ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 16, ಶನಿವಾರದಂದು ಶ್ರೀ ರಾಘವೇಂದ್ರ ಗುರುಸಾರ್ವಭೌಮರ 428ನೇ ವರ್ಧಂತ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಯಚೂರಿನ ವಿದ್ವಾನ್ ಶ್ರೀ ರಾಘವೇಂದ್ರ ಸಿ.ಎನ್. ಹಾಗೂ ಶ್ರೀಮತಿ ರಶ್ಮಿ ಸಿ.ಎನ್. ರಾಘವೇಂದ್ರ ದಂಪತಿಗಳು ದಾಸವಾಣಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
"ದಾಸರೆಂದರೆ ಪುರಂದರ ದಾಸರಯ್ಯ", "ತುಂಗಾ ತೀರದಿ ನಿಂತ ಸುಯತಿವರಾನ್ಯರೆ",
"ನದಿ ತೀರದಿ ರಾಜಿಪ ಯತಿಯ ನೀರೇ ನೋಡೋಣ ಬಾ", "ರಾಘವೇಂದ್ರ ಗುರುರಾಯ ಶುಭಕಾಯ", "ಶಿವನ ಭವನ ಮನೆವೆ ನೆನೆ ಗಿರಿಜಾಧವನ", "ಪ್ರಾಣದೇವ ನೀನಲ್ಲದೆ ಕಾಯ್ವರ",
"ಏನೂ ಧನ್ಯನೋ ಹನುಮ ಎಂಥಾ ಮನ್ಯಾನೋ", "ಭಾಗ್ಯದ ಲಕ್ಷ್ಮಿ ಬಾರಮ್ಮ", "ನೀರೇ ನೀ ಕರೆತಾರೆ ಮರಸುಂದರನ", "ನಿನ್ನ ಭಕುತಿ ಬೀರೋ ದೇವಾ", "ಪಂಡರಾಪುರ ರಾಜ ವಿಠ್ಠಲ", "ಮದನ ಜನಕ ತೊರವೆಯ ನರಸಿಂಹ", "ಕಾಯೋ ಕರುಣಾ ನಿಧೇ" ಮತ್ತು "ಖಗವಾರ ಗಮನಾ" ಮುಂತಾದ ಕೃತಿಗಳನ್ನು ಗಾಯಕ ದಂಪತಿಗಳು ಸುಶ್ರಾವ್ಯವಾಗಿ ಹಾಡಿದ್ದು, ನೆರೆದಿದ್ದ ಸಂಗೀತಾಭಿಮಾನಿಗಳ ಮನಸೂರೆಗೊಂಡಿತು. ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ತಬಲಾದಲ್ಲಿ, ಶ್ರೀ ಶ್ರೀಹರ್ಷ ಹಾರ್ಮೋನಿಯಂನಲ್ಲಿ, ಶ್ರೀ ಚಿರಾಗ್ ದೇಸಾಯಿ ತಾಳದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದ ನಂತರ ಎಲ್ಲಾ ಕಲಾವಿದರನ್ನೂ ಸನ್ಮಾನಿಸಲಾಯಿತು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದರು.