ರಾಯಚೂರು: ನಗರದ ದರ್ವೇಶ್ ಗ್ರೂಪ್ನ ಬಹುಕೋಟಿ ವಂಚನೆ ಪ್ರಕರಣದ ಸಿಐಡಿ ತನಿಖೆ ಚುರುಕುಗೊಂಡಿದೆ. ಪ್ರಮುಖ ಆರೋಪಿಗಳಾದ ಮೊಹಮ್ಮದ್ ಸುಜಾ, ಮಿಸ್ಕಿನ್, ಸೈಯದ್ ವಾಸಿಮ್ ಮನೆ ಮೇಲೆ ದಾಳಿ ಮಾಡಿ ತೀವ್ರ ಶೋಧ ಮಾಡಿದ್ದಾರೆ.
ಸಿಐಡಿ ಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ತನಿಖೆ ನಡೆದಿದ್ದು ಮೂವರು ಆರೋಪಿಗಳ ಮನೆಗಳಲ್ಲಿ ಶೋಧ ಕಾರ್ಯ ಮಾಡಲಾಗಿದೆ. ಪರಿಶೀಲನೆ ವೇಳೆ ಕೋಟ್ಯಂತರ ರೂ. ನಗದು ಹಣ ಪತ್ತೆಯಾಗಿದೆ. ರಾಯಚೂರಿನ ಎಲ್ಬಿಎಸ್ ನಗರದಲ್ಲಿರುವ ಆರೋಪಿ ವಾಸಿಮ್ ಮನೆಯಲ್ಲಿ ಹಣ ಪತ್ತೆಯಾಗಿದೆ. ಹೂಡಿಕೆದಾರರ ಬಾಂಡ್, ಅಕ್ರಮ ಕುರಿತ ಇತರ ದಾಖಲೆಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ಅಜರ್, ಬಬ್ಲೂ, ಮೋಸಿನ್ ಹಾಗೂ ಫಾರುಕ್ ಸೇರಿ ನಾಲ್ಕು ಜನರನ್ನ ಇಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ನ್ಯಾಯಾಲಯದಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಪುನಃ ಆರೋಪಿಗಳನ್ನ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.
ಸಿಐಡಿ ಎಸ್ಪಿ ಪುರುಷೋತ್ತಮ, ಡಿವೈಎಸ್ಪಿಗಳಾದ ಯತಿರಾಜ್, ಶ್ರೀನಿವಾಸ ನೇತೃತ್ವದ ಆರು ಜನ ಅಧಿಕಾರಿಗಳ ತಂಡ ದರ್ವೇಶ್ ಗ್ರೂಪ್ನ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನ ನಡೆಸುತ್ತಿದೆ.