ಬಲಿ ಪಾಡ್ಯಮಿ:ಕಾರ್ತೀಕ ಶುದ್ಧ ಪಾಡ್ಯಮಿ ದಿನ ಬಲಿ ಪಾಡ್ಯಮಿ ದಿವಸ. ಈ ದಿನ ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟ ಬಲಿ ಚಕ್ರವರ್ತಿ ಪುನಃ ಭೂಮಿಗೆ ತನ್ನ ಪ್ರಜೆಗಳನ್ನು ನೋಡಲು ಬರುವನು ಎಂಬ ಪುರಾಣೋಕ್ತ ಕಥೆ ಇದೆ.ಬಲಿ ಚಕ್ರವರ್ತಿಯನ್ನು ಸ್ವಾಗತಿಸಲು ಜನಗಳು ಸಂಭ್ರಮದಿಂದ ರಂಗೋಲಿ ಹಾಕಿ ಬೆಳೆದ ದವಸ ಧಾನ್ಯ ಇಟ್ಟು, ಗೋ ಪೂಜೆ ಮಾಡಿ ಪಟಾಕಿ ಸಿಡಿಸಿ ಸಂಭಮಿಸುತ್ತಾರೆ.
ಈ ದಿನ ಬೆಳಿಗ್ಗೆ ಕುಟುಂಬದ ಹಿರಿಯ ಗೃಹಸ್ಥ ನಿತ್ಯ ದೇವರ ಪೂಜೆ ಮುಗಿಸಿ ಬಲೀಂದ್ರನ ರಂಗೋಲಿ ಹಾಕುತ್ತಾರೆ.ಅಂದರೆ ನಾಲ್ಕು ದಿಕ್ಕುಗಳಲ್ಲಿ, ಒಂದು ಪೀಠದ ಮೇಲೆ ಹಸುವಿನ ಸಗಣಿ ಇಟ್ಟು ಅದಕ್ಕೆ ಚೆಂಡು ಹೂವು ಸಿಕ್ಕಿಸಿ , ಪೀಠದ ಮಧ್ಯ ಭಾಗದಲ್ಲಿ ಅದೇ ರೀತಿ ಇನ್ನೊಂದು ಇಡುತ್ತಾರೆ.ಇದಕ್ಕೆ ಕೆರಕ ಎನ್ನುವರು.ಇದನ್ನು ಗಣಪತಿಯ ಪ್ರತಿರೂಪ ಎಂದು ಕರೆಯುತ್ತಾರೆ.ನಂತರ ಪೀಠದ ಮಧ್ಯ ಭಾಗದ ಕೆರಕನಿಗೆ ತಾವು ಬೆಳೆದ ದವಸ ಧಾನ್ಯದ ತೆನೆಗಳನ್ನು ಸಿಕ್ಕಿಸಿ, ಈ ರಂಗೋಲಿಗೆ ಪೂಜೆ, ನೈವೇದ್ಯ ಮಾಡುತ್ತಾರೆ.ಮನೆಯ ಪ್ರಮುಖ ದ್ವಾರದ ಹೊಸ್ತಿಲಿನ ಎರಡು ಬದಿಗಳಲ್ಲಿ ಇದೆ ರೀತಿ ಕೆರಕನನ್ನು ಇಡುವರು.
ಬೆಳಿಗ್ಗೆ ಅಥವಾ ಸಂಜೆ ಗೊ ಪೂಜೆ ಮಾಡಲಾಗುತ್ತದೆ. ಈ ದಿನ ಹಬ್ಬದಡುಗೆ ಎಂದರೆ, ಪಾಯಸ, ಒಬ್ಬಟ್ಟು,ಒತ್ತು ಶ್ಯಾವಿಗೆ, ಕಡುಬು ಎಂದರೆ ಇಡ್ಲಿ ಮಾಡುವರು.
ಸಂಜೆಗೆ ಬಲೀಂದ್ರನಿಗೆ ಮಂಗಳಆರತಿ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಈ ದಿನ ಪಟಾಕಿ ಇತ್ಯಾದಿ ಸಿಡಿಮದ್ದು ಸುಟ್ಟು ಹಬ್ಬ ಆಚರಿಸುವರು.ಮದುವೆಯಾದ ವರುಷ ನವ ದಂಪತಿಗಳು ತಮ್ಮ ಪ್ರಥಮ ದೀಪಾವಳಿ ಹಬ್ಬವನ್ನು ಹೆಂಡತಿಯ ತವರು ಮನೆಯಲ್ಲಿ ಆಚರಿಸುವ ಪದ್ಧತಿ ಕೆಲವೆಡೆ ಇದೆ. ಆಗ ಅಳಿಯ ಹಬ್ಬಕ್ಕೆ ತಮ್ಮ ಮನೆಯ ಇತರೆ ಸದಸ್ಯರು ಅಥವಾ ಸಂಬಂಧಿಗಳನ್ನು ತನ್ನ ಹೆಂಡತಿಯ ತವರಿಗೆ ಕರೆದೊಯ್ಯುವ ರಿವಾಜು ಇದೆ.
ಚಿಕ್ಕ ಮಕ್ಕಳಿಗೆ ಆರತಿ ಮಾಡಿ ಮುತ್ತೈದೆಯರನ್ನೂ ಕರೆದು ಉಂಡೆ ಹಂಚುವ ಪದ್ಧತಿ ಇದೆ.ಹಾಗೆಯೇ ಮಗಳು ಅಳಿಯನಿಗೆ ,ಕೂರಿಸಿ ಆರತಿ ಎತ್ತಿ ಇಬ್ಬರಿಗೂ ಉಡುಗೊರೆ ನೀಡುವ ಸಂಪ್ರದಾಯ ಇದೆ.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಈ ಹಬ್ಬ ಬೇರೆ ಜಾತಿಯವರಲ್ಲಿ ಅವರ ಮನೆಯ ಆಚರಣೆಯಂತೆ ಇರುತ್ತದೆ.
ವೈಚಾರಿಕವಾಗಿ ನೋಡಿದರೆ ಇದು ಕೃಷಿಕರ ಹಬ್ಬ. ಬೆಳೆಗಳು ಬಂದಿರುವ ಈ ಸಮಯದಲ್ಲಿ ಅದನ್ನು ಕೊಯ್ದು ಪೂಜಿಸಿ, ದೇವರಿಗೆ ಅರ್ಪಿಸಿ ನಂತರ ಮಾರುವ, ಬಳಸುವ ಒಂದು ಕ್ರಮ ಅಷ್ಟೇ.ಹಾಗು ನವ ದಂಪತಿಗಳನ್ನು ಆಹ್ವಾನಿಸಿ ತಮ್ಮ ಮನೆಯ ಬೆಳೆಗಳ ಪರಿಚಯ, ಹಾಗು ಉಡುಗೊರೆ ನೀಡಿ ತಮ್ಮ ಮನೆಯವರೊಂದಿಗೆ ಪ್ರಥಮ ದೀಪಾವಳಿ ಆಚರಿಸುವುದು ಒಂದು ಸಿಹಿ ನೆನಪಾಗಿರುತ್ತದೆ.ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ, ಗಂಡಾಗಲಿ ಅಥವಾ ಹೆಣ್ಣಾಗಲೀ ಆರತಿ ಎತ್ತಿ ಸಿಹಿ ಹಂಚುವುದು, ಮಕ್ಕಳ ಸಂಕೋಚ ಕಡಿಮೆ ಮಾಡುತ್ತದೆ ಹಾಗು ದೃಷ್ಟಿ ಪರಿಹಾರ ಆಗುತ್ತದೆ. ಈ ಹಬ್ಬಕ್ಕೆ ಮನೆಯ ಸದಸ್ಯರೆಲ್ಲ ಸೇರುವುದು ,ಸಮಾಜದ ಸದಸ್ಯರನ್ನು ಕಲೆತಂತಾಗುತ್ತದೆ.
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
brahmies@gmail.com