ಬೆಂಗಳೂರು, ಜುಲೈ 29: ರಾಜ್ಯದಲ್ಲಿ 1,16,51,209 ಬಿಪಿಎಲ್, 10,83,977 ಅಂತ್ಯೋದಯ ಮತ್ತು 24,18,458 ಎಪಿಎಲ್ ಕಾರ್ಡ್ಗಳಿವೆ. ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದನ್ನು ರದ್ದುಗೊಳಿಸಿ, ಎಪಿಎಲ್ ವ್ಯಾಪ್ತಿಗೆ ಸೇರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ಆಗುತ್ತಿದೆ. ಆದರೆ ಬಿಪಿಎಲ್ ಕಾರ್ಡ್ ಪಡೆಯಲು ಈ ಹಿಂದೆ ನಿಗದಿ ಮಾಡಿರುವ ಮಾನದಂಡಗಳನ್ನು ಬದಲಾವಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.
ಸಧ್ಯ ನಿಗದಿ ಮಾಡಿರುವ ಮಾನದಂಡಗಳು ಬದಲಾದರೆ ಲಕ್ಷಾಂತರ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಆತಂಕ ಶುರು ವಾಗಿದೆ. ಒಂದು ವೇಳೆ ಕಾರ್ಡ್ ರದ್ದುಗೊಂಡರೆ ಮತ್ತೆ ಅದನ್ನು ಮಾಡಿಸಿಕೊಳ್ಳಲು ದಾಖಲೆಗಳನ್ನು ಹಿಡಿದಲು ಅಲೆದಾಟ ನಡೆಸಬೇಕಾಗುತ್ತದೆ ಎಂಬುದು ಜನರ ಚಿಂತೆ. ಆದ್ದರಿಂದ ಕಾರ್ಡ್ ಪಡೆಯಲು ಇರುವ ಮಾನದಂಡವನ್ನು ಪರಿಷ್ಕರಣೆ ಮಾಡಿ ಎಂದು ಒತ್ತಾಯಿಸಲಾಗುತ್ತಿದೆ.
ಯಾವ ಮಾನದಂಡಗಳು?: ಈ ಹಿಂದೆಯೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್ ಕಾರ್ಡ್ ಪಡೆಯಲು 14 ಮಾನದಂಡಗಳನ್ನು ನಿಗದಿ ಮಾಡಿದೆ. ಆದರೆ ಇವುಗಳನ್ನು ಹಲವು ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದರೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಈ ಹಿಂದೆ ಎಚ್ಚರಿಕೆ ನೀಡಲಾಗಿತ್ತು.
ಸದ್ಯ ಇರುವ ಮಾರ್ಗಸೂಚಿ ಅನ್ವಯ ಆದಾಯ ತೆರಿಗೆ ಪಾವತಿ ಮಾಡದ ಸದಸ್ಯರನ್ನು ಒಳಗೊಂಡ ಕುಟುಂಬಗಳು, ಎಲ್ಲಾ ವರ್ಗದ ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಉದ್ಯಮ, ಮಂಡಳಿ, ಸಹಕಾರ ಸಂಘ, ನಿಗಮಗಳ ಖಾಯಂ ನೌಕರರು, ವೈದ್ಯರು, ಆಸ್ಪತ್ರೆಗಳ ನೌಕರರು, ವಕೀಲರು, ಲೆಕ್ಕಪರಿಶೋಧಕರು, ಏಳೂವರೆ ಎಕರೆ ಒಣ ಅಥವ ನೀರಾವರಿ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ.
ಒಂದು ಆಟೋ ಹೊರತುಪಡಿಸಿ 100 ಸಿಸಿ ಮೇಲ್ಟಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ, ಕಾರು ಸೇರಿ ಇತ್ಯಾದಿ ವಾಹನ ಹೊಂದಿರುವ ಸದಸ್ಯರ ಕುಟುಂಬ, ಪ್ರತಿ ತಿಂಗಳು 450 ರೂ. ಗಿಂತ ಅಧಿಕ ವಿದ್ಯುತ್ ಬಿಲ್ ಪಾವತಿಸುವ ಕುಟುಂಬ ಬಿಪಿಎಲ್ ಕಾರ್ಡ್ ಪಡೆಯವಂತಿಲ್ಲ ಎಂದು ನಿಯಮವಿದೆ.
ಅಲ್ಲದೇ ಅನುದಾನಿತ/ ಅನುದಾನರಹಿತ ಶಾಲಾ-ಕಾಲೇಜು ನೌಕರರು, ನೋಂದಾಯಿತು ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಸ್, ಕಮಿಷನ್ ಏಜೆಂಟ್ಸ್, ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್, ಮನೆ, ಮಳಿಗೆ ಬಾಡಿಗೆ ನೀಡಿ ವರಮಾನ ಪಡೆಯುವವರು, ಬಹುರಾಷ್ಟ್ರೀಯ ಕಂಪನಿ, ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಕಾರ್ಡ್ ಪಡೆಯುವಂತಿಲ್ಲ.
ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅದನ್ನು ಆಯಾ ತಾಲೂಕಿನ ಕಚೇರಿಗೆ ತೆರಳಿ ಸ್ವಯಂ ಪ್ರೇರಿತವಾಗಿ ವಾಪಸ್ ನೀಡಿ, ಕಾರ್ಡ್ ವಾಪಸ್ ನೀಡದಿದ್ದಲ್ಲಿ ಸರ್ಕಾರ ಪತ್ತೆ ಹಚ್ಚಿ, ಎಷ್ಟು ಅಕ್ಕಿ ಪಡೆದಿದ್ದಾರೆ ಎಂಬುದು ಪತ್ತೆ ಹಚ್ಚಿ, ಕೆಜಿಗೆ 35 ರೂ.ನಂತೆ ಹಣ ವಸೂಲಿ ಮಾಡಲಾಗುತ್ತದೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿದೆ.
ಈಗಾಗಲೇ ಸರ್ಕಾರ 2018ರಲ್ಲಿ 1,97,925, 2019ರಲ್ಲಿ 9,19,040, 2020ರಲ್ಲಿ 1,30,186 ಸೇರಿ 12,47,151 ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿದೆ. ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ಗಳು ರದ್ದಾಗಿವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ 76.04, ನಗರದ ಪ್ರದೇಶದಲ್ಲಿ ಶೇ 49.36 ಕಾರ್ಡ್ ಹಂಚಿಕೆ ಮಾಡಲಾಗಿದೆ. ಆದರೆ ಕಾರು ಹೊಂದಿರುವವರು, ಅನೇಕ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬ ಆರೋಪವಿದೆ.