ಬೆಂಗಳೂರು, ಮಾರ್ಚ್ 05 (ಕರ್ನಾಟಕ ವಾರ್ತೆ): ಲೋಕೋಪಯೋಗಿ ಇಲಾಖೆಯಲ್ಲಿ ಫೆಬ್ರವರಿ 2025ರ ಅಂತ್ಯಕ್ಕೆ ರೂ. 8925.01 ಕೋಟಿ ಮೊತ್ತದ ಬಿಲ್ಲುಗಳು ಪಾವತಿಗೆ ಬಾಕಿ ಇರುತ್ತವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರದ ವೇಳೆಯಲ್ಲಿಂದು ಸದಸ್ಯರಾದ ಶರವಣ ಟಿ.ಎ. ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು, 2024-25ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಗೆ ರಾಜ್ಯ ಸರ್ಕಾರ 10023.40 ಕೋಟಿ ಅನುದಾನ ಒದಗಿಸಿದ್ದು, ಪ್ರಸ್ತುತ ಅನುದಾನದಲ್ಲಿ ಫೆಬ್ರವರಿ ಮಾಹೆಯ ಅಂತ್ಯಕ್ಕೆ ರೂ. 8392.65 ಕೋಟಿ ಅನುದಾನ ಬಿಡುಗಡೆ ಮಾಡಿ ಬಾಕಿ ಬಿಲ್ಲುಗಳನ್ನು ತೀರುವಳಿ ಮಾಡಲಾಗಿದೆ.ಸದರಿ ಬಾಕಿ ಬಿಲ್ಲುಗಳ ತೀರುವಳಿಗೆ ಪ್ರಸಕ್ತ ಸಾಲಿಗೆ ಒದಗಿಸಿರುವ ಅನುದಾನ ಹಾಗೂ ಮುಂದೆ ಒದಗಿಸಲಾಗುವ ಅನುದಾನದ ಲಭ್ಯತೆಯನ್ನಾಧರಿಸಿ ಹಂತ-ಹಂತವಾಗಿ ಕಾಮಗಾರಿಗಳ ಬಾಕಿ ಬಿಲ್ಲುಗಳನ್ನು ಪಾವತಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು.