ಬೆಂಗಳೂರು, ಜೂನ್.01: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಸಮನ್ಸ್ ನೀಡಲಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಈ ಪ್ರಕರಣದಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 42ನೇ ಎಸಿಎಂಎಂ ಜಡ್ಜ್ ಕೆ.ಎನ್.ಶಿವಕುಮಾರ್ ಅವರು ವಿಚಾರಣೆ ನಡೆಸಿದ್ದು ಸಿಎಂ, ಡಿಸಿಎಂ ಪರ ಎಎಜಿ ಎಸ್.ಎ.ಅಹಮದ್ ವಾದ ಮಂಡಿಸಿದರು ಹಾಗೂ ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ಹಾಜರಾಗಿದ್ದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿಚಾರಣೆಗೆಂದು ಕೋರ್ಟ್ಗೆ ಆಗಮಿಸಿದ್ದು ಕೋರ್ಟ್ನಲ್ಲಿ ಕೈಮುಗಿದು ಕೈ ಕಟ್ಟಿ ನಿಂತರು. ಈ ವೇಳೆ ಹಾಜರಿರುವವರು ಯಾರು ಎಂದು ಜಡ್ಜ್ ಕೇಳಿದ್ದು 2 ಮತ್ತು 3ನೇ ಆರೋಪಿ ಡಿಸಿಎಂ, ಸಿಎಂ ಹಾಜರಾಗಿದ್ದಾರೆ. ಆದರೆ ರಾಹುಲ್ ಗಾಂಧಿ ಮುಂದಿನ ವಿಚಾರಣೆಗೆ ಹಾಜರಾಗುತ್ತಾರೆ ಹಾಜರಾತಿಯಿಂದ ವಿನಾಯಿತಿ ಕೊಡಿ ಎಂದು ವಕೀಲ ಮನವಿ ಮಾಡಿದ್ದಾರೆ. ಇಂಡಿಯಾ ಒಕ್ಕೂಟದ ಮೀಟಿಂಗ್ ಇದೆ. ಹೀಗಾಗಿ ರಾಹುಲ್ ಗಾಂಧಿ ಹಾಜರಿಯಿಂದ ವಿನಾಯಿತಿ ಕೋರಿ ರಾಹುಲ್ ಗಾಂಧಿ ಪರ ನಿಶಿತ್ ಕುಮಾರ್ ಶೆಟ್ಟಿ ಮನವಿ ಮಾಡಿದ್ರು.
ಕೋರ್ಟ್ ಮುಂದೆ ಎಲ್ಲರೂ ಸಮಾನರು. ರಾಹುಲ್ ಗಾಂಧಿ ಇಂದು ಹಾಜರಾಗುವುದಾಗಿ ಹೇಳಿದ್ದರು. ಕೋರ್ಟ್ಗೆ ಹಾಜರಾಗುವುದು ರಾಹುಲ್ ಗಾಂಧಿ ಕರ್ತವ್ಯ. ಚುನಾವಣೆ ನೆಪ ಹೇಳಿ ಗೈರು ಹಾಜರಾಗುವಂತಿಲ್ಲ ಎಂದು ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ವಾದ ಮಾಡಿದ್ರು.
ಕೋರ್ಟ್ ಸಮನ್ಸ್ ನೀಡಿದಾಗ ಹಾಜರಾಗಬೇಕು. ಹಾಜರಾಗಿಲ್ಲದಿರುವುದರಿಂದ ವಿನಾಯಿತಿ ನೀಡಬಾರದು. ಮೊದಲ ಬಾರಿ ಗೈರು ಹಾಜರಾದಾಗ ವಿನಾಯಿತಿ ನೀಡಿದ್ದೀರಿ. ಇದು ಮೂರನೇ ಬಾರಿಗೆ ವಿನಾಯತಿ ಕೇಳುತ್ತಿದ್ದಾರೆ. ರಾಹುಲ್ ಗಾಂಧಿಗೆ ಬಂಧನದ ವಾರೆಂಟ್ ಹೊರಡಿಸಲು ವಿನೋದ್ ಕುಮಾರ್ ಮನವಿ ಮಾಡಿದ್ದಾರೆ.
ಸಿಎಂ, ಡಿಸಿಎಂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು 42ನೇ ಎಸಿಎಂಎಂ ಕೋರ್ಟ್ ಜಾಮೀನು ನೀಡಿದೆ. ಹೀಗಾಗಿ ಜಾಮೀನು ಬಾಂಡ್ಗೆ ಸಹಿ ಹಾಕಿ ಸಿಎಂ, ಡಿಸಿಎಂ ತೆರಳಿದರು. ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ ಬಗ್ಗೆ ಕೋರ್ಟ್ ಆದೇಶ ನೀಡಲಿದೆ. ವಿನಾಯಿತಿ ನೀಡಬೇಕೋ ಅಥವಾ ಅರೆಸ್ಟ್ ವಾರಂಟ್ ಜಾರಿ ಮಾಡಬೇಕೋ ಎಂಬ ಬಗ್ಗೆ ಆದೇಶ ನೀಡಲಿದೆ.
ರಾಹುಲ್ ಗಾಂಧಿ ಪರ ನಾಲ್ಕನೇ ವಕೀಲ ರಮೇಶ್ ಬಾಬು ವಾದ ಮಂಡಿಸಿದ್ದು ಈ ವಿವಾದದ ಬಗ್ಗೆ ನಿರ್ಧರಿಸಲು ಜೂ.7ಕ್ಕೆ ಮುಂದೂಡಿ ಎಂದು ಮನವಿ ಮಾಡಿದ್ರು. ಇಂದು ಏನಾದರೂ ಆದೇಶ ಮಾಡಬೇಕಲ್ಲ. 2ನೇ ಬಾರಿಗೆ ವಿನಾಯಿತಿ ನೀಡಬಹುದೇ ಎಂಬ ಪ್ರಶ್ನೆ ಇದೆ ಎಂದು ಜಡ್ಜ್ ಹೇಳಿದ್ದು ಜಾಮೀನು ರಹಿತ ವಾರಂಟ್ ನೀಡಬಾರದೆಂದು ‘ಸುಪ್ರೀಂ’ ತೀರ್ಪು ಉಲ್ಲೇಖಿಸಿ ವಕೀಲ ಬಿ.ಎನ್.ಜಗದೀಶ್ ವಾದ ಮಾಡಿದರು.
ಎರಡನೇ ಬಾರಿಗೆ ವಿನಾಯಿತಿ ನೀಡಿದ ಪ್ರಸಂಗಗಳಿವೆ. ಹೀಗಾಗಿ ವಿನಾಯಿತಿ ನೀಡುವಂತೆ ಎಎಜಿ S.A.ಅಹಮದ್ ವಾದ ಮಾಡಿದ್ದು ವಿಚಾರಣೆ ಜೂ.7ಕ್ಕೆ ಮುಂದೂಡಲು ಮನವಿ ಮಾಡಿದ್ದಾರೆ. ಉದ್ಭವಿಸಿರುವ ಪ್ರಶ್ನೆ ಪರಿಹಾರವಾಗದೇ ಜೂ.7ಕ್ಕೆ ಮುಂದೂಡಲಾಗಲ್ಲ ಎಂದು ಜಡ್ಜ್ ಸ್ಪಷ್ಟವಾಗಿ ಹೇಳಿ ವಿಚಾರಣೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.