ಹೀಗೊಂದು ಪ್ರಹಸನ ವಿಕಸಿತದತ್ತ

VK NEWS
By -
0

ಅನಾವಶ್ಯಕವಾಗಿ ಖರ್ಚು ಮಾಡೋದು ನಮ್ಮ ಹಿಂದಿನವರ ಜಾಯಮಾನವಲ್ಲ. 'ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಸಾಕು' ಎನ್ನುತ್ತಾರೆ. ದುಂದು ವೆಚ್ಚ ಕೂಡದೇ ಕೂಡದು.  ಯಾರಾದರೂ ಕಷ್ಟದಲ್ಲಿರುವುದು ಕಂಡರೆ ತಮಗೆ ಸಾಧ್ಯ ಆದಷ್ಟೂ ಸಹಾಯ ಮಾಡುವುದರಲ್ಲಿ ಇಂಥವರು ಮುಂದು ಯಾವಾಗಲೂ. ಅವರಿಗೆ ಅವರೇ ಸಾಟಿ! 

ನಮ್ಮನೆಯ ಹಿರಿಯರೊಬ್ಬರು ಇಂತಹವರ ಸಾಲಿಗೆ ಸೇರಿದವರು. ಬೇಕು - ಅವಶ್ಯಕ (Want - Need) ಬಗ್ಗೆ ಅವರದ್ದೇ ಆದಂತಹ ತರ್ಕಬದ್ಧವಾದ ಮಾತುಗಳನ್ನು ಕೇಳಲು ಹೆಮ್ಮೆ ಎನಿಸುತ್ತದೆ. ಖಂಡಿತಾ ಅವರ ಮಾತು ಕಟು ಸತ್ಯ. ಪ್ರತಿಯೊಬ್ಬರೂ ಅರಿತು ಪಾಲಿಸಲೇಬೇಕು. 

ಇವರ ಒಂದು ಕಥೆ ಕೇಳಿ. 

ನಮ್ಮ ಬೆಂಗಳೂರಿನ ಗಿರಿನಗರದಲ್ಲಿ  ರಾಮಚಂದ್ರಾಪುರದ ಮಠವಿದೆ. ರಾಮ ಸೀತೆ ಲಕ್ಷ್ಮಣ ಹನುಮಂತರೊಡಗೂಡಿದ ಸುಂದರ ಸ್ವಚ್ಛ ದೇವಸ್ಥಾನ ಇದು. ಸದಾ ಒಂದಿಲ್ಲೊಂದು ದೇವತಾ ಕಾರ್ಯಗಳು - ಪೂಜೆ, ಹೋಮ - ಹವನಗಳು,  ಗುರುವಂದನಾ ಕಾರ್ಯಕ್ರಮಗಳು, ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಗುರುಗಳ ಚಾತುರ್ಮಾಸ್ಯ,  ಕಲೆಯನ್ನು ಪ್ರೋತ್ಸಾಹಿಸಲು ನಡೆಯುವ ಕಲೋತ್ಸವಗಳು - ಯಕ್ಷಗಾನ, ಭರತನಾಟ್ಯ, ಸಂಗೀತ, ಸಾಹಿತ್ಯ , ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಸಾಮಾನ್ಯವಾಗಿ ನಿರಂತರವಾಗಿ ಇಲ್ಲಿ ನಡೆಯುತ್ತಿರುತ್ತದೆ. ಇಲ್ಲಿನ ಸ್ವಯಂಸೇವಕರು ತಮ್ಮ ಮನೆಗೆ ಬಂದ ಅತಿಥಿಗಳನ್ನು ಆದರಿಸುವಂತೆ ದೇವಸ್ಥಾನಕ್ಕೆ ಬಂದ ಭಕ್ತರೆಲ್ಲರಿಗೂ ಮೂರು ಹೊತ್ತೂ ಉದರ ಪೋಷಣೆಯನ್ನು ಮಾಡುತ್ತಾರೆ! ಇಲ್ಲಿಯ ಉಪ್ಪಿಟ್ಟು, ಅವಲಕ್ಕಿ ರುಚಿ ಒಂದು ತುತ್ತು ಹೆಚ್ಚು ತಿನ್ನುವಂತೆ ಮಾಡುತ್ತದೆ. ಕಷಾಯ ಕುಡಿದು ಆಹಾ..! ಎನ್ನುವವರೇ ಎಲ್ಲಾ! 'ಅಮೃತ ಫಲ' ಇಲ್ಲಿಯ ಪ್ರಸಾದ ವೈಶಿಷ್ಟ್ಯ. ಇದರ ಸ್ವಾದವನ್ನು ಸವಿದವನೇ ಬಲ್ಲ! 

ಇಲ್ಲಿನ ಸಂಸ್ಕಾರ ಬದ್ಧ ಕಾರ್ಯಕ್ರಮಗಳು ನಮ್ಮ ಸುತ್ತಮುತ್ತ ನಡೆಯುತ್ತಿರುವುದು ಹಾಗೂ ಭಕುತಿ - ಸಂಸ್ಕೃತಿಯನ್ನು ಒಟ್ಟಾಗಿ ಪೋಷಿಸುತ್ತಿರುವುದು, ಈ ನಮ್ಮ ಬೆಂಗಳೂರನ್ನು ಸಂಸ್ಕೃತಿ ಭರಿತವಾಗಿ ಹಾಗೂ ಸುರಕ್ಷತೆಯಲ್ಲಿಡಲು ಕಾರಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ! 

ಕಥೆಗೆ ಬರ್ತೀನಿ ಇರಿ...

ಈ ಮಠ ನಮ್ಮನೆಯ ಹಿರಿಯರಿಗೆ  ಪ್ರೀತಿಯ ದೈವ ಸಾನಿಧ್ಯ.  ತಮ್ಮ ಕಾರ್ಯ ಕ್ಷೇತ್ರದ ನಿವೃತ್ತಿಯ ನಂತರ ಇಲ್ಲಿ ನಡೆಯುವ ದೇವತಾ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವುದು ಇವರ ದೈನಿಕ ಕ್ರಿಯೆ ನನ್ನಿಂದ ಏನಾದರೂ ಅಳಿಲುಸೇವೆ ಆಗಬಹುದು ಅಂತ ಹೋಗ್ತೀನಿ ಅಂತಾರೆ. 

1980ರ ಬಜಾಜ್ ಸ್ಕೂಟರ್ ಇವರ ಅಚ್ಚುಮೆಚ್ಚಿನ ಸಂಗಾತಿ.  ಎಲ್ಲೇ ನಿಲ್ಲಿಸಲಿ ಅದನ್ನ ಹೊರಡುವ ದಿಕ್ಕಾಗೆ ನಿಲ್ಲಿಸುತ್ತಾರೆ. ಮತ್ತೆ ಸವಾರಿ ಹೊರಡುವಾಗ ಆಚೆ ಈಚೆ ಬದಿಯಲ್ಲಿ ನಿಲ್ಲಿಸಿದ ಗಾಡಿಗಳಿಗೆ ಯಾವುದೇ ಹಾನಿ ಆಗಬಾರದು ಎಂಬುದೇ ಇವರ ಉದ್ದೇಶ. ಇನ್ನೊಂದು ವಿಚಾರ ಯಾವುದೇ ವಸ್ತು ಎಷ್ಟೇ ಹಳೆಯದಾದರೂ ಹಾಳಾಗುವುದಿಲ್ಲ ಇವರ ಹತ್ತಿರ! ಪ್ರತಿಯೊಂದನ್ನೂ ನಾಜೂಕಾಗಿ ನೋಡಿಕೊಳ್ಳುವ ಜಾಯಮಾನ ಇವರದ್ದು. "ಹಳೆಯದು ಬಾಳಿಕೆ ಬರುವಷ್ಟು ಹೊಸತು ಬರುವುದಿಲ್ಲ" ಎನ್ನುತ್ತಾರೆ.

ಮನುಷ್ಯ ಹಳಬನಾದ ಮತ್ತೆ ಪರಿಪಕ್ವನಾಗುವುದು ಹಣ್ಣು ಪಕ್ವವಾದರೆ ಬಲು ರುಚಿ ಎಂಬಂತೆ...

ಸತ್ಯ ಅಲ್ಲವೇ ?

ಕಥೆಗೆ ಬರ್ತೀನಿ ಇರಿ. 

ಈಗ ಕೆಲ ತಿಂಗಳುಗಳ ಹಿಂದೆ ಇವರು ಈ ಗಿರಿನಗರ ಮಠಕ್ಕೆ ಹೋಗಿದ್ದರು ತಮ್ಮ ಪ್ರೀತಿಯ ಬಜಾಜನ್ನೇರಿ.  ದೇವಸ್ಥಾನದ ಒಳ ಹೋಗುವಾಗ ತಮ್ಮ ಹಳೆಯ ಹಳೆಯ ಹಳೆಯ ಚಪ್ಪಲಿ ಮೆಟ್ಟಿದ್ದರು.  

ಯಥಾ ಪ್ರಕಾರ ತಮ್ಮ ಸ್ಕೂಟರಿನ ಕೆಳ ಆ ಚಪ್ಪಲಿ ಇಟ್ಟಿದ್ದರು. ನಡೆಯುವ ಅಗತ್ಯವಿಲ್ಲದ ಕಾರಣ ಅದರೊಂದಿಗೆ ಬಂದಿದ್ದರು.  ಕಾರ್ಯಕ್ರಮ ಮುಗಿಸಿ ಹೊರ ಬಂದಾಗ ಅವರ ಆ ಅಷ್ಟು ಹಳೆಯದಾದ ಚಪ್ಪಲಿಯ ಜಾಗದಲ್ಲಿ ಉಂಗುಷ್ಠ ಮಾತ್ರ ಹರಿದ ಒಂದು ಚಪ್ಪಲಿ ! ಅದನ್ನ ನೋಡಿ ಖುಷಿಯ ಕ್ಷಣ ಅವರಿಗೆ.  ಚಪ್ಪಾಳೆ ಹೊಡೆದು ಸಂಭ್ರಮಿಸಿದ ಕ್ಷಣ ಎನ್ನಬಹುದೇನೋ! ಆ ಕ್ಷಣವನ್ನು ಕಂಡು ಕಣ್ಣು ತುಂಬಿಸಿಕೊಂಡವರೇ ಸರಿಯಾಗಿ ಬಣ್ಣಿಸಬಹುದು! ಕಾರಣ ಇಷ್ಟೇ ಅಂತಹ ಚಪ್ಪಲಿಯನ್ನೂ,  ಹಳೆಯ ಹಳೆಯ ಹಳೆಯದಾದ ಚಪ್ಪಲಿಯನ್ನೂ ಬಯಸಿ ತೆಗೆದುಕೊಂಡಿದ್ದಾರೆ ಎಂದರೆ ಅದರ ಅವಶ್ಯಕತೆ ಆ ಮನುಷ್ಯನಿಗೆ ಎಷ್ಟಿರಬಹುದು ಹಾಗಾಗಿ ಅದು ಅವಶ್ಯನಿಗೇ ತಲುಪಿತಲ್ಲ ಎಂಬುದು ಅವರ ತರ್ಕ! 

"ಮತ್ತೆ....ಆನು ಹಾಕಿಂಡು ಹೋದ ಚಪ್ಲಿ ಎಷ್ಟು ಜೀರ್ಣಾವಸ್ಥೆಲಿ ಇತ್ತು ಹೇಳಿದರೆ,ಅಡಿ ತಳದು ಒಟ್ಟೆ ಆಗಿತ್ತು.ಅದರನ್ನೂ ಇಷ್ಟಪಟ್ಟವಾ ಆಶ್ಚರ್ಯ!" ಎಂದು ರಸವತ್ತಾಗಿ ಆ ಘಟನೆಯ ವಿವರಿಸುತ್ತಾರೆ.

 "ಶಂಕರಾಚಾರ್ಯರು ಭರಣಿ ಹಿಡಿದು ಹಿಂದೆ ಹೋದ ಹಾಗೆ ಇವರು ಆ ಮನುಷ್ಯನ ಹಿಂದೆ ಹೋಗಿ,  ಅದು ಚೆನ್ನಾಗಿಲ್ಲ ಮಾರಾಯ! ನಿನ್ನ ಚಪ್ಪಲಿಯೇ ಒಳ್ಳೆಯದಾಗಿ ಉಂಟು.  ಅದನ್ನೂ ಕೊಂಡು ಹೋಗು ಎಂದು ಹೋಗದೆ ಇದ್ದಿದ್ದೆ ಪುಣ್ಯ" ಎನ್ನುತ್ತಾರೆ ನನ್ನವರು. 

 ಮನೆಯವರೆಲ್ಲರಿಗೂ ಖುಷಿ ತಂದ ಪ್ರಸಂಗ ಇದು ಸಧ್ಯ ಚಪ್ಪಲಿಗೊಂದು ಗತಿಯಾಯಿತಲ್ಲ ಎಂದು!

ಇನ್ನೊಂದು ಪ್ರಹಸನದತ್ತ  ಮುಂದೊಂದು ದಿನ!

*ಮಂಗಳಾ ಗಣೇಶ

Post a Comment

0Comments

Post a Comment (0)