ನವದೆಹಲಿ: ಭಾರತದ ಪ್ರತಿಯೊಬ್ಬ ಮುಸ್ಲಿಮರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (Citizenship Amendment Act) ಸ್ವಾಗತಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೇಳಿದ್ದಾರೆ. ಭಾರತ ಸರ್ಕಾರವು ಸಿಎಎ ಕಾನೂನನ್ನು ಜಾರಿಗೆ ತಂದಿದೆ. ನಾನು ಈ ಕಾನೂನನ್ನು ಸ್ವಾಗತಿಸುತ್ತೇನೆ. ಇದನ್ನು ಬಹಳ ಮುಂಚೆಯೇ ಮಾಡಬೇಕಾಗಿತ್ತು. ಈ ಕಾನೂನಿನ ಬಗ್ಗೆ ಮುಸ್ಲಿಮರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಈ ಕಾನೂನಿಗೆ ಏನೂ ಮಾಡಲು ಸಾಧ್ಯವಿಲ್ಲ. ಧರ್ಮದ ಆಧಾರದ ಮೇಲೆ ದೌರ್ಜನ್ಯಗಳನ್ನು ಎದುರಿಸುತ್ತಿರುವ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಮುಸ್ಲಿಮೇತರರಿಗೆ ಪೌರತ್ವ ನೀಡಲು ಈ ಹಿಂದೆ ಯಾವುದೇ ಕಾನೂನು ಇರಲಿಲ್ಲ ಎಂದು ತಿಳಿಸಿದ್ದಾರೆ.


ಭಾರತೀಯ ಮುಸ್ಲಿಮರಿಗೆ ಈ ಕಾನೂನಿನಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಯಾವುದೇ ಮುಸಲ್ಮಾನರ ಪೌರತ್ವವನ್ನು ಈ ಕಾನೂನು ಕಸಿದುಕೊಳ್ಳಲು ಹೋಗುವುದಿಲ್ಲ. ಕೆಲವು ರಾಜಕೀಯ ವ್ಯಕ್ತಿಗಳು ಮುಸ್ಲಿಮರಲ್ಲಿ ತಪ್ಪು ತಿಳುವಳಿಕೆಯನ್ನು ಹುಟ್ಟುಹಾಕಿದ್ದಾರೆ. ಭಾರತದ ಪ್ರತಿಯೊಬ್ಬ ಮುಸಲ್ಮಾನನೂ ಸಿಎಎಯನ್ನು ಸ್ವಾಗತಿಸಬೇಕು ಎಂದು ಕರೆ ನೀಡಿದ್ದಾರೆ.
ಫೆಬ್ರವರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೌರತ್ವವನ್ನು ಒದಗಿಸಲು CAA ತರಲಾಗಿದೆಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕಾಯಿದೆಯಲ್ಲಿ ಯಾವುದೇ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಾಗಿದೆ ಎಂದು ತಿಳಿಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ 2019 ಕ್ಕೆ ಸಂಬಂಧಿಸಿದ ನಿಯಮಗಳನ್ನು ಸೋಮವಾರ ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ಪ್ರಕಟಿಸಿದೆ.