ಗೌರಿ ಲಂಕೇಶ್ ಹತ್ಯೆ ಕೇಸ್: ಮತ್ತೆ ಇಬ್ಬರು ಆರೋಪಿಗಳಿಗೆ ಜಾಮೀನು

VK NEWS
By -
0


 ಬೆಂಗಳೂರು, ಜುಲೈ 24: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ವಾಸುದೇವ ಭಗವಾನ್ ಮತ್ತು ಅಮಿತ್ ಬದ್ದಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಇತ್ತೀಚೆಗೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಎನ್. ಮೋಹನ್ ನಾಯಕ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹಾಗಾಗಿ ಕೊಲೆ ಸಂಚು ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಹಲವು ವರ್ಷಗಳಿಂದ ಜೈಲಿನಲ್ಲೇ ಕೊಳೆಯುತ್ತಿದ್ದ ಮೋಹನ್ ಕೊನೆಗೂ ಜಾಮೀನಿನ ಮೇಲೆ ಹೊರಬರುವಂತಾಗಿದೆ. ಇಡೀ ಪ್ರಕರಣದಲ್ಲಿ ಜಾಮೀನು ಪಡೆದ ಮೊದಲ ಆರೋಪಿ ಮೋಹನ್ ನಾಯಕ್.

ವಾಸುದೇವ ಭಗವಾನ್ ಮತ್ತು ಅಮಿತ್ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ. ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತು.
ಅರ್ಜಿದಾರರ ಪರ ಹಿರಿಯ ವಕೀಲರು, "ಅರ್ಜಿದಾರರ ವಿರುದ್ಧ ಬೈಕ್ ಕಳವು ಮಾಡಿ ಅದನ್ನು ಕೃತ್ಯಕ್ಕೆ ಬಳಸಿದ ಆರೋಪ ಹೊರಿಸಲಾಗಿದೆ. ಆದರೆ, ಹತ್ಯೆ ನಡೆದ ಮೂರು ವರ್ಷಗಳ ನಂತರ ಬೈಕ್ ಕಳವು ಪ್ರಕರಣ ದಾಖಲಿಸಲಾಗಿದೆ ಮತ್ತು ಈಗಾಗಲೇ ಈ ಆರೋಪದ ಪ್ರಕರಣ ಲೋಕ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು ಇಬ್ಬರೂ ಆರೋಪಿಗಳು ಖುಲಾಸೆಯಾಗಿದ್ದಾರೆ" ಎಂದು ವಿವರಿಸಿದರು.

"ಕಳೆದ ಆರೂವರೆ ವರ್ಷಗಳಿಂದ ಈ ಅರ್ಜಿದಾರರ ವಿಚಾರಣೆ ನಡೆದಿಲ್ಲ. ಒಟ್ಟು 138 ಸಾಕ್ಷಿಗಳಲ್ಲಿ ಈತನಕ ಕೇವಲ 10 ಸಾಕ್ಷಿಗಳನ್ನು ಮಾತ್ರವೇ ವಿಚಾರಣೆ ನಡೆಸಲಾಗಿದ್ದು ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕು" ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿತು.
ಆರೋಪಿಯು 1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಇದೇ ಮಾದರಿಯ ಅಪರಾಧ ಪ್ರಕರಣದಲ್ಲಿ ಭಾಗಿಯಾಗಬಾರದು ಎಂದು ಜಾಮೀನು ಮಂಜೂರಾತಿಗೆ ನ್ಯಾಯಾಲಯ ಷರತ್ತು ವಿಧಿಸಿದೆ.

Post a Comment

0Comments

Post a Comment (0)