40 ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ‘ಗ್ಯಾರಂಟಿ’?

VK NEWS
By -
0


  ಚಿತ್ರದುರ್ಗ : ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿ ಹೆಸರಿನಲ್ಲಿ ಮತಯಾಚಿಸಿ, ಅಧಿಕಾರಕ್ಕೆ ಬಂದಿದ್ದಾರೆ. ಈಗ, ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರದ ಬೊಕ್ಕಸ ದಿವಾಳಿಯಾಗಿದೆ. ಈಗ, ಅದನ್ನು ಹೊಂದಿಸಲು ಬೆಲೆ ಏರಿಕೆಗೆ ಮುಂದಾಗಿದ್ದಾರೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

 ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಜೂರಿಯಾಗಿದ್ದ ಕಾಮಗಾರಿಗಳು ಕುಂಠಿತಗೊಂಡಿದೆ. ಅನುದಾನ ಇಲ್ಲವೆಂದು ಹಲವು ಕಾಂಗ್ರೆಸ್ ಶಾಸಕರು ಬಂಡಾಯ ಎದ್ದಿದ್ದಾರೆ. ನಲವತ್ತಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಡಲೂ ಮುಂದಾಗಿದ್ದಾರೆ " ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
ಮುದ್ದೇಬಿಹಾಳ ಶಾಸಕ ನಾಡಗೌಡ್ರು ಯಾವ ಪುರುಷಾರ್ಥಕ್ಕಾಗಿ ನಾವು ಶಾಸಕರಾಗಿ ಮುಂದುವರಿಯಬೇಕು, ರಾಜೀನಾಮೆ ಕೊಡುತ್ತೇನೆ ಎಂದು ಪ್ರೆಸ್ ಮೀಟ್ ಮಾಡಿ ಹೇಳಿದ್ದಾರೆ. ಅದೇ ರೀತಿ, 40ಕ್ಕೂ ಹೆಚ್ಚು ಶಾಸಕರು ಅಭಿವೃದ್ದಿಗೆ ಹಣ ಸಿಗುತ್ತಿಲ್ಲ ಎಂದು ರಾಜೀನಾಮೆ ನೀಡುವ ಚಿಂತನೆ ನಡೆಸಿದ್ದಾರೆ ಎಂದು ಸಂಸದ ಕಾರಜೋಳ ಬಾಂಬ್ ಸಿಡಿಸಿದ್ದಾರೆ.

ಡೀಸೆಲ್ ಬೆಲೆ ಏರಿಕೆಯಿಂದಾಗಿ ಎಲ್ಲಾ ವಸ್ತುಗಳ ಬೆಲೆಗಳು ಏರಿಕೆಯಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಬರೆ ಎಳೆದಂತಾಗುತ್ತದೆ. ಹಾಗಾಗಿ, ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ನಾನು ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ ಎಂದು ಕಾರಜೋಳ ಹೇಳಿದ್ದಾರೆ.

ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ತೈಲ ಬೆಲೆ ಕಮ್ಮಿ ಎನ್ನುವ ಸರ್ಕಾರದ ವಾದ ಭಂಡತನದ್ದು. ಬೆಲೆ ಏರಿಕೆಯ ಬಿಸಿಯನ್ನು ಮರೆಮಾಚಲು ಇಂತಹ ಹೇಳಿಕೆಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಇದೆಲ್ಲಾ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮಾಡುತ್ತಿರುವಂತಹ ಕೆಲಸ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಚಾರ ಎಂದು ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

" ಅನ್ನಭಾಗ್ಯ ಯೋಜನೆಯ ದುಡ್ಡು ಮೂರು ತಿಂಗಳಿನಿಂದ ಬಿದ್ದಿಲ್ಲ, ಹೀಗಾಗಿ ಜನ ಸಿದ್ದರಾಮಯ್ಯನವರಿಗೆ ಶಾಪ ಹಾಕದೇ ಇರುತ್ತಾರಾ? ಮಳೆ ಚೆನ್ನಾಗಿ ಬೀಳುತ್ತಿದೆ, ರಸಗೊಬ್ಬರ ಮತ್ತು ಬೀಜದ ಕೊರತೆಯಿದೆ. ರೈತರಿಗೆ ಬಾರಿ ಶೇಂಗಾ ಬೀಜ ಸಿಗುತ್ತಿಲ್ಲ, ಎಲ್ಲಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ " ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

ಗ್ಯಾರಂಟಿ ಯೋಜನೆ ಮುಂದುವರಿಸುವ ವಿಚಾರದಲ್ಲಿ ಕಾಂಗ್ರೆಸ್ಸಿನಲ್ಲೇ ಗೊಂದಲವಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ನಿರೀಕ್ಷಿತ ರೀತಿಯಲ್ಲಿ ಬರದ ಹಿನ್ನಲೆಯಲ್ಲಿ ಗ್ಯಾರಂಟಿ ನಿಲ್ಲಿಸಬೇಕು ಎಂದು ಬಹಿರಂಗವಾಗಿಯೇ ಕೆಲವು ಕಾಂಗ್ರೆಸ್ ಶಾಸಕರು ಹೇಳಿದ್ದರು.

Post a Comment

0Comments

Post a Comment (0)