ಬೆಂಗಳೂರು, ಮಾರ್ಚ್ 05 (ಕರ್ನಾಟಕ ವಾರ್ತೆ): ಗ್ರಾಮ ಲೆಕ್ಕಾಧಿಕಾರಿಗಳು ಒಂದು ಕಡೆ ಕೂತು ಕೆಲಸ ಮಾಡಲು ಸಹಾಯವಾಗುವಂತೆ ಛಾವಡಿಗೆ ಪರ್ಯಾಯವಾಗಿ ಸ್ಥಳವಕಾಶವನ್ನು ಒದಗಿಸಲು ಗ್ರಾಮೀಣಾಭಿವೃದ್ಧಿ ಸಚಿವರ ಜೊತೆ ಚರ್ಚಿಸಿ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಕೂಡಲು ಅವಕಾಶ ಮಾಡಿಕೊಡಲು ಯೋಜಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸದÀನದಲ್ಲಿಂದು ಪರಿಷತ್ ಸದಸ್ಯ ಕೇಶವ ಪ್ರಸಾದ್ .ಎಸ್ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು ಗ್ರಾಮಲೆಕ್ಕಾಧಿಕಾರಿಗಳಿಗೆ ಒದಗಿಸುವ ಛಾವಡಿಗಳು ರಾಜ್ಯದಲ್ಲಿ ಬಹುತೇಕ ಶಿಥಿಲಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ಅವುಗಳು ಈಗಾಗಲೇ ಹಲವು ದಶಕಗಳ ಹಿಂದೆ ಕಟ್ಟಲ್ಪಟ್ಟವು, ಅವುಗಳನ್ನು ರಾಜ್ಯ ಮಟ್ಟದಲ್ಲಿ ಒಂದೇ ಸಮಯದಲ್ಲಿ ಪುನರ್ ನಿರ್ಮಾಣ ಅಥವಾ ದುರಸ್ತಿ ಮಾಡುವುದಕ್ಕಿಂತ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಸರ್ಕಾರ ಚಿಂತಿಸುತ್ತಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ದಾಖಲೆಗಳನ್ನು ಸಂರಕ್ಷಿಸಿಕೊಳ್ಳಲು ಅವರಿಗೆ ಕಪಾಟುಗಳನ್ನು ಒದಗಿಸಲಾಗಿದೆ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಜೊತೆಗೆ ಪ್ರಯಾಣ ಭತ್ಯೆ ಸಹ ಒದಗಿಸಲಾಗುತ್ತಿದೆ.
2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಡಿಜಿ ಕಂದಾಯ ಯೋಜನೆಯಡಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪಟಾಪ್ ವಿತರಣೆ ಮಾಡುವ ಉದ್ದೇಶ ಹೊಂದಿದ್ದು, ಈಗಾಗಲೇ 4000 ಲ್ಯಾಪ್ ಟಾಪ್‍ಗಳನ್ನು ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.