ಇಂದು ಸಂಜೆಯ ಚುನಾವಣೋತ್ತರ ಸಮೀಕ್ಷೆ ಫಲಿತಾಂಶವೆಷ್ಟು ಸತ್ಯ?

VK NEWS
By -
0

 


ಇಂದು ಶನಿವಾರ 7ನೇ ಹಾಗೂ ಕೊನೆಯ ಹಂತದ ಲೋಕಸಭೆ ಚುನಾವಣೆ ಮುಕ್ತಾಯವಾಗಲಿದ್ದು, ಎಲ್ಲರ ಕಣ್ಣು ಈಗ ಜೂನ್‌ 4ರ ಫಲಿತಾಂಶದ ಮೇಲೆ ನೆಟ್ಟಿದೆ. ಆದರೆ ಅದಕ್ಕಿನ್ನೂ ಕೆಲವು ದಿನಗಳು ಕಾಯಬೇಕಿದ್ದು, ಮತ ಎಣಿಕೆಯಂದು ಏನಾಗಲಿದೆ ಎಂಬುದರ ಸ್ಥೂಲ ಚಿತ್ರಣವನ್ನು ಚುನಾವಣೋತ್ತರ ಸಮೀಕ್ಷೆಗಳು ನೀಡಲಿವೆ. 

ಜೂನ್ 1ರ ಅಂತಿಮ ಹಂತದ ಚುನಾವಣೆಯ ಮುಕ್ತಾಯಕ್ಕಾಗಿ ಜನರೀಗ ಕಾಯುತ್ತಿದ್ದು, ಅಂದೇ ಸಂಜೆ 6.30ರಿಂದ ಹೊರಬೀಳುವ ಮತಗಟ್ಟೆ ಸಮೀಕ್ಷೆಗಳ ಮೇಲೆ ಗಮನ ಹರಿಸಿದ್ದಾರೆ. ಇದು ಜೂನ್ 4 ರಂದು ಪ್ರಕಟಗೊಳ್ಳಲಿರುವ ಅಂತಿಮ ಫಲಿತಾಂಶದ ಬಗ್ಗೆ ಒಂದು ಹಂತದ ಚಿತ್ರಣವನ್ನು ಇವು ನೀಡಲಿವೆ.

ಚುನಾವಣೆಯ ಸಂದರ್ಭದಲ್ಲಿ ಮತದಾರರ ಭಾವನೆಯನ್ನು ಅಳೆಯಲು ಎಕ್ಸಿಟ್ ಪೋಲ್‌ಗಳನ್ನು ನಡೆಸಲಾಗುತ್ತದೆ. ಮತಗಟ್ಟೆಗಳಲ್ಲಿ ಮತ ಚಲಾಯಿಸಿ ಬರುವ ಮತದಾರರಿಂದ ಸಂಗ್ರಹಿಸದ ಅಭಿಪ್ರಾಯಗಳನ್ನು ಆಧರಿಸಿ ಈ ಎಕ್ಸಿಟ್‌ ಪೋಲ್‌ಗಳ ಫಲಿತಾಂಶ ನಿರ್ಧಾರವಾಗುತ್ತದೆ.

ಪ್ರಶಾಂತ್ ಕಿಶೋರ್ ಸೇರಿದಂತೆ ರಾಜಕೀಯ ಪಂಡಿತರು ಈ ಬಾರಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ದಾಖಲಿಸಿದೆ ಎಂಬ ಮುನ್ಸೂಚನೆ ನೀಡಿದ್ದಾರೆ. ಹೀಗಿದ್ದೂ, ವಿರೋಧ ಪಕ್ಷಗಳು ಐಎನ್‌ಡಿಐಎ ಒಕ್ಕೂಟ ಜಯದ ನಿರೀಕ್ಷೆಯಲ್ಲಿದೆ.

ಟೈಮ್ಸ್‌ ನೌ, ಇಂಡಿಯಾ ಟುಡೆ, ಎಬಿಪಿ ನ್ಯೂಸ್, ನ್ಯೂಸ್ 24 ಸೇರಿದಂತೆ ಹಲವಾರು ಮಾಧ್ಯಮ ಸಂಸ್ಥೆಗಳು ವಿವಿಧ ಏಜೆನ್ಸಿಗಳ ಜೊತೆ ಸೇರಿ ಸಮೀಕ್ಷೆಗಳನ್ನು ನಡೆಸುತ್ತವೆ. ಈ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಸಾರ ಮಾಡುತ್ತವೆ. ಮತದಾನೋತ್ತರ ಸಮೀಕ್ಷೆಗಳು ಫಲಿತಾಂಶದ ಸೂಚನೆ ನೀಡಬಹುದಷ್ಟೆ. ಇದೇ ಅಂತಿಮ ಫಲಿತಾಂಶವಲ್ಲ. ನೈಜ ಮತ್ತು ಸ್ಪಷ್ಟ ಫಲಿತಾಂಶಗಳಿಗಾಗಿ ಜೂನ್‌ 4ರವರೆಗೆ ಕಾಯಲೇಬೇಕು. ಅಂದು ನಿಜವಾದ ಫಲಿತಾಂಶ ಹೊರಬೀಳಲಿದೆ.

2019ರಲ್ಲಿ ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. ಈ ಚುನಾವಣೆಯಲ್ಲಿ ಎನ್‌ಡಿಎ 353 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಇದು ನಿಜವಾಗಿತ್ತು. ಒಟ್ಟು 543 ಸ್ಥಾನಗಳಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನ ಗಳಿಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುಪಿಎ 90 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಕೇಂದ್ರದಲ್ಲಿ ಸರ್ಕಾರ ರಚಿಸಲು, ಒಂದು ಪಕ್ಷ ಅಥವಾ ಪಕ್ಷಗಳ ಒಕ್ಕೂಟ ಲೋಕಸಭೆಯಲ್ಲಿ ಕನಿಷ್ಠ 272 ಸ್ಥಾನಗಳನ್ನು ಹೊಂದಿರಬೇಕಾಗುತ್ತದೆ.
2019ರಲ್ಲಿ ಬಹುತೇಕ ಎಕ್ಸಿಟ್ ಪೋಲ್‌ಗಳ ಭವಿಷ್ಯ
1.    ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾವು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 339 ರಿಂದ 365 ಸ್ಥಾನಗಳು ಬರಲಿವೆ ಎಂದು ಹೇಳಿತ್ತು. ಸಂಸ್ಥೆಯು ಯುಪಿಎ 77-108 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿತ್ತು. ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 8,00,000 ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಿತ್ತು.
2.    ನ್ಯೂಸ್ 24-ಟುಡೇಸ್ ಚಾಣಕ್ಯ: ಎನ್‌ಡಿಎ ಸುಮಾರು 350 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿತ್ತು (+/- 14). ಇದೇ ವೇಳೆ ಯುಪಿಎ - 95 (+/-9) ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು.
3.    ನ್ಯೂಸ್‌ 18- ಐಪಿಎಸ್‌ಒಎಸ್‌ 2019ರ ಚುನಾವಣೆಯಲ್ಲಿ ಎನ್‌ಡಿಎಗೆ 336 ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನುಡಿದಿತ್ತು. ಈ ಸಮೀಕ್ಷೆಯು ಯುಪಿಎಗೆ 82 ಸ್ಥಾನಗಳು ಹಾಗೂ ಇತರ ಪಕ್ಷಗಳಿಗೆ 124 ಸ್ಥಾನಗಳನ್ನು ನೀಡಿತ್ತು.
4.    ಟೈಮ್ಸ್ ನೌ-ವಿಎಂಆರ್: ಈ ಸಂಸ್ಥೆಗಳು ಎನ್‌ಡಿಎ ಸುಮಾರು 306 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದ್ದವು. . ಯುಪಿಎ 132 ಸ್ಥಾನಗಳನ್ನು ಗೆಲ್ಲಲಿದೆ ಎಂದಿದ್ದವು. 3 ಸ್ಥಾನಗಳು ಆಚೀಚೆ ಆಗಬಹುದು ಎಂದು ತಿಳಿಸಿದ್ದವು.
5.    ಇಂಡಿಯಾ ಟಿವಿ-ಸಿಎನ್‌ಎಕ್ಸ್: ಇವರು ತಮ್ಮ ಸಮೀಕ್ಷೆಯಲ್ಲಿ ಎನ್‌ಡಿಎಗೆ 300 ಸ್ಥಾನಗಳು (+/- 10 ಸೀಟುಗಳು) ಮತ್ತು ಯುಪಿಎಗೆ 120 ಸ್ಥಾನಗಳು (+/-5) ಬರಲಿವೆ ಎಂದು ಅಂದಾಜಿಸಿದ್ದವು.
6.    ಎಬಿಪಿ-ಸಿಎಸ್‌ಡಿಎಸ್ ಸಮೀಕ್ಷೆಯು ಎನ್‌ಡಿಎಗೆ 277 ಸ್ಥಾನಗಳು ಮತ್ತು ಯುಪಿಎಗೆ 130 ಸ್ಥಾನಗಳು ಬರಲಿವೆ ಎಂದು ಹೇಳಿತ್ತು.
7.    ಇಂಡಿಯಾ ನ್ಯೂಸ್-ಪೋಲ್‌ಸ್ಟ್ರಾಟ್ ಎನ್‌ಡಿಎಗೆ 287 ಮತ್ತು ಯುಪಿಎಗೆ 128 ಸ್ಥಾನಗಳನ್ನು ಕೊಟ್ಟಿತ್ತು.
8.    ಸಿವೋಟರ್: ಎನ್‌ಡಿಎಗೆ 287, ಯುಪಿಎಗೆ 128 ಮತ್ತು ಇತರ ಪಕ್ಷಗಳಿಗೆ ಉಳಿದ ಸ್ಥಾನಗಳನ್ನು ನೀಡಿತ್ತು.

Post a Comment

0Comments

Post a Comment (0)