ಕೊಡಗಿನಲ್ಲಿಂದು "ಕಕ್ಕಡ - 18ರ ಸಂಭ್ರಮ..!

VK NEWS
By -
0

ಪ್ರತಿ ವರ್ಷ ಆಗಸ್ಟ್ 3 ರಂದು ಬರುವ ಕಕ್ಕಡ 18 ರಂದು, ಪ್ರಕೃತಿಯ ಒಂದು ವಿಶೇಷ ಕೊಡುಗೆ ಆಗಿರುವ ಔಷಧೀಯಗುಣಗಳಿರುವ ಮದ್ ತೊಪ್ಪು ಅರ್ಥಾತ್ ಮದ್ದು ಸೊಪ್ಪಿನಿಂದ ವಿಶೇಷ ಪಾಯಸ ಮತ್ತು ಪುಟ್ ತಯಾರಿಸಿ ಸೇವಿಸುವ ಪದ್ಧತಿ ಹಿಂದಿನಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಕಕ್ಕಡ 18ರ ಈ ದಿನ ಬೆಳಿಗ್ಗೆ ಮದ್ದು ಸೊಪ್ಪನ್ನು ಕುಯಿದು ತಂದು ತೊಳೆದು, ಇದನ್ನು ನೀರು ಹಾಕಿ ಚೆನ್ನಾಗಿ ಕುದಿಸಿ ಸೊಪ್ಪಿನ ರಸ ತೆಗೆಯುತ್ತಾರೆ. ಹಸಿರು ಎಲೆಗಳು ರಸ ಬಿಟ್ಟಾಗ ಗಾಢ ನೇರಳೆ ಬಣ್ಣ ಹೊಂದಿರುತ್ತದೆ. ಈ ರಸಕ್ಕೆ ಅಕ್ಕಿ ಬೆಲ್ಲ ಏಲಕ್ಕಿ ಹಾಕಿ ಪಾಯಸ ಮಾಡುತ್ತಾರೆ. ಅಲ್ಲದೆ ಈ 

ರಸದಿಂದ ಪುಟ್ (ಡೆಸರ್ಟ್)ಮಾಡುತ್ತಾರೆ. ಅದು ಸಪ್ಪೆಯಾಗಿದ್ದು, ಅದಕ್ಕೆ ಬೆಲ್ಲ, ತೆಂಗಿನ ತುರಿ, ಏಲಕ್ಕಿ ಹಾಕಿ ಕಾಯಿಸಿದ ರಸದೊಂದಿಗೆ ಸವಿಯುವುದು ಪದ್ಧತಿ. ಒಳ್ಳೆಯ ಸುವಾಸನೆ ಮತ್ತು ರುಚಿ ಹೊಂದಿರುವ ಈ ಎರಡೂ ಖಾದ್ಯಗಳ ಸೇವನೆ ಅತ್ಯಂತ ಆರೋಗ್ಯಕರ.ಏಕೆಂದರೆ ಈ ಸೊಪ್ಪಿನಲ್ಲಿ ಪ್ರತಿ ದಿನದಂತೆ ಒಂದೊಂದು ಔಷಧಿಯ ಗುಣಗಳು ಸೇರಿ 18 ರೀತಿಯ ಔಷಧಿ ಸೇರಿರುತ್ತದೆ ಎಂದು ಇದನ್ನು ಪ್ರತಿಯೊಬ್ಬರೂ ಸೇವಿಸಿಯೇ ಸೇವಿಸುತ್ತಾರೆ.

ಕೊಡಗು ಸೇರಿದಂತೆ, ದಕ್ಷಿಣ ಕನ್ನಡ, ವೈನಾಡು, ಪೂರ್ವ ನೀಲಗಿರಿ, ದಕ್ಷಿಣ ಮಲಬಾರ್ ಬೆಟ್ಟ ಪ್ರದೇಶಗಳಲ್ಲಿ ಈ ಮದ್ದು ಸೊಪ್ಪನ್ನು ಸೇವಿಸುವ ಪದ್ಧತಿ ಇದೆ.

ಇದು ಬರೀ ಕಾಗಕ್ಕ ಗೂಬಕ್ಕನ ಕತೆಯಲ್ಲ. ಇದರಲ್ಲಿ ಔಷಧಿಯ ಗುಣಗಳಿವೆ ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಈ ಮದ್ದು ಸೊಪ್ಪಿನ ವೈಜ್ಞಾನಿಕ ಹೆಸರು ಜಸ್ಟೀಸಿಯ ವೈನಾಡೆನ್ಸಿಸ್ (Justicia wynadensis).ಇದು ಆಕಾಂತೇಸಿಯ ಕುಟುಂಬಕ್ಕೆ ಸೇರಿದ ಒಂದು ಪ್ರಬೇಧ.

ಈ ಸೊಪ್ಪು Anty ಬ್ಯಾಕ್ಟೀರಿಯಲ್,Anty ಇನ್ ಫ್ಲಮೆಟರಿ 

Anty ಫಂಗಲ್,Anty ಕ್ಯಾನ್ಸರ್,Anty ಡಯಾಬಿಟಿಕ್ ಆಗಿದ್ದು, ಇದರಲ್ಲಿ ಪಾಲಿಫೆನಾಲ್ಸ್ ಮತ್ತು ಫ್ಲೆವೆನಾಯ್ಡ್ಸ್ ಇವೆ. ಇದು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನದಲ್ಲಿಡುತ್ತದೆ. ಚರ್ಮದ ರಕ್ಷಣೆ ಮಾಡುತ್ತದೆ.

ಆಸ್ತಮಾವನ್ನು ನಿಯoತ್ರಣದಲ್ಲಿಡುತ್ತದೆ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ನಮ್ಮ ಪೂರ್ವಜರು ವಿದ್ಯಾವಂತರಲ್ಲದಿದ್ದರೂ ಅತ್ಯಂತ ಬುದ್ದಿವಂತರಾಗಿದ್ದವರು. ಪ್ರಕೃತಿಯನ್ನು ದೇವರಿಗಿಂತ ಹೆಚ್ಚಾಗಿ ಪೂಜಿಸಿ, ಆರಾಧಿಸುತ್ತಿದ್ದವರು. ಹಾಗಾಗಿ ಪ್ರಕೃತಿಯಲ್ಲಿ ದೊರೆಯುವ ಎಲೆ ,ಗಿಡ, ಮರ,ಬಳ್ಳಿಗಳ ಬಗ್ಗೆ ಅವುಗಳಲ್ಲಿರುವ ಔಷಧಿಯ ಗುಣಗಳ ಬಗ್ಗೆ ತಿಳಿದು ಕೊಂಡು ಅದನ್ನು ಕಾಲ ಕಾಲಕ್ಕೆ ಸೇವಿಸುತ್ತಾ, ಮೈಮುರಿದು ದುಡಿಯುತ್ತಾ, ಅತಿಯಾದ ನಿರೀಕ್ಷೆ, ದುರಾಸೆ ಇಟ್ಟುಕೊಳ್ಳದೆ ಅತ್ಯಂತ ಆರೋಗ್ಯವಂತರಾಗಿ, ಆಯುಷ್ಯವಂತರಾಗಿ ಜೀವಿಸಿದವರು. ಪ್ರಕೃತಿಯನ್ನು ಪೂಜಿಸುತ್ತಾ ರಕ್ಷಿಸುತ್ತ ಇದ್ದುದರಿಂದ, ಪ್ರಕೃತಿಯು ಎಂದೂ ಅವರ ಮೇಲೆ ಮುನಿಸು ತೋರಿಸಲಿಲ್ಲ. ಆದರೆ ಇಂದು...???

ನಮ್ಮ ಎಲ್ಲಾ ಪದ್ಧತಿ, ಆಚಾರ -ವಿಚಾರಗಳಿಗೆ, ಅದರದ್ದೇ ಆದ ಮಹತ್ವವಿದ್ದು, ವೈಜ್ಞಾನಿಕವಾಗಿಯೂ ಅವು ಸಾಬೀತಾಗಿದೆ.ಆದರೆ ಇಂದಿನ so called Civilized Society, ನಮ್ಮ ಪದ್ಧತಿ ಪರಂಪರೆ ಆಚಾರ ವಿಚಾರಗಳನ್ನು  ಮರೆಯುತ್ತಿರುವುದು, ಅಸಡ್ಡೆಯಾಗಿ ನೋಡುತ್ತಿರುವುದು ಅತ್ಯಂತ ಖೇದಕರ..!

-ಬೋಪಯ್ಯ ಚೋವಂಡ.

Post a Comment

0Comments

Post a Comment (0)