ಬೆಂಗಳೂರು ಆರ್.ಟಿ.ನಗರ ಕನಕ ನಗರದ ನೆಹರು ಸೆಂಟನರಿ ಆಂಗ್ಲ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಭಾಷಣ,ಭಿತ್ತಿ ಪತ್ರ ಘೋಷಣೆಗಳ ಮೂಲಕ ಕಾಲ್ನಡಿಗೆ ಜಾಥಾ ಶಾಲೆಯಿಂದ ಹೊರಟು ಕನಕ ನಗರದ ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣ,ಭುವನೇಶ್ವರಿ ನಗರ, ನಾಗೇನಹಳ್ಳಿ ಚರ್ಚ್ ಬಳಿ ಜನರಿಗೆ ಅರಿವನ್ನು ಮೂಡಿಸಿದರು. ಜಾಥಾದಲ್ಲಿ ವಿದ್ಯಾರ್ಥಿಗಳ ಜೊತೆ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಕೆ.ವಿ ಹಾಗು ಶಿಕ್ಷಕ ವೃಂದದವರು ಭಾಗವಹಿಸಿದ್ದರು.
ಪದ್ಮಾವತಿ ಕೆ.ವಿ ಮಾತನಾಡುತ್ತಾ ಬಾಲ್ಯದಲ್ಲಿ ಆಟವಾಡುತ್ತಾ ತನ್ನ ಜೊತೆಗಾರರೊಂದಿಗೆ ಶಾಲೆಗೆ ಹೋಗಿ ಕಲಿಯಬೇಕಾದ ಮಕ್ಕಳು ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ.ಇದೊಂದು ಸಾಮಾಜಿಕ ಪಿಡುಗು.ಇದರಿಂದದುಂಟಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಾದ್ಯಂತ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಸುಶಿಕ್ಷಿತರಾದ ನಾವು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸೋಣ. ಮಕ್ಕಳು ಕೆಲಸ ಮಾಡುವ ಬದಲು ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.