ಬೆಂಗಳೂರು: ರಾಜಾಜಿನಗರ ಎರಡನೇ ಹಂತದಲ್ಲಿ, ಕಳೆದ 2 ತಿಂಗಳಿಗೂ ಹೆಚ್ಚು ಸಮಯದಿಂದ ಡಾ. ರಾಜಕುಮಾರ್ ಮುಖ್ಯ ರಸ್ತೆಯಲ್ಲಿ, ಮೂರನೇ ಕ್ರಾಸ್ ಬಳಿ, ದೊನ್ನೆ ಬಿರಿಯಾನಿ ಹೋಟೆಲ್ ಎದುರಿಗೆ ಸಪ್ತಗಿರಿ ಬಾರ್ ಬಳಿ ಒಳಚರಂಡಿ ಗುಂಡಿಯ ಸ್ಥಿತಿ ಹೀಗಿದೆ. ದುರ್ವಾಸನೆ ಹೊಮ್ಮಿಸುತ್ತಾ, ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯನ್ನು ಉಂಟು ಮಾಡುತ್ತಿರುವ ಈ ಸಮಸ್ಯೆಯ ಅರಿವಿದ್ದರೂ, ಒಳಚರಂಡಿ ಮಂಡಳಿ ಸರಿಪಡಿಸುವ ಬಗ್ಗೆ ಗಮನವೇ ಹರಿಸದೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹಲವರು ಈಗಾಗಲೇ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ಕೂಡಲೇ ತುರ್ತಾಗಿ ಕ್ರಮ ಕೈಗೊಂಡು ಜನರಿಗೆ ಇದರಿಂದ ಮುಕ್ತಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.