ಇಂದು ಆಕಸ್ಮಿಕವಾಗಿ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ಸಿಕ್ಕವರು ನನಗೂ ನನ್ನ ಮಡದಿಗೂ ಕಾಲೇಜಿನಲ್ಲಿ ಪಾಠ ಮಾಡಿದ್ದ ವಾಣಿಜ್ಯ ವಿಭಾಗದ ಕ್ಯಾಪ್ಟನ್ ಕೆ ವೈ ಮೋಹನ್ ಕುಮಾರ್. ಅವರಿಗೆ ಈಗ 59 ವರ್ಷ.ಸರ್ಕಾರಿ ಕಾಲೇಜಿನಲ್ಲಿ ಒಂದು ವರ್ಷದ ಸೇವೆ ಬಾಕಿ ಇದೆ. ಶೇಷಾದ್ರಿಪುರಂ ಕಾಲೇಜು ಇವರು ಬಿಡುವಾಗ ಉಪ ಪ್ರಾಂಶುಪಾಲರಾಗಿದ್ದರು. ಇನ್ನೇನು ಇವರು ಪ್ರಾಂಶುಪಾಲರಾಗುವುದಿತ್ತು.ಆಗ ಕಾಲೇಜು ಆಡಳಿತ ಮಂಡಳಿಯವರು ಮ್ಯಾನ್ಮೆಜ್ಮೆಂಟ್ ಕಡೆಯಿಂದ ಉಪನ್ಯಾಸಕರು ಮತ್ತು ಪ್ರಾಂಶುಪಾಲರನ್ನು ನೇಮಿಸಿದರು.ಆಗ ಸರ್ಕಾರದಿಂದ ಸಂಬಳ ಪಡೆಯುತ್ತಿದ್ದ ಉಪನ್ಯಾಸಕರು ಸರ್ಕಾರಿ ಕಾಲೇಜುಗಳಿಗೆ ವರ್ಗಾವಣೆ ತೆಗೆದುಕೊಂಡರು ಕನ್ನಡ ವಿಭಾಗದ ಶ್ರೀ.ನಾ ಗೀತಾಚಾರ್ಯ ಅವರು ಆರ್ ಸಿ ಕಾಲೇಜಿಗೂ , ಸಂಜೆ ಕಾಲೇಜಿನ ಪ್ರಾಂಶುಪಾಲೆಯಾಗಿದ್ದ ಶ್ರೀಮತಿ.ಚಂದ್ರಿಕಾ ಪುರಾಣಿಕ್ ಅವರು ಸರ್ಕಾರಿ ವಿಜ್ಞಾನ ಕಾಲೇಜಿಗೂ ವರ್ಗಾವಣೆ ಪಡೆದುಕೊಂಡಿದ್ದರು.ಅವರಂತೆಯೇ ಮೋಹನ್ ಅವರು ಕೂಡಾ ಮಾಗಡಿ ರಸ್ತೆ ವಿಜಯನಗರ ಕಡೆಯ ಸರ್ಕಾರಿ ಕಾಲೇಜಿಗೆ ವರ್ಗಾವಣೆ ಪಡೆದುಕೊಂಡಿದ್ದರು.ಆದರೆ ಇಂತಹ ಹಲವಾರು ಮಂದಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ನಿಜವಾದ ಆಸ್ತಿ.ಕಾಲೇಜು ಬಿಟ್ಟು ಬೇರೆ ಕಡೆ ಸೇರಿದರೂ ಎಲ್ಲರಿಗೂ ಶೇಷಾದ್ರಿಪುರಂ ಕಾಲೇಜು ಎಂದರೆ ವಿಶೇಷ ಅಭಿಮಾನ.
ಶ್ರೀ.ಕೆ ವೈ ಮೋಹನ್ ಕುಮಾರ್ ಶೇಷಾದ್ರಿಪುರಂ ಕಾಲೇಜಿನ ಹಳೆಯ ವಿದ್ಯಾರ್ಥಿ ಕೂಡಾ.ಇವರ ಜೊತೆಗೆ ಓದಿದ ಪ್ರೊ.ಜಿ ಕೆ ಮಂಜುನಾಥ್ ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನ ಹಾಲಿ ಪ್ರಾಂಶುಪಾಲರು. ಇವರೆಲ್ಲಾ ಶೇಷಾದ್ರಿಪುರಂ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ ಚಟುವಟಿಕೆಗಳಿಗೆ ಸಕ್ರಿಯವಾಗಿ ತೊಡಗಿಸಿಕೊಂಡವರು. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ಸಲೀಂ ಅಹಮದ್ ಇವರ ಬ್ಯಾಚಿನವರು ನಟ ಜಗ್ಗೇಶ್ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಆರ್ ಎಸ್ ಸತ್ಯನಾರಾಯಣ ಒಂದು ಬ್ಯಾಚ್ ಸೀನಿಯರ್ಸ್. ಹೀಗೆ 1973 ರಲ್ಲಿ ಶುರುವಾದ ಶೇಷಾದ್ರಿಪುರಂ ಕಾಲೇಜಿಗೆ ಈಗ 51 ವರ್ಷ.ಕಾಲೇಜು ಶುರುವಾದಾಗಿನಿಂದ ಬಹುತೇಕ ಮೊದಲ ವರ್ಷ ಪದವಿ ಮುಗಿಸಿದವರಿಂದ ಕಳೆದ ವರ್ಷ ಪದವಿ ಮುಗಿಸಿದ ಕಿರಿಯರ ತನಕ ಭೇಟಿಯಾಗುವ ಪುನರ್ಮಿಲನ ಕಾರ್ಯಕ್ರಮ ನಿಜಕ್ಕೂ ಅದ್ಭುತ.ಶ್ರೀ.ಕೆ ವೈ ಮೋಹನ್ ಕುಮಾರ್ ಅವರು ಕಾಲೇಜಿನ ಎನ್ ಸಿ ಸಿ ವಿಭಾಗದ ಮುಖ್ಯಸ್ಥರೂ ಆಗಿದ್ದರು ಹಾಗಾಗಿ ಅವರು ಕ್ಯಾಪ್ಟನ್ ಕೆ ವೈ ಮೋಹನ್ ಕುಮಾರ್.ಅತ್ಯಂತ ಎತ್ತರದ ಐ ಪಿ ಎಸ್ ಅಧಿಕಾರಿಯಂತೆ ಕಾಣುತ್ತಿದ್ದ ಶ್ರೀ.ಕೆ ವೈ ಮೋಹನ್ ಕುಮಾರ್ ಸ್ಪುರದ್ರೂಪಿ. ಮೋಸ್ಟ್ ಹ್ಯಾಂಡ್ಸಂ ಲೆಕ್ಚರರ್.ಸುಂದರವಾದ ಬರವಣಿಗೆ.ಶರೀರಕ್ಕೆ ಪೂರಕವಾದ ಅದ್ಭುತ ಶಾರೀರ.ಬೋರ್ಡ್ ಮೇಲೆ ಚುಕ್ಕೆಗಳ ವಿನ್ಯಾಸ ಮಾಡಿ ಬರೆಯುತ್ತಿದ್ದರೆ ವಿದ್ಯಾರ್ಥಿಗಳಿಗೆ ಸಂಭ್ರಮ
ಶ್ರೀ.ಕೆ ವೈ ಮೋಹನ್ ಕುಮಾರ್ ಅವರು ಮಲ್ಲೇಶ್ವರದವರು. ನಿರ್ಮಲ ರಾಣಿ ಶಾಲೆಯ ಎದುರು ರಸ್ತೆಯವರು.ನಾವು ವಿದ್ಯಾರ್ಥಿಗಳಾಗಿದ್ದಾಗಲೇ ಅವರು ಮನೆ ಪಾಠ ಕೂಡಾ ಮಾಡುತ್ತಿದ್ದರು.ಅವರ ಶ್ರೀಮತಿಯವರ ತವರು ಮನೆ ಕೂಡಾ ಮಲ್ಲೇಶ್ವರ.ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು.ಅವರುಗಳೂ ಶೇಷಾದ್ರಿಪುರಂ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ಓದಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಬದುಕಿನಲ್ಲಿ ಪ್ರತಿ ಉಪನ್ಯಾಸಕರ ಸೇವೆ ಬಹಳ ದೊಡ್ಡದು ಅನೇಕ ಸಾಧಕ ಶಿಷ್ಯರ ಪಡೆ ಅವರ ಕಡೆ ಇರುತ್ತದೆ.ಮುಂದಿನ ತಿಂಗಳು ನಡೆಯಲಿರುವ ಶೇಷಾದ್ರಿಪುರಂ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ಪುನರ್ಮಿಲನ ಕಾರ್ಯಕ್ರಮವನ್ನು ಎಲ್ಲರೂ ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ
ಸಿ ಎನ್ ರಮೇಶ್ , 9844295260