ಮುಖ್ಯಮಂತ್ರಿ ಸಲಹೆಗಾರರನ್ನು ಅನರ್ಹತೆಯಿಂದ ರಕ್ಷಿಸುವ ಮಸೂದೆ ಅಂಗೀಕಾರ

VK NEWS
By -
0

ಬೆಂಗಳೂರು: ಶಾಸಕರು ಲಾಭದಾಯಕ ಹುದ್ದೆ ಹೊಂದಿದ ಕಾರಣಕ್ಕೆ ಅನರ್ಹರಾಗದಂತೆ ತಡೆಯುವ ಉದ್ದೇಶದಿಂದ ಮಂಡಿಸಿದ 'ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ–2024 ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸದಸ್ಯರು ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನು ಸಚಿವ ಎಚ್.ಕೆ.ಪಾಟೀಲ ಮಸೂದೆಗೆ ಅಂಗೀಕಾರ ಕೋರುತ್ತಿದ್ದಂತೆ, "ಇದು ಅನರ್ಹತಾ ನಿವಾರಣಾ ಅಲ್ಲ, ಅನರ್ಹರಿಗೆ ಅರ್ಹತೆ ಕೊಡುವ ಮಸೂದೆ" ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ವ್ಯಂಗ್ಯವಾಡಿದರು. 

ಹೆಚ್ಚಿನ ಶಾಸಕರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಉದ್ದೇಶದಿಂದ ಈ ಮಸೂದೆ ತರಲಾಗಿದೆ. ಹೆಚ್ಚಿನ ಸಂಬಳ, ಸಾರಿಗೆ ಭತ್ಯೆ ನೀಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳಲಿದೆ' ಎಂದು ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ನೀವು ಅವರನ್ನು ಸಲಹೆಗಾರರಾಗಿ ನೇಮಕ ಮಾಡಿ. ಆದರೆ ಅವರಿಗೆ ಸಂಪುಟ ದರ್ಜೆ ಕೊಡಬೇಡಿ. 40– 45 ವರ್ಷಗಳ ರಾಜಕೀಯ ಅನುಭವ ಹೊಂದಿರುವ, 14 ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಸಲಹೆಗಾರರ ಅಗತ್ಯ ಇದೆಯೇ ಎಂದು ಪ್ರಶ್ನಿಸಿದರು.

ತೀವ್ರ ವಿರೋಧ ವ್ಯಕ್ತಪಡಿಸಿದ ಶಾಸಕ ಸುನೀಲ್ ಕುಮಾರ್, ಪ್ರತಿಪಕ್ಷದಲ್ಲಿದ್ದಾಗ ದುಂದು ವೆಚ್ಚಕ್ಕೆ ಕಡಿವಾಣಕ್ಕೆ ಸಲಹೆ ಕೊಟ್ಟಿದ್ದರು. ಈಗ ಆರ್ಥಿಕ ಸಲಹೆಗಾರರು, ರಾಜಕೀಯ ಸಲಹೆಗಾರರನ್ನು ನೇಮಕ ಮಾಡುತ್ತಿದ್ದಾರೆ. ಇವು ದುಂದು ವೆಚ್ಚದ ಭಾಗವಲ್ಲವೇ. ಅವರಿಗೆ ಕಾರು, ಮನೆ ಸೌಲಭ್ಯ ಕೊಡಬೇಕಾಗುತ್ತದೆ. ಇದು ದುಂದು ವೆಚ್ಚವಲ್ಲವೇ? ಎಂದು ಟೀಕಿಸಿದರು.

 ವಿಧಾನಸಭೆ ಅಥವಾ ವಿಧಾನ ಪರಿಷತ್ನ ಸದಸ್ಯರಾಗಿರುವವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ–1 ಮತ್ತು ಕಾರ್ಯದರ್ಶಿ–2, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ, ಮುಖ್ಯಮಂತ್ರಿಯ ಸಲಹೆಗಾರ (ನೀತಿ ಮತ್ತು ಯೋಜನೆ) ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷರ ಹುದ್ದೆಗೆ ನೇಮಕಗೊಳ್ಳಲು ಅನರ್ಹರಾಗುವುದರಿಂದ ವಿನಾಯಿತಿ ನೀಡಲು ಈ ಮಸೂದೆಯನ್ನು ಮಂಡಿಸಲಾಗಿದೆ.

Post a Comment

0Comments

Post a Comment (0)