ಬೆಂಗಳೂರು, ಮಾರ್ಚ್ 20 (ಕರ್ನಾಟಕ ವಾರ್ತೆ)
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಮಾಧ್ಯಮಗಳ ಭಾಗವಹಿಸುವಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ತಿಳಿಸಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರದಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಹಾಗೂ ವಾರ್ತಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣೆ – 2024ರ ಅಂಗವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಿಗೆ ಚುನಾವಣೆ ಕುರಿತು ಕಾರ್ಯಾಗಾರ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಮಾರ್ಚ್ 16 ರಂದು ಲೋಕಸಭಾ ಚುನಾವಣೆ-2024 ರ ಅಧಿಸೂಚನೆ ಪ್ರಕಟಗೊಂಡಿದ್ದು, ಅದರಂತೆ ರಾಜ್ಯದಲ್ಲಿ 2 ಮತ್ತು 3ನೇ ಹಂತದಲ್ಲಿ ಚುನಾವಣೆ ಕ್ರಮವಾಗಿ ಏಪ್ರಿಲ್ 26 ಹಾಗೂ ಮೇ 7 ರಂದು ನಡೆಯಲಿದೆ. ಟಿವಿ, ಕೇಬಲ್, ಪತ್ರಿಕೆಗಳಲ್ಲಿ ಭಿತ್ತರಗೊಳ್ಳುವ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮೇಲುಸ್ತುವಾರಿ ಸಮಿತಿ (ಎಂಸಿಎಂಸಿ) ಯಿಂದ ಪೂರ್ವಾನುಮತಿ ಕಡ್ಡಾಯವಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುವ ರಾಜಕೀಯ ಪಕ್ಷ, ವ್ಯಕ್ತಿಗಳ ಜಾಹೀರಾತುಗಳಿಗೂ ನಿಗಾವಹಿಸಿದ್ದು, ಇವುಗಳಿಗೆ ಸಹ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಬೇಕು. ಈ ನಿಯಮ ಚುನಾವಣಾ ಸಂದರ್ಭಕ್ಕೆ ಮಾತ್ರ ಸೀಮಿತವಾಗದೇ ವರ್ಷದುದ್ದಕ್ಕೂ ಅನ್ವಯಿಸುತ್ತದೆ. ಅಲ್ಲದೇ ಅಂಚೆ ಮತದಾನದ ವ್ಯವಸ್ಥೆಯನ್ನು ಚುನಾವಣಾ ಆಯೋಗ ಒಟ್ಟು 16 ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡವರಿಗೆ ಕಲ್ಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಮುಖ್ಯ ಚುನಾವನಾಧಿಕಾರಿಗಳಾದ ವೆಂಕಟೇಶ್ ಕುಮಾರ್ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮವನ್ನು ನಾಲ್ಕನೇ ಅಂಗವೆಂದು ಪರಿಗಣಿಸಲಾಗಿದೆ. ಚುನಾವಣೆಯನ್ನು ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯ ಪರಿಮಿತಿಯಲ್ಲಿ ನಡೆಸಬೇಕಾಗುತ್ತದೆ. ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ಸಹ ಮುಖ್ಯ ಪಾತ್ರವಹಿಸುತ್ತದೆ. ಅಧಿಕಾರದಲ್ಲಿರುವ ಪಕ್ಷಗಳು ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ. ಸರ್ಕಾರದ ಕಾಮಗಾರಿಗಳಿಗೆ ಚಾಲನೆ ನೀಡುವಂತಿಲ್ಲ. ಆದರೆ ಬರ ಪರಿಹಾರದ ತುರ್ತು ಸೇವೆಗಳು, ಪ್ರಕೃತಿ ವಿಕೋಪಗಳ ಪರಿಹಾರ, ವೈದ್ಯಕೀಯ ಚಿಕಿತ್ಸೆ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಜಾರಿಗೆ ಯಾವುದೇ ಅಡೆತಡೆ ಇರುವುದಿಲ್ಲ ಎಂದರು.
ರಾಜಕೀಯ ವ್ಯಕ್ತಿಗಳು ಚುನಾವಣಾ ಪ್ರಚಾರಕ್ಕೆ ಸರ್ಕಾರಿ ವಾಹನ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬಳಕೆ ಮಾಡುವಂತಿಲ್ಲ. ಸರ್ಕಾರಿ ನೌಕರಿಯಲ್ಲಿ ಹೊಸ ಅಧಿಸೂಚನೆ, ನೇಮಕ, ವರ್ಗಾವಣೆ ಮಾಡುವಂತಿಲ್ಲ ಎಂದರು.
ಮಾಧ್ಯಮ ಪ್ರಮಾಣೀಕರಣ ಮೇಲುಸ್ತುವಾರಿ ಸಮಿತಿಯಲ್ಲಿ (ಎಂಸಿಎಂಸಿ) ಟಿವಿ, ಚಾನೆಲ್, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತನ್ನು ಪ್ರಮಾಣಿಸಿ ಪ್ರಸಾರಕ್ಕೆ ಅನುಮತಿ ನೀಡಲಾಗುವುದು. ಕಾಸಿಗಾಗಿ ಸುದ್ದಿ (Paid News) ಬಗ್ಗೆ ಸಹ ಚುನಾವಣಾ ಆಯೋಗ ನಿಗಾವಹಿಸಿದ್ದು, ಇವು ವರದಿಯಾದರೆ ಜಿಲ್ಲಾ ಮಟ್ಟದಲ್ಲಿನ ಚುನಾವಣಾಧಿಕಾರಿಗಳು ಸಂಬಂಧಿಸಿದ ಅಭ್ಯರ್ಥಿಗಳಿಗೆ 48 ಗಂಟೆಗಳೊಳಗೆ ನೋಟೀಸ್ ಜಾರಿ ಮಾಡುತ್ತಾರೆ. ಚುನಾವಣೆಗೆ ಮುದ್ರಣಗೊಳ್ಳುವ ಕರಪತ್ರ, ಕಾಸಿಗಾಗಿ ಸುದ್ದಿ, ಸುಳ್ಳುಸುದ್ದಿ, ಜಾತಿ ಕೋಮುವಾದ ಪ್ರಚೋದಿಸುವ ಇತ್ಯಾದಿ ಸುದ್ದಿಗಳ ಮೇಲೆ ಆಯೋಗವು ಹದ್ದಿನ ಕಣ್ಣಿಟ್ಟಿದೆ. ಇದನ್ನು ಹಬ್ಬಿಸುವವರ ವಿರುದ್ಧ ಸಹ ಕ್ರಮ ಜರುಗಿಸಲಾಗುವುದು ಎಂದರು.
ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಕೂರ್ಮಾ ರಾವ್ ಮಾತನಾಡಿ, ಚುನಾವಣಾ ಕರ್ತವ್ಯದಲ್ಲಿರುವ 16 ತುರ್ತು ಸೇವೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅಂಚೆ ಮತದಾನ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತೆಯೇ ಕರ್ತವ್ಯನಿರತ ಮಾಧ್ಯಮ ಪ್ರತನಿಧಿಗಳು 12-ಡಿ ಅರ್ಜಿ ಭರ್ತಿ ಮಾಡಿ, ವಾರ್ತಾ ಇಲಾಖೆಯ ನೋಡಲ್ ಅಧಿಕಾರಿಗೆ ಸಲ್ಲಿಸಿದಲ್ಲಿ ಅವರಿಗೆ ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕರ್ನಾಟಕ ಚುನಾವಣಾ ಆಯೋಗದ ಐಟಿ ಮತ್ತು ಮಾಧ್ಯಮದ ವಿಶೇಷಾಧಿಕಾರಿ ಸೂರ್ಯಸೇನ್ ಮಾತನಾಡಿ ಸಾಮಾಜಿಕ ಜಾಲತಾಣ, ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ಚುನಾವಣಾ ಜಾಹೀರಾತು ಕುರಿತು ನಿಗಾವಹಿಸಲಾಗಿದೆ. ಸುಳ್ಳು ಸುದ್ದಿ ಜನರಿಗೆ ದಿಕ್ಕು ತಪ್ಪಿಸುವ ವಿವಿಧ ಪೋಸ್ಟ್‍ಗಳ ವಿರುದ್ದ ಕ್ರಮಕೈಗೊಳ್ಳಲಾಗುವುದು. ರಾಜಕೀಯ ವ್ಯಕ್ತಿಗಳು ತಮ್ಮ ಅಧಿಕೃತ ಫೇಸ್‍ಬುಕ್, ಟ್ವಿಟರ್ ಖಾತೆ ಹೊರತಾಗಿ ಇತರೆಡೆ ಬಿಂಬಿಸುವ ಜಾಹೀರಾತುಗಳ ಬಗೆಗೆ ಕ್ರಮವಹಿಸಲಾಗುವುದು. ಅಭ್ಯರ್ಥಿಗಳು, ರಾಜಕೀಯ ಪಕ್ಷದವರು, ಅಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ನಡೆದುಕೊಳ್ಳಬಹುದಾದ ರೀತಿಯ ಬಗ್ಗೆ ಪ್ರತ್ಯೇಕ ಸೂಚನೆ ನೀಡಲಾಗಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಮಾತನಾಡಿ, ಜಿಲ್ಲಾ ಮಟ್ಟದ ವಾರ್ತಾಧಿಕಾರಿಗಳು ಚುನಾವಣಾ ಮಾರ್ಗಸೂಚಿಗಳನ್ವಯ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಚ್ಯುತಿ ಉಂಟಾಗದಂತೆ ಕಾರ್ಯನಿರ್ವಹಿಸಬೇಕು. ಚುನಾವಣೆಯು ರಾಷ್ಟ್ರೀಯ ಹಬ್ಬವಾಗಿದ್ದು, ಜಿಲ್ಲೆಯಲ್ಲಿನ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾ ಮಟ್ಟದ ಮಾಹಿತಿ ಸಂವಹನವನ್ನು ಅಡಚಣೆಯಾಗದಂತೆ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಈಶ್ವರ್ ದೈತೋಟ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ಸುದ್ದಿ ಮತ್ತು ಪತಿಕಾ ಶಾಖೆಯ ಉಪನಿರ್ದೇಶಕರಾದ ಬಿ.ಕೆ.ರಾಮಲಿಂಗಪ್ಪ ಹಾಗೂ ಎಲ್ಲಾ ಜಿಲ್ಲೆಯ ವಾರ್ತಾಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನೀರಿನ ಸಂರಕ್ಷಣೆ ಹಾಗೂ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಂಡಳಿಯೊಂದಿಗೆ ಕೈಜೋಡಿಸಿ: ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಕರೆ
ಬೆಂಗಳೂರು, ಮಾರ್ಚ್ 20 (ಕರ್ನಾಟಕ ವಾರ್ತೆ):
ಅಂತರ್ಜಲ ಕುಸಿತದಿಂದ ನಗರದಲ್ಲಿ ಆಗಿರುವ ನೀರಿನ ಅಭಾವ, ನೀರಿನ ಸಂರಕ್ಷಣೆ ಹಾಗೂ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಜೊತೆ ಕೈಜೋಡಿಸಿ ಎಂದು ಜಲಮಂಡಳಿಯ ನೊಂದಾಯಿತ ಪ್ಲಂಬರ್‍ಗಳಿಗೆ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಕರೆ ನೀಡಿದರು.
ಇಂದು ಜಯನಗರದ ಸರ್ ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಣ್ಣ ವಯಸ್ಸಿನಲ್ಲಿ ಕುಡಿಯುವ ನೀರಿಗಾಗಿ ನನ್ನ ತಾಯಿ ಪಡುತ್ತಿದ್ದ ಕಷ್ಟ ಇನ್ನು ನೆನೆಪಿದೆ. ಕೇವಲ 2 ಕೊಡ ನೀರಿನಿಂದ ಮನೆಯನ್ನು ನಿರ್ವಹಿಸುತ್ತಿದ್ದ ಕಷ್ಟದ ದಿನಗಳನ್ನು ಕಂಡಿದ್ದೇನೆ. ಇಂದು ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಇಲ್ಲ. ಆದರೆ, ಜನರ ಅಜಾಗರೂಕತೆ ಹಾಗೂ ನಿರ್ಲಕ್ಷದಿಂದ ಬಹಳಷ್ಟು ಶುದ್ದ ನೀರು ಚರಂಡಿಯ ಪಾಲಾಗುತ್ತಿದೆ. 1000 ಲೀಟರ್ ನೀರನ್ನ ಬೆಂಗಳೂರಿನ ಮನೆಗಳಿಗೆ ಸರಬರಾಜು ಮಾಡಲು ಮಂಡಳಿಗೆ ಸುಮಾರು 95 ರೂಪಾಯಿಗಳ ವೆಚ್ಚವಾಗುತ್ತದೆ. ಆದರೆ ಜನರಿಗೆ ನಾವು ರಿಯಾಯಿತಿ ದರವಾದ 45 ರೂಪಾಯಿಗಳಲ್ಲಿ ನೀರನ್ನ ಒದಗಿಸುತ್ತಿದ್ದೇವೆ. ನೀರು ಅತ್ಯಮೂಲ್ಯ ವಸ್ತು ಇದರ ಸಂರಕ್ಷಣೆ ನಮ್ಮ ಪ್ರಥಮ ಆದ್ಯತೆ ಆಗಬೇಕಾಗಿದೆ ಎಂದರು.
ಪ್ಲಂಬರ್‍ಗಳು ಜಲಮಂಡಳಿಯ ಮಿತ್ರರಾಗಿ ಕಾರ್ಯನಿರ್ವಹಿಸಬೇಕು. ತಾವು ಕಾರ್ಯನಿರ್ವಹಿಸುತ್ತಿರುವಂತಹ ವ್ಯಾಪ್ತಿಯಲ್ಲಿ ಇರುವಂತಹ ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ರೆಸ್ಟೋರೆಂಟ್‍ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ನೀರು ಪೆÇೀಲಾಗುವುದನ್ನ ತಡೆಯಲು ಏರಿಯೇಟರ್ ಹಾಗೂ ಫೆÇ್ಲೀ ಕಂಟ್ರೋಲರ್ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಈಗಾಗಲೇ ನಾವು ಇವುಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದೇವೆ, ಜನರು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳುವಂತೆ ಮನವೊಲಿಸುವುದರಲ್ಲಿ ನಿಮ್ಮ ಪಾತ್ರ ಹಿರಿದಾಗಿದೆ. ಇದಕ್ಕಾಗಿ ಪ್ಲಂಬರ್‍ಗಳು ಮಂಡಳಿಯ ಜೊತೆ ಕೈಜೋಡಿಸುವಂತೆ ಅಧ್ಯಕ್ಷರು ಕರೆ ನೀಡಿದರು.
ಮಳೆ ನೀರು ಕೊಯ್ಲು ಹಾಗೂ ಮರುಪೂರಣಕ್ಕೆ ಪ್ಲಂಬರ್‍ಗಳು ಆದ್ಯತೆ ನೀಡಬೇಕು. ನಿಯಮಗಳ ಅನುಸಾರ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಹಾಗೂ ಅದನ್ನ ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಿಸಿಕೊಳ್ಳುವಂತೆ ಜನರ ಮನವೊಲಿಸುವುದು ಆದ್ಯತೆ ಆಗಿರಬೇಕು ಎಂದರು.
ಜಲಮಂಡಳಿಯ 11 ಸಾವಿರ ಕೊಳವೆ ಬಾವಿಗಳನ್ನು ಸುಸ್ಥಿಯಲ್ಲಿಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಇದಕ್ಕಾಗಿ ಕೊಳವೆ ಬಾವಿಗಳ ರಿಪೇರಿಗಳನ್ನ ಯುದ್ದೋಪಾದಿಯಲ್ಲಿ ಮಾಡಬೇಕು. ಹಾಗೆಯೇ, ಕಡಿಮೆ ನೀರು ದೊರೆಯುತ್ತಿರುವ ಕೊಳವೆ ಬಾವಿಗಳನ್ನು ಇಂಗುಗುಂಡಿಗಳನ್ನಾಗಿ ಪರಿವರ್ತಿಸುವ ಹಾಗೂ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಅಂತರ್ಜಲ ಮರುಪೂರಣಕ್ಕೆ ಬಳಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು. ಮಂಡಳಿಯ ಅಧಿಕಾರಿಗಳು ಆಯಾ ಪ್ಲಂಬರ್‍ಗಳ ಜೋನ್‍ನಲ್ಲಿ ಕಡಿಮೆ ನೀರು ದೊರೆಯುತ್ತಿರುವ ಹಾಗೂ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಗುರುತಿಸಿ ಪ್ಲಂಬರ್‍ಗಳಿಗೆ ಅದರ ಕೆಲಸವನ್ನು ವಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಳಿಯ ಮುಖ್ಯ ಇಂಜಿನಿಯರ್‍ಗಳಾದ ಎಸ್.ವಿ.ವೆಂಕಟೇಶ್, ಜಯಶಂಕರ್, ಎಂಜನಿಯರ್‍ಗಳು ಹಾಗೂ ಅಧಿಕಾರಿಗಳು ಇದ್ದರು.