ನಗರದ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಓಂ ಶ್ರೀ ಗಂಗಮ್ಮ ದೇವಿ ದೇವಸ್ಥಾನದಲ್ಲಿ ಭಾನುವಾರದಿಂದ (ಕಳೆದ ಮೂರು ದಿನಗಳಿಂದ) 18 ನೇ ವರ್ಷದ ವಾರ್ಷಿಕೋತ್ಸವ ಮತ್ತು ಬ್ರಹ್ಮರಥೋತ್ಸವವನ್ನು ಆಚರಿಸಲಾಯಿತು. ಮಂಗಳವಾರದಂದು ಶ್ರೀ ಗಂಗಮ್ಮ ದೇವಿಯ ರಥಾರೋಹಣವನ್ನು ಭವ್ಯ ಅಲಂಕೃತ ರಥದಲ್ಲಿ ನೆರವೇರಿಸಿಲಾದ, ಈ ರಥೋತ್ಸವದಲ್ಲಿ ನಗರದ ನಾನಾ ಭಾಗಗಳಿಂದ ಮಾತ್ರವಲ್ಲದೆ, ಅಕ್ಕಪಕ್ಕದ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಬ್ರಹ್ಮರಥೋತ್ಸವದಲ್ಲಿ ಭಾಗಿಯಾದರು.
ಮೂರು ದಿನಗಳ ಕಾಲ ನಡೆದ ಈ 18ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ನವ ಚಂಡಿಕಾ ಹೋಮ, ಶ್ರೀ ಗುರು, ಶ್ರೀ ಗಣಪತಿ ಮತ್ತು ದೇವಿ ಪ್ರಾರ್ಥನೆ, ಗೋ ಪೂಜೆ, ಗಂಗಾ ಪೂಜೆ, ಪುಣ್ಯಾಹ, ಪಂಚಗವ್ಯ, ದೇವನಂದಿ, ಕಂಕಣಧಾರಣೆ, ವಿಶೇಷ ಪಂಚಾಮೃತ ಅಭಿಷೇಕ, ಛಂದಸ್ಮೃತ ಅಭಿಷೇಕ, ಮಹಾ ಧನಸ್ವರೂಪಿ ಹೋಮ, ಮಹಾರಥೋತ್ಸವ, ಅಷ್ಟಾವಧಾನ ಸೇವೆ, ಪುಷ್ಪಾಲಂಕಾರ, ಮಹಾ ನವ ಚಂಡಿಕಾ ಹೋಮದ ಸಂಕಲ್ಪ, ಚಂಡಿಕಾ ಹೋಮ, ಕುಮಾರಿ ಪೂಜೆ, ಸುಮಂಗಲಿ ಪೂಜೆ, ಕಲಾಕರ್ಷಣ ಹೋಮ ಕುಂಭಾಭಿಷೇಕ, ರಥಾಂಗ ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ನಿತ್ಯ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಸಂಸ್ಥಾಪಕರಾದ ದಿವಂಗತ ಶ್ರೀ ನಟರಾಜನ್ ಕಣ್ಣಪ್ಪನವರು ಈಗಾಗಲೇ ನಿಗಧಿಗೊಳಿಸಿರುವ ಕಾರ್ಯ ವಿಧಾನಾನುಸಾರವಾಗಿ, ಹಾಲಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರೀ
ಸುಧಾಕರ್ ನಟರಾಜನ್ ರವರ ಮಾರ್ಗದರ್ಶನ ಹಾಗೂ ಉಸ್ತುವಾರಿಯಲ್ಲಿ ಶ್ರೀ ಕುಮಾರ್ ನಟರಾಜನ್ ಹಾಗೂ ಆಡಳಿತ ಮಂಡಳಿಯವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿ ಬಂದ ಭಕ್ತರಿಗೆ ಅನುಕೂಲ ಕಲ್ಪಿಸಿದ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ರಹ್ಮರಥೋತ್ಸವವು ಸಾಗಿ ನಂತರ ದೇವಸ್ಥಾನಕ್ಕೆ ಹಿಂತಿರುಗುವವರೆಗೆ ಶ್ರೀ ಗಂಗಮ್ಮ ದೇವಿಯ ರಥೋತ್ಸವದಲ್ಲಿ ಸಾರ್ವಜನಿಕರು ಮತ್ತು ಸ್ಥಳೀಯರು ಭಕ್ತಿಯಿಂದ ಭಾಗವಹಿಸಿ, ದಾರಿಯುದ್ಧಕ್ಕೂ ಪೂಜೆ ಸಲ್ಲಿಸಿದರು.