‘ಡಿಜಿಟಲ್ ಪಾವತಿ ನಿಮ್ಮಲ್ಲಿ ಯಾಕಿಲ್ಲ?' - ಬೆಸ್ಕಾಂಗೆ ಹೈಕೋರ್ಟ್ ತರಾಟೆ

VK NEWS
By -
0


 ಬೆಂಗಳೂರು: ವಿದ್ಯುತ್ ಸರಬರಾಜು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ಹಾಗೂ ಪ್ರಿಪೇಯ್ಡ್ ಮೀಟರ್ ಕೊಡಲು ನಿರಾಕರಿಸಿದ್ದ ಬೆಸ್ಕಾಂ ಹೊಸಕೋಟೆ ವೃತ್ತದ ಎಂಜಿನಿಯರ್ ಆದೇಶ ರದ್ದು ಕೋರಿ ಹೊಸಕೋಟೆಯ ಸೀತಾಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿ ಎನ್‌ಎಸ್ ಸಂಜಯಗೌಡ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. 

 ವಾದ ಆಲಿಸಿದ ನ್ಯಾಯಪೀಠ, "ಇಡೀ ಜಗತ್ತು ಡಿಜಿಟಲೀಕರಣಕ್ಕೆ ತೆರೆದುಕೊಳ್ಳುತ್ತಿರುವ ಈ ಸಮಯದಲ್ಲಿ ನೀವು ಮಾತ್ರ ಆನ್‌ಲೈನ್ ಪಾವತಿ ಏಕೆ ಸ್ವೀಕರಿಸುತ್ತಿಲ್ಲ," ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್ 9ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಶ್ರೀಧರ್ ಪ್ರಭು, ''ವಾಣಿಜ್ಯ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದ್ದರಿಂದ ವಿದ್ಯುತ್ ಹೊರೆ ಸಾಮರ್ಥ್ಯ ಪ್ರಮಾಣ ಹೆಚ್ಚಿಸುವಂತೆ ಅರ್ಜಿದಾರರು ಸಹಾಯಕ ಎಕ್ಸಿಕ್ಯುಟಿವ್ ಎಂಜಿನಿಯರ್‌ಗೆ ಮನವಿ ಸಲ್ಲಿಸಿದ್ದರು. ಅದಕ್ಕೆ 16 ಸಾವಿರ ರೂ. ಪಾವತಿಸುವಂತೆ ಎಂಜಿನಿಯರ್ ತಿಳಿಸಿದ್ದರು. ಅದರಂತೆ ಅರ್ಜಿದಾರರು ನಗದು ಪಾವತಿಸಲು ಕಚೇರಿಗೆ ತೆರಳಿದಾಗ ಡಿಡಿ ಅಥವಾ ಆರ್‌ಟಿಜಿಎಸ್ ಮೂಲಕ ಹಣ ಪಾವತಿಸಲು ಸೂಚಿಸಲಾಗಿತ್ತು. ತಮಗೆ 65 ವರ್ಷ ವಯಸ್ಸಾಗಿದ್ದು, ಓಡಾಡಲು ಸಾಧ್ಯವಿಲ್ಲ, ಹಾಗಾಗಿ, ಆನ್‌ಲೈನ್ನ ಮೂಲಕ ಹಣ ಪಾವತಿಸುವುದಾಗಿ ಅರ್ಜಿದಾರರು ಹೇಳಿದ್ದರು. ಅದಕ್ಕೆ ಅವಕಾಶವಿಲ್ಲ ಎಂದು ಎಂಜಿನಿಯರ್ ತಿಳಿಸಿದ್ದರು. ಸಾಕಷ್ಟು ಬಾರಿ ಪ್ರಯತ್ನಪಟ್ಟು ನಿರಾಶರಾದ ಅರ್ಜಿದಾರರು ಅಂತಿಮವಾಗಿ ಪ್ರಿಪೇಯ್ಡ್ ಮೀಟರ್ ನೀಡುವಂತೆ ಮನವಿ ಮಾಡಿದರು. ಅದನ್ನು ಸಹ ಅಧಿಕಾರಿಗಳು ಒಪ್ಪಲಿಲ್ಲ," ಎಂದು ನ್ಯಾಯಾಲಯದ ಗಮನಸೆಳೆದರು.

''ಈ ಮನವಿ ಪರಿಗಣಿಸುವಂತೆ ಹಿಂದೆ ನ್ಯಾಯಾಲಯ ಹೇಳಿತ್ತು. ಆದರೂ ಅರ್ಜಿದಾರರ ಮನವಿ ಪರಿಗಣಿಸಲಾಗಿರಲಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಗಿತ್ತು. ಅಂತಿಮವಾಗಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದಾರೆ,'' ಎಂದರು.

ವಿದ್ಯುತ್ ಸರಬರಾಜು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಹಾಗೂ ಪ್ರಿಪೇಯ್ಡ್ ಮೀಟರ್ ಕೊಡಲು ನಿರಾಕರಿಸಿ ಬೆಸ್ಕಾಂ ಹೊಸಕೋಟೆ ವೃತ್ತದ ಎಂಜಿನಿಯರ್ 2024ರ ಮೇ 8ರಂದು ಹೊರಡಿಸಿದ ಆದೇಶ ರದ್ದುಪಡಿಸಬೇಕು. ಪ್ರಿಪೇಯ್ಡ್ ಮೀಟರ್ ನೀಡಬೇಕು, ಆರ್‌ಬಿಐ ಮಾರ್ಗಸೂಚಿ ಹಾಗೂ ಕೆಇಆರ್‌ಸಿ ನಿಯಮಗಳ ಪ್ರಕಾರ ಯುಪಿಐ, ಡಿಜಿಟಲ್ ಪಾವತಿ ಸ್ವೀಕರಿಸುವಂತೆ ಬೆಸ್ಕಾಂನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Post a Comment

0Comments

Post a Comment (0)