ಎಂತಹದು ಎಂದರೆ ಅದನ್ನು ಶ್ರವಣ ಮಾಡಿದರೆ ಮನಸ್ಸಿಗೆ ಆನಂದವನ್ನು ಉಂಟು ಮಾಡಿ ಭವಸಾಗರವನ್ನು ದಾಟಿಸುತ್ತದೆ. ಇದನ್ನೇ ಶ್ರವಣಮನ ಕಾನಂದ ನೀವು ಭವಜನಿತ ದುಃಖಗಳ ಕಳೆಯುವುದು ಎಂದಿದ್ದಾರೆ. ನಮಗೆ ಇಹ ಮತ್ತು ಪರಂಗಳಲ್ಲಿ ವಿವಿಧ ಭೋಗಗಳನ್ನು ಕೊಡುತ್ತದೆ. ಆದರೆ ಇದನ್ನು ಭಕ್ತಿಯಿಂದ ಕೇಳಬೇಕು ಹೇಳಬೇಕು. ಭಕ್ತರು ಮನವನಿತ್ತರೆ ತನ್ನನೀವನು ಎಂದಿದ್ದಾರೆ. ಕಾಯ, ವಾಚ ಸೇವಿಸಿ ಮತ್ತು ಮನಸ್ಸನ್ನು ಶ್ರೀಹರಿಯಲ್ಲಕೇಂದ್ರೀಕರಿಸಿದಲ್ಲಿ ತನ್ನ ಬಿಂಬರೂಪವನ್ನೇ ತೋರಿ ಅನುಗ್ರಹಿಸುವ. ಹರಿ ಹರಿ ಎಂಬ ಎರಡಕ್ಷರ ನುಡಿದ ಮಾತ್ರದಲ್ಲಿ ದುರಿತಗಳಿರದೇ ಪೋಪುದು ಎಂದಿದ್ದಾರೆ. ಹತ್ತಿರಾಶಿಗೆ ಒಂದು ಕಿಡಿ ಬೆಂಕಿ ಬಿದ್ದರೂ ಧಗ್ಗ ನೆ ಉರಿದು ಬೂದಿಯಾಗುವಂತೆ ಹರಿಯನ್ನು ಸ್ಮರಿಸಿದವರ ಪಾಪ ರಾಶಿಯು ತಕ್ಷಣವೇ ನಾಶ ಹೊಂದುವುದು. 'ಪುನಃ ಪುನಃ ಸುಜ್ಞಾನಿಗಳ ಸಹವಾಸ ಮಾಡು ಕುಮಾನವರ ಕೂಡಾಡದಿರು ಲೌಕಿಕಕೆ ಮರುಳಾಗಿ ಸಜ್ಜನರ ಸಹವಾಸದಲ್ಲಿ ಸದಾ ಇರುವವನಾಗು' ಎಂಬ ಪದ್ಯದಲ್ಲಿ ಎಂದಿಗೂ ಕೆಟ್ಟ ಮನೋಜರ ಸಹವಾಸ ಮಾಡದಿರು ಎಂದು ಭೋದಿಸುತ್ತಾ ಜೀವನು ಅಸ್ವತಂತ್ರ ಪರಮಾತ್ಮನೊಬ್ಬನೇ ಸ್ವತಂತ್ರ. ಅವನ ಸ್ವಾತಂತ್ರ್ಯವನ್ನು ಚಿಂತಿಸುತ್ತಾ ಕಾಲ ಕಳೆಯುತ್ತಾ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಜಗನ್ನಾಥದಾಸರ ಅಂತರ್ಯಾಮಿಯಾದ ಜಗನ್ನಾಥ ವಿಠಲನಲ್ಲಿ ಎರಡು ವಾಕ್ ಕುಸುಮಗಳನ್ನು ಸಮರ್ಪಿಸುತ್ತಿದ್ದೇನೆ.
ಶ್ರೀ ಕೃಷ್ಣಾರ್ಪಣಮಸ್ತು
ಹೇಮಾ ಶ್ರೀಧರಾಚಾರ್
ಪ್ರಕಾಶನಗರ.