'ಸ್ವರ್ಣ ಗೌರಿ' ವ್ರತ- ಪೂಜೆ- ಕಥೆ

VK NEWS
By -
0


ಪೂಜೆ ವಿಧಾನ :- ನಾನು ಮಾಡುವ ಕ್ರಮದಲ್ಲಿ ಪ್ರಮುಖವಾದದ್ದನ್ನು ಮಾತ್ರ ಬರೆದಿದ್ದೇನೆ..

ಈ ಸಲ ಭಾದ್ರಪದ ಮಾಸ ತದಿಗೆ, ಶುಕ್ರವಾರ 06.09.2024 ರಂದು 'ಸ್ವರ್ಣ ಗೌರಿ ವ್ರತ' ಬಂದಿದೆ'. ಈ ವ್ರತವನ್ನು ಮದುವೆಯಾದ ಮಹಿಳೆಯರು, ಮತ್ತು ಮದುವೆಯಾಗದ ಹೆಣ್ಣು ಮಕ್ಕಳು, ಮಾಡುವ ವ್ರತ. 'ಸ್ವರ್ಣ ಗೌರಿ'  ಹೆಸರೇ ಸೂಚಿಸುವಂತೆ ಸಂಪಧ್ಭರಿತ, ಅಷ್ಟೈಶ್ವರ್ಯ ಕೊಡುವ ಸ್ವರ್ಣ ಗೌರಿ.  ಅರಿಶಿಣ ಬಣ್ಣದಿಂದ ಕೂಡಿರುತ್ತಾಳೆ. ಶಿವನ ಅರ್ಧಾಂಗಿ. ಸ್ವರ್ಣ ಅಂದರೆ ಚಿನ್ನ. ಬಂಗಾರ ಅರಿಶಿನ ಬಣ್ಣದಲ್ಲಿರುತ್ತದೆ ಆದ್ದರಿಂದ ಗೌರಿಯನ್ನು 'ಸ್ವರ್ಣ ಗೌರಿ' ಎಂದು ಕರೆಯುತ್ತೇವೆ. ಶುಭಕರವಾದ  'ಗೌರಿ' ವ್ರತ ಇರುವವರು  ವ್ರತವನ್ನು  ಹಾಗೂ ಪದ್ಧತಿ ಇಲ್ಲದಿದ್ದರೆ ಗೌರಿಯನ್ನು ಶ್ರದ್ಧಾ ಭಕ್ತಿಯಿಂದ  ಪೂಜೆ, ಅರ್ಚನೆ, ನೈವೇದ್ಯ ,ಮಂಗಳಾರತಿ  ಮಾಡಿದರೆ ಸಂಸಾರವು ಅಷ್ಟೈಶ್ವರ್ಯದಿಂದ ತುಂಬುತ್ತದೆ  (ಅಷ್ಟೈಶ್ವರ್ಯ ಅಂದರೆ, ಧನ -ಕನಕ, ಆರೋಗ್ಯ -ಭಾಗ್ಯ, ಸತಿ- ಪತಿ, ಗಂಡು- ಹೆಣ್ಣು ಮಕ್ಕಳು.  ಸುಖ -ಸಂತೋಷ, ವಿದ್ಯೆ ಬುದ್ಧಿ , ಆಯಸ್ಸು ಶ್ರೇಯಸ್ಸು ಗೃಹ ಸುಖ, ಎಲ್ಲವೂ ಸೇರುತ್ತೆ)


ಹಬ್ಬದ ತಯಾರಿ : - ಹಬ್ಬದ ಒಂದು ದಿನ ಮೊದಲೇ, ಅಂದ್ರೆ ಪಾಡ್ಯದ ದಿನ ಎಣ್ಣೆ ಹಚ್ಚಿ ತಲೆಗೆ ಎರೆದುಕೊಂಡು, ಎರಡು ಕೈಗಳಿಗೆ ಹೊಸ ಬಳೆ ಹಾಕಬೇಕು. (ಬೆಸ ಮತ್ತು ಸರಿ ಸಂಖ್ಯೆ) ಬಲಗೈಗೆ 9, ಎಡ ಕೈಗೆ ಎಂಟು, ಹಬ್ಬದ ಹಿಂದಿನ ದಿನ, ಪೂಜೆಗೆ ಉಡುವ ಸೀರೆ, ಹೂ, ಒಡವೆ, ಎಲ್ಲ ಜೋಡಿಸಿ, ಹಬ್ಬದ ದಿನ ಮುಂಜಾನೆ ಎದ್ದು  ( ಬೇಗನೆ ಪೂಜೆ ಮಾಡಿದರೆ ಒಳ್ಳೆಯದು) ಸ್ನಾನ ಮಾಡಿ, ಗೌರಿ ಮುಂದೆ ರಂಗೋಲಿ ಹಾಕಿ ಮನೆ ಮುಂದಿನ  ಹೊಸಿಲು ಅಂಗಳಕ್ಕೆ ರಂಗೋಲಿ, ಮುಂದಿನ ಬಾಗಿಲಿಗೆ ಮಾವಿನ ತೋರಣ ಎಲ್ಲಾ ಆದಮೇಲೆ,

ಕೆನ್ನೆಗೆ  ಅರಿಶಿನ, ಹಣೆಗೆ ಕುಂಕುಮ, ರೇಷ್ಮೆ ಸೀರೆ, ಆಭರಣ ಧರಿಸಿ, ತಲೆಗೆ ಹೂ ಮುಡಿದು ಪೂಜೆಗೆ ಸಿದ್ಧವಾಗಬೇಕು. ಹೆಣ್ಣು ಮಕ್ಕಳಿಗೆ ಗೌರಿ ಪೂಜೆ ಯಷ್ಟು  ಸಂಭ್ರಮ ಇನ್ನೊಂದಿಲ್ಲ. ಈ ಹಬ್ಬದಲ್ಲಿ  ಮದುಮಗಳಂತೆ ಸಿಂಗರಿಸಿ ಕೊಂಡು ವ್ರತ ಮಾಡುವುದು  ಹಬ್ಬದ ವಿಶೇಷ. (ಕಿವಿಗೆ ಜುಮ್ಕಿ ಬೆಂಡೋಲೆ, ಮಾಟಿ, ಮುತ್ತಿನ ಬೈತಲೆ, ಸೊಂಟದ ಪಟ್ಟಿ, ರೇಷ್ಮೆ ಸೀರೆ, ಕುಸುರಿ ಬ್ಲೌಸ್, ವಂಕಿ, ನಾಗಮುರಿಗೆ, ಪಿಲ್ಲಿ ಕಾಲುಂಗುರ, ಕಾಲ್ಬಳೆ, ಗೆಜ್ಜೆ,  ಜಡೆಗೆ ನಾಗರ, ಕುಚ್ಚು, ತಿರುಪಿನ ಹೂವು, ಬಂಗಾರದ ಮಲ್ಲಿಗೆ ಮೊಗ್ಗು, ಮುಡಿಯಲ್ಲಿ ಹೂವು, ಹೂವಿನ ಜಡೆ, ಕಣ್ಣಿಗೆ ಕಾಡಿಗೆ, ಸುಗಂಧ, ಕುಂಕುಮ ಕೆಳಗೆ ಬೊಟ್ಟು, ಬೆರಳಿಗೆ ಉಂಗುರ, ಕೈಗೆ ಕಡಗ, ಗೌರಿ ಪೂಜೆಗೆ  ಕೂರುವಾಗ  ಸರ್ವಾಲಂಕಾರ 

ಭೂಷಿತರಾಗಬೇಕು, ಮನೆ ಹಾಗೂ  ನೆರೆಹೊರೆಯವರು  ಬೆರಗಾಗುವಂತೆ

ಇಂಥ ಅವಕಾಶಕ್ಕಾಗಿ  ಹೆಣ್ಣು ಮಕ್ಕಳು ಗೌರಿ ಹಬ್ಬಕ್ಕೆ ಕಾಯುತ್ತಾರೆ.   


ಗೌರಿ ಪೂಜೆಗೆ  ಮೊದಲು ಮನೆ ದೇವರ ಪೂಜೆ, ತುಳಸಿ ಪೂಜೆ  ಹಿರಿಯರಿಗೆ ನಮಸ್ಕಾರ, ಮಾಡಿ  ಗೌರಿ ಪೂಜೆಗೆ ಕೂರಬೇಕು. (ಪುರೋಹಿತರನ್ನು ಕರೆಸುವವರು ಸರಿ) ಉಳಿದಂತೆ ಗೌರಿ ಪೂಜೆಗೆ ಕುಳಿತವರು ನಡುವೆ ಏಳ ಬಾರದು ಏನಾದರೂ ಬೇಕಾದರೆ ಮಕ್ಕಳ ಹತ್ತಿರ ಹೇಳಬೇಕು, ಟಿ,ವಿ ಅಥವಾ  ಕಂಪ್ಯೂಟರ್ನಲ್ಲಿ ಗೌರಿ ಹಬ್ಬದ ಸೀಡಿಗಳನ್ನು ಹಾಕಿಕೊಂಡು ಎರಡು ದಿನ ಮೊದಲೇ, ಸೀಡಿ,ಟಿ,ವಿ ಎಲ್ಲಾ ಸರಿ ಇದೆಯಾ ನೋಡಿರಬೇಕು. ಪುರೋಹಿತರು

ಹೇಳುವ ಮಂತ್ರಗಳು ಸ್ಪಷ್ಟವಾಗಿ ಕೇಳಿಸಬೇಕು. ಕೆಲವರು  ಮಂತ್ರ ಜೋರಾಗಿ  ಹೇಳುತ್ತಾರೆ ಕೊನೆಗೆ ನಿಧಾನವಾಗುತ್ತದೆ. ಇನ್ನು ಕೆಲವರು ಮಾಡುವ ವಿಧಾನ  ಹೇಳುತ್ತಿದ್ದರೆ ಕೇಳುವುದಿಲ್ಲ. ಮತ್ತೆ ಕೆಲವು ಮ್ಯೂಸಿಕ್ಕು- ಘಂಟೆ ಶಬ್ದವೇ ಜಾಸ್ತಿ ಇರುತ್ತದೆ. ನಮಗೆ ಮಂತ್ರೋಚ್ಛಾರಣೆ, ಪೂಜೆ ಮಾಡುವ  ವಿಧಾನ, ಸ್ಪಷ್ಟವಾದ ಕಂಠದಲ್ಲಿ ಹೇಳಿದ್ದು ಕೇಳುವಂತಿರಬೇಕು. ಏಕೆಂದರೆ ಅಷ್ಟೆಲ್ಲಾ ಸಡಗರಿಸಿ, ಸವರಿಸಿ, ಅನುಕೂಲ ಮಾಡಿಕೊಂಡು ಪೂಜೆಗೆ ಕುಳಿತಾಗ, ಸೀಡಿಗಳಲ್ಲಿ ಕರಕರ ಶಬ್ದ ಬರುವುದು, ಬಿಟ್ಟು ಬಿಟ್ಟು ಕೇಳುವುದು ಇಂಥ ಯಾವುದೇ ತೊಡಕಿಲ್ಲದಂತೆ,  ಸ್ಪಷ್ಟವಾಗಿ ಕಿವಿಗೆ  ಚೆನ್ನಾಗಿ ಕೇಳುವ ಮತ್ತು ಸ್ಪಷ್ಟವಾಗಿ ಹೇಳಿರುವ  ರೆಕಾರ್ಡ್ಗಳನ್ನು ಹಾಕಿ ಪೂಜೆಗೆ ಕುಳಿತುಕೊಳ್ಳಿ. ಸಂಕಲ್ಪ ದಿಂದ ಹಿಡಿದು, ಪೂಜೆ, ವ್ರತದ ಕಥೆ, ಹಾಗೂ ವಿಸರ್ಜನೆ ಮಂತ್ರದ ವರೆಗೂ ಚೆನ್ನಾಗಿ  ಕೇಳಿಕೊಂಡು ಸಂತೋಷದಿಂದ, ಪೂಜೆ ಮಾಡಿ. 


ಗೌರಿ ಕೂರಿಸುವುದು:-  ಎಲ್ಲಿ ಗೌರಿಯನ್ನು ಕೋರಿಸುತ್ತಿರೋ ಆ ಜಾಗವನ್ನು ಸ್ವಚ್ಛ ಮಾಡಿಕೊಂಡು. ರಂಗೋಲಿ ಬರೆದು, ಗೌರಿ  ಕೂರಿಸಲು ಪೀಠ ಅಥವಾ ಕುರ್ಚಿ ಅಥವಾ ಮಣೆ, ಅಥವಾ ಟಿಪಾಯಿ ಇಟ್ಟು, ಇದರ ಕೆಳಗೆ 8 ದಳದ ಪದ್ಮ ರಂಗೋಲಿ ಬರೆದು, ಪೀಠದ ಮೇಲೆ ಗಣಪತಿ ಮಂಡಲ ಬರೆದು ಅದರ ಮೇಲೆ, ( ಮಣ್ಣಿನ ಗೌರಿ ಇಡುವ ಪದ್ಧತಿ ಇದ್ದರೆ ಅದನ್ನು ಇಡಬಹುದು) ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ  ಬೆಳ್ಳಿ ಅಥವಾ ಹಿತ್ತಾಳೆ - ವೈಟ್ ಮೆಟಲ್- ಕಂಚು ತಂಬಿಗೆಯ ಮಧ್ಯ ಭಾಗಕ್ಕೆ ಸುಣ್ಣದ ಬಟ್ಟು ಸುತ್ತಲೂ ಎಳೆದು ನಡುವೆ ಅರಿಶಿನ ಕುಂಕುಮ ಹಚ್ಚಿ, ತಂಬಿಗೆ ಒಳಗೆ ಐದು ಹಿಡಿ ಅಕ್ಕಿ, ಗೋಟಡಿಕೆ  ಅಥವಾ ಎರಡು ಬಟ್ಟಲಡಿಕೆ, ಅರಿಶಿಣ ಕೊಂಬು, ಕೊಂಬಿನ ಮೇಲೆ ಎರಡು ಮೂರು ಕಡೆ ರೆಂಬೆಗಳಿರುವ( ಮಕ್ಕಳು ಎನ್ನುತ್ತಾರೆ ನೆಟ್ಟಗಿರುವ ಒಂದೇ ಅರಿಶಿನ ಕೊಂಬು ಇಡಬಾರದು), ಅರಿಶಿನ ಕುಂಕುಮದ ಸಣ್ಣ ಪಟ್ಟಣ, ಒಂದು ನಾಣ್ಯ,  ಉಂಗುರ, ಪುಟ್ಟ ಗೌರಿ ಬಳೆ ಬಿಚ್ಚೋಲೆ, ( ಬೇಕಾದರೆ ಡ್ರೈ ಫ್ರೂಟ್ಸ್ ಏಲಕ್ಕಿ ಹಾಕಬಹುದು) ತಂಬಿಗೆಯ ಕಂಠಕ್ಕೆ ಅರಿಶಿನ ಬೇರು ಅಥವಾ ಕರಿಮಣಿ ಮಾಂಗಲ್ಯ ಕಟ್ಟ ಬೇಕು.  ಜುಟ್ಟು - ನಾರು ಇರುವ ಚೆನ್ನಾಗಿರುವ ತೆಂಗಿನಕಾಯಿ ಯನ್ನು ಜುಟ್ಟು ಮೇಲೆ ಬರುವಂತೆ ತಂಬಿಗೆಯ ಮೇಲೆ ಇಡಬೇಕು( ತೆಂಗಿನ ಕಾಯಿ ತುಂಬಾ ನಾರುಗಳು ಇದ್ದರೆ  ಗೆಜ್ಜೆ ವಸ್ತ್ರ ಚೆನ್ನಾಗಿ ನಿಲ್ಲುತ್ತದೆ)  ಅರಿಶಿನ ಆ ಕಡೆ ಈ ಕಡೆ ಮಧ್ಯದಲ್ಲಿ ಕುಂಕುಮ ಹಚ್ಚಿ.  ಪೂಜೆಗೆ ಕೂರುವ ಮೊದಲು ಕಾಯಿ ಜುಟ್ಟಿಗೆ ಮಲ್ಲಿಗೆ  ದಂಡೆ ಸುತ್ತಿ ಜುಟ್ಟಿನ  ಮೇಲೆ (ಸೇವಂತಿಗೆ ತಾವರೆ, ದಾಸವಾಳ, ಗುಲಾಬಿ ಒಂದು)ಹೂವನ್ನು ಸಿಕ್ಕಿಸಬೇಕು. ತೆಂಗಿನಕಾಯಿಗೆ  ಬೆಳ್ಳಿಯ ಗೌರಿ ಮುಖವಾಡ ಹಾಕುತ್ತಾರೆ. ಗೌರಿಯ ಮುಂದೆ ಗಂಗೆ ಇಡಬೇಕು. ಒಂದು  ಲೋಟಕ್ಕೆ ಮಧ್ಯದಲ್ಲಿ ಸುತ್ತಲೂ ಸುಣ್ಣದ ಬಟ್ಟು ಎಳೆದು ನಡುವೆ ಅರಿಶಿನ ಕುಂಕುಮ ಇಟ್ಟು, ಲೋಟದೊಳಗೆ ಎರಡು ವೀಳ್ಯದೆಲೆ ಆ ಕಡೆ ಈ ಕಡೆ ನಿಲ್ಲಿಸಬೇಕು. ಎರಡು ಅಡಿಕೆ ಒಂದು ಕಾಯನ್ನು ಹಾಕಿ ಸ್ವಲ್ಪ ನೀರು ಹಾಕಿ ವೀಳ್ಯದೆಲೆ ಮದ್ಯದಲ್ಲಿ  ಹೂವನ್ನು ಇಡಬೇಕು. ಪೂಜೆ ವೇಳೆ ನೀರು ಹಾಕಿ ಗೆಜ್ಜೆ ವಸ್ತ್ರ ಏರಿಸಿ ಪೂಜೆ ಮಾಡಬೇಕು.‌  


ಬಾಳೆ ಕಂಬ ,ಮಾವಿನ ತೋರಣ, ಮುಂದೆ ಶಂಖ- ಚಕ್ರ- ಪದ್ಮ- ಗೋಪಾದ ಸಹಿತ ರಂಗೋಲಿ ಬರಿಯಬೇಕು. ಪೂಜೆಗೆ ಕೂರುವವರು  ಶಂಖ- ಚಕ್ರ ಸಹಿತ 16 ಪದ್ಮವನ್ನು  ನಿಮ್ಮ ಮುಂದೆ ರಂಗೋಲಿಯಲ್ಲಿ ಬರೆದುಕೊಳ್ಳಬೇಕು. (Or ಅಥವಾ ಮೊದಲೇ ಪೇಪರ್ ನಲ್ಲಿ ಬರೆದಿಟ್ಟುಕೊಂಡು ಅದನ್ನು ಫೈಲ್ ಕವರಲ್ಲಿ ಹಾಕಿ ಕೊಂಡಿರಬೇಕು) ಇದಕ್ಕೆ ಜೋಡಿ ಗೆಜ್ಜೆ ವಸ್ತ್ರ, ಮಂಗಳ ದ್ರವ್ಯ, ಹೂವು ಎಲ್ಲ ಏರಿಸಬೇಕು. ನಮಗೆ ಕೊಳಿತಲ್ಲಿ ಸಿಗುವಂತೆ ಯಾವುದಾದರೂ ದೇವಿಯ ವಿಗ್ರಹವನ್ನು ಇಟ್ಟುಕೊಂಡು ಅಭಿಷೇಕ ಮಾಡಿ ನಂತರ 16 ಪದ್ಮದ ರಂಗೋಲಿ ಜೊತೆ ಇಟ್ಟು ಎಲ್ಲಾ ಪೂಜೆಯನ್ನು ಮಾಡಬೇಕು.  ಪೀಠದ ಮೇಲೆ ಕೂರಿಸಿದ  ಗೌರಿಗೆ   ಗೆಜ್ಜೆ ವಸ್ತ್ರ, ಅರಿಶಿನ ಕುಂಕುಮ, ಚಂದ್ರ- ಬುಕ್ಕಿಟ್ಟು- ಗಂಧ -ಹೂವಿನ ಮಾಲೆ- ಕಾಡಿಗೆ ಕನ್ನಡಿ- ಬಳೆ- ಬಿಚ್ಚೋಲೆ, ಒಟ್ಟಿಗೆ ಎಲ್ಲಾ ಅರ್ಪಿಸಬೇಕು. ಆಮೇಲೆ ಕುಳಿತು ಹೂವು, ಪತ್ರೆ, ಕುಂಕುಮ ಅರ್ಚನೆ ಮಾಡಬಹುದು.


ಗೌರಿ ಮುಂದೆ ಎರಡು ಕಾಲು ದೀಪ ಇಡಬೇಕು. ಒಂದು ದೀಪಕ್ಕೆ 16 ಎಳೆ ಬತ್ತಿ ಹಾಕಬೇಕು. ( ಹತ್ತಿ ಕೈಯಲ್ಲಿ ಹಿಡಿದು ತೆಳ್ಳಗೆ ಎಳೆ ಎಳೆದು 16 ಬತ್ತಿ ಆಗುವಂತೆ ಮಡಚಿ ಬತ್ತಿ  ಹೊಸೆಯಬೇಕು. ಗೌರಿ ಪ್ರತಿಷ್ಠಾಪನೆ ಆದಮೇಲೆ, ಗೌರಿದಾರ ವನ್ನು ಬಲಭಾಗದಲ್ಲಿ ಇಟ್ಟ ನಂತರ, ಪ್ರತಿಷ್ಠಾಪನ ವಿಧಿ ಇದ್ದಾಗ  ಗೌರಿ ಎಂದು ಕೈಯಲ್ಲಿ ಮುಟ್ಟಿ ನಿಂತಿರಬೇಕಾಗುತ್ತದೆ ಇಂಥ ಅಗತ್ಯವಿದ್ದಾಗ  ಹುಷಾರಾಗಿ ಏಳಬೇಕು. ಮಂತ್ರ ಪೂಜೆಯ ವಿಧಾನಗಳನ್ನು ಕುಳಿತಲ್ಲೇ 16 ಪದ್ಮದ ರಂಗೋಲಿಗೆ  ಎಲ್ಲಾ ಪೂಜೆಯನ್ನು ಮಾಡಬಹುದು. ರೇಷ್ಮೆ ಸೀರೆ ಉಟ್ಟಿರು ತ್ತೇವೆ, ಸುತ್ತಲೂ ದೀಪ ಇರುತ್ತದೆ.   ಒಂದೂವರೆ ಗಂಟೆಯ ವ್ರತವಾದುದರಿಂದ ಜಾಗೃತಿಯಿಂದ ಇರಬೇಕು. ದೀಪದ ಕಂಬಗಳ ನ್ನು ಕೈಗೆ ತಗುಲದಂತೆ ದೂರ ಇಡಬೇಕು. ನಾವು ಹತ್ತಿಯ ಗೆಜ್ಜೆ ವಸ್ತುಗಳನ್ನು ಜಾಸ್ತಿ ಏರಿಸಿರುತ್ತೇವೆ. ಆದುದರಿಂದ ದೀಪದ ಬಗ್ಗೆ ಬಹಳ ಎಚ್ಚರಿಕೆ ಬೇಕು. ನೀವು ಪೂಜೆ ಮಾಡುವ ಮುಂದೆ ಸಣ್ಣ ನೀಲಾಂಜನದಲ್ಲಿ ದೀಪ ಹಚ್ಚಿಕೊಂಡಿದ್ದರೆ  ಮಂಗಳಾರತಿ ಬತ್ತಿ,

ಧೂಪ, ಕರ್ಪೂರ, ಊದಿನ ಕಡ್ಡಿ ಹಚ್ಚಲು ಸರಾಗವಾಗುತ್ತದೆ. 


ಪೂಜೆಗೆ ಬೇಕಾಗುವ ಸಲಕರಣೆ:- ಸಾಕಷ್ಟು ಬಿಡಿ ಹೂವು, ಪತ್ರೆಗಳು  ಗೌರಿ ಪೂಜೆಗೆ ಎಲ್ಲವೂ 16 ಇರಬೇಕು. ಅಥವಾ ಇದ್ದಷ್ಟೇ ಸಾಕು ಉಳಿದಂತೆ ಎರಡೆರಡು ಅಕ್ಷತೆ ಹಾಕಿ.  ತಯಾರಿಸಿದ ಬಗೆ ಬಗೆ ಗೆಜ್ಜೆ ವಸ್ತ್ರಗಳು, ನಾಲ್ಕೈದು ತರದ ಹಣ್ಣುಗಳು, ಬಾಳೆಹಣ್ಣು ಜಾಸ್ತಿ, ಐದು ತೆಂಗಿನ ಕಾಯಿ, ಅಭಿಷೇಕ ಮಾಡಲು ದೇವರ ಮುಂದಿರುವ ಪುಟ್ಟ ಗಣಪತಿ- ಯಾವುದೇ ಲಕ್ಷ್ಮಿ ಸರಸ್ವತಿ ಪಾರ್ವತಿ ದೇವಿಯ ವಿಗ್ರಹ ಇಟ್ಟುಕೊಳ್ಳಿ. ಹಾಲು ತುಪ್ಪ ಸಕ್ಕರೆ ಬಾಳೆಹಣ್ಣು ಜೇನುತುಪ್ಪ, ಎಲ್ಲವನ್ನು ಒಂದೇ ಬಟ್ಟಲಿನಲ್ಲಿ ಹಾಕಿಟ್ಟುಕೊಂಡರೆ, ಅಭಿಷೇಕದ ಮಂತ್ರ ಹೇಳಿದಾಗ ಕ್ಷೀರಂ ಸಮರ್ಥಯಾಮಿ, ಶರ್ಕರಂ ಸಮರ್ಪಯಮಿ, ಮಧುಪರ್ಕಂ ಸಮರ್ಪಯಾಮಿ,  ಒಂದೊಂದು ಹೇಳಿದಂತೆ ಹೂವಿನಿಂದ ಪ್ರೋಕ್ಷಿಸಿದರೆ ಸಾಕು.  ನೈವೇದ್ಯ ಇಡಲು ತಟ್ಟೆಗಳು, ವಿಳ್ಳೇದೆಲೆ, ಅಡಿಕೆಗಳು, 16 ಗಂಟು ಹಾಕಿರುವ ಗೌರಿ ದಾರ, ಹೆಣ್ಣು ಮಕ್ಕಳಿಗೆ 8 ಎಳೆ ಇನ್ನೂ ಚಿಕ್ಕ ಮಕ್ಕಳಿಗೆ 5 ಎಳೆ, ಕಾಯಿ ಒಡೆಯಲು ಕಾಯಿ ಕೊಳ, ನಿರ್ಮಾಲ್ಯ ನೈವೇದ್ಯ, ಕಾಯಿ ಒಡೆಯಲು ಒಂದು ಅಗಲ ಪಾತ್ರೆ ಬದಿಯಲ್ಲಿ ಇರಲಿ.  16 ಪತ್ರೆ 16 ಪುಷ್ಪ, ಅರ್ಚನೆಗೆ ಒಂದು ತಟ್ಟೆ ಕುಂಕುಮಾರ್ಚನೆಗೆ ಪುಟ್ಟ ಬಟ್ಟಲು, ಕೂರುವ ಮಣೆ ಕೆಳಗೆ ಹಸೆ ಬರೆಯಬೇಕು. ನೆನೆಸಿದ ಇಡೀ ಕಡಲೆ, ಎಣ್ಣೆಯಲ್ಲಿ ಅದ್ದಿಟ್ಟ  ಮಂಗಳಾರತಿ ಬತ್ತಿಗಳು, ಅರಿಶಿಣ ಕುಂಕುಮ ಹಚ್ಚಿದ ಹೊಸ  ಮೊರದಲ್ಲಿ ಜೋಡಿಸಿಟ್ಟುಕೊಂಡ ಬಾಗಿನಗಳು. ( ಕುಡಿ ಬಾಳೆ ಎಲೆ ಅಥವಾ ಪೇಪರ್ ಹಾಕಿ, ಅರಿಶಿನ ಕುಂಕುಮ ಪೊಟ್ಟಣ, ಕೈಗೆ ತೊಡುವ ಬಳೆ, ಐದು ಬಗೆ ಧಾನ್ಯ ಹೆಸರು, ಉದ್ದು, ಕಡಲೆ, ತೊಗರಿ ಬೇಳೆಗಳು, ರವೆ, ಬೆಲ್ಲ, ಅಕ್ಕಿ, ಗೌರಿದಾರ ಗೆಜ್ಜೆ ವಸ್ತ್ರ ,ಮಂಗಳಾರತಿ ಬತ್ತಿ, ಹೂಬತ್ತಿ, ಬಳೆ ಬಿಚ್ಚೋಲೆ ಸಾಮಗ್ರಿ, ತೆಂಗಿನ ಕಾಯಿ, ಬಾಳೆಹಣ್ಣು, ವಿಳ್ಳೆದೆಲೆ ಅಡಿಕೆ, ಬ್ಲೌಸ್ ಬಟ್ಟೆ, ದಕ್ಷಿಣೆ) ಮುತ್ತೈದೆ ಕೈಯ್ಗೆ ಅರಿಶಿನ ಕೊಟ್ಟು ಅದನ್ನು ಹಾಕಲು ಜೊತೆಗೆ ಒಂದು ಪೇಪರು ಕೊಡಬೇಕು, ಕುಂಕುಮ  ಹೂವು ಕೊಡಬೇಕು.( ಗೌರಿದಾರ ಕೈಗೆ ಕಟ್ಟಿಸಿ ಕೊಳ್ಳುವವರು ಎರಡೂ ಕೈಯ್ಯಲ್ಲಿ ಕಣ್ಣಿರುವ ಕಾಯಿ ಹೋಳು ಹಿಡಿದುಕೊಂಡು, ಮುತ್ತೈದೆ ಕೈಯಲ್ಲಿ ಗೌರಿ ದಾರ ಕಟ್ಟಿಸಿ ಕೊಳ್ಳಬೇಕು. ನಂತರ  ಕಾಯಿ ಹೋಳನ್ನು ಅವರಿಗೆ ಕೊಟ್ಟು ಅರಿಶಿನ ಕುಂಕುಮ ಹೂ, ವಿಳ್ಳೇದೆಲೆ ಹಣ್ಣು ದಕ್ಷಿಣೆ ಕೊಟ್ಟು ನಮಸ್ಕರಿಸಿ)  ನಂತರ ಕ್ರಮಬದ್ಧವಾಗಿ ಅರಿಶಿನ ಕುಂಕುಮ ಹೂವು ಎಲ್ಲಾ ಕೊಟ್ಟು ಬಾಗಿನ ಕೊಡಬೇಕು. 'ಮುತ್ತೈದೆ ಮುತ್ತೈದೆ ಬಾಗಿನ ತಗೋ, ಸಾವಿತ್ರಿ ಸಾವಿತ್ರಿಬಾಗಿನ ಕೊಡು'. ಇದನ್ನು ಮೂರು ಸಲ ಹೇಳಿ ಸೆರಗು ಇಬ್ಬರ ಸೆರಗು ಮರದ ಮೇಲೆ ಹಾಕಿ ಹಿಡಿದುಕೊಂಡು ಮೊರವನ್ನು ಮೇಲಿಂದ ಕೆಳಗೆ ಮತ್ತೆ ಆ ಕಡೆಯಿಂದ ಈ ಕಡೆಗೆ ಅಲುಗಾಡಿಸಿ ಆಮೇಲೆ ಕೆಳಗಿಟ್ಟು  ಮುಚ್ಚಿದ  ಮೊರ ತೆಗೆದು  ಅವರಿಗೆ ತೋರಿಸಿ ಬಾಗಿನ ಕೊಟ್ಟು ನಂತರ ಅಕ್ಷತೆ ಕೊಟ್ಟು ನಮಸ್ಕಾರ ಮಾಡಬೇಕು.


ಪೂಜೆ ತಯಾರಿ:- ಗೌರಿ ಪೂಜೆಗೆ ಬಹಳ ಮುಖ್ಯವಾದದ್ದು ಗೆಜ್ಜೆ ವಸ್ತ್ರ, 18 ಗೆಜ್ಜೆಯ ( 18 ಮೊಳದ ಸೀರೆ) 16 ಎಳೆ, ಇದಕ್ಕೆ ಮೇಲೆ ಕಲರ್ ಪೇಪರ್ ಅಂಟಿಸಿದ ವಸ್ತ್ರ ( ರವಿಕೆ) ಇದು ಮದುವೆಯಾದ ಮಹಿಳೆಯರಿಗೆ,

ಮದುವೆಯಾಗದ ಹುಡುಗಿಯರಿಗೆ 18 ಗೆಜ್ಜೆಯ ಎಂಟು ಎಳೆ, ತೀರಾ ಚಿಕ್ಕ ಮಕ್ಕಳಿಗೆ  ಐದು ಎಳೆ ಗೆಜ್ಜೆ ವಸ್ತ್ರ, ಪೂಜೆ ಮಾಡುವಾಗ ಕುಂಕುಮ ಹಚ್ಚಿದ ಬಿಡಿ ಗೆಜ್ಜೆ ವಸ್ತ್ರಗಳು, ಅನುಕೂಲದ ತಟ್ಟೆಯಲ್ಲಿ, ಅರಿಶಿಣ -ಕುಂಕುಮ ಅಕ್ಷತೆ , ಚಂದ್ರ, ಬುಕ್ಕಿಟ್ಟು, ಗಂಧ,ಅಡಿಕೆ, ಚಿಲ್ಲರೆ,  ವಿಳೇದೆಲೆ, ಕರ್ಪೂರ, ಹಲಗಾರ್ತಿ ಊದಿನ ಕಟ್ಟಿ, ಪಂಚ ಪಾತ್ರೆ ಉದ್ಧರಣೆ, ಅರ್ಘ್ಯದ ಪಾತ್ರೆ , ಸೊಡ್ಲಾರತಿ ತಟ್ಟೆ ಜೋಡಿ ಹೂ ಬತ್ತಿಗೆ ತುಪ್ಪ ಹಾಕಿ ನೆನೆಸಿ ಇಟ್ಟಿರುವ 16 ಆರತಿ ಸೋಡಲು,( ತುಪ್ಪದಲ್ಲಿ  ನೆನೆಸಿದ 16 ಜೊತೆ ಬತ್ತಿಯ ಆರತಿ ಹಚ್ಚುವಾಗ ಕರ್ಪೂರದ ಪುಡಿಯನ್ನು ಹಚ್ಚುವ ಭತ್ತಿಗಳಿಗೆ ಸವರಿದ್ದರೆ ಸುಲಭವಾಗುತ್ತದೆ. ಮಧ್ಯದ ಭಕ್ತಿಗಳನ್ನು ಮೊದಲು ಹಚ್ಚಿಕೊಂಡು ಉಳಿದದ್ದನ್ನು  ನಂತರ ಹಚ್ಚುತ್ತಾ ಬರಬೇಕು  ಕೈ ಸುಡುವುದಿಲ್ಲ) ಘಂಟೆ, ಊದಿನ ಕಡ್ಡಿ ಸಿಕ್ಕಿಸಲು ಒಂದು  ಲೋಟದಲ್ಲಿ  ಅರ್ಧ ಮರಳು ಅಥವಾ ಅಕ್ಕಿ ಹಾಕಿದ ಲೋಟವನ್ನು ತಟ್ಟೆ ಮೇಲೆ ಇಟ್ಟುಕೊಂಡರೆ ಹರಡಲ್ಲ  ಕೈ ಒರಿಸಲು ಎರಡು ವಸ್ತ್ರ, ಪೂಜೆಗೆ ಕುಳಿತುಕೊಳ್ಳಲು ಮಣೆ ಅಥವಾ ಚಾಪೆ ಎಲ್ಲಾ ತಯಾರಿಯೊಂದಿಗೆ ಪೂಜೆಗೆ ಕುಳಿತರೆ ಹುಡುಕಾಡುವ ಅವಶ್ಯಕತೆ ಇರುವುದಿಲ್ಲ.


ಇನ್ನು ಅಡಿಗೆ ಮನೆಯಲ್ಲಿ:- ಗೌರಿ ಹಬ್ಬದ ದಿನ ಬೆಳಗಿನ ತಿಂಡಿಗೆ ಉಪ್ಪಿಟ್ಟು ಅಥವಾ ಅವಲಕ್ಕಿಗೆ  ಸ್ವಲ್ಪ ತಯಾರಿ ಮಾಡಿಕೊಂಡಿದ್ದರೆ ಮಾಡುವುದು  ಸುಲಭ. ಸ್ವೀಟ್ ಬೇಕಿದ್ರೆ ಮುಂಚಿತವಾಗಿ ಮಾಡಿರಬೇಕು. ಗಣೇಶನ ಪೂಜೆ  ಗಂಡಸರ ಪೂಜೆ ಆದ್ದರಿಂದ, ಎಲ್ಲಾ ಕಡೆ ಓಡಾಡಿಕೊಳ್ಳುತ್ತಾ  ಕಡಬು ಚಟ್ನಿ ತುಪ್ಪ, ಇಡ್ಲಿ ಏನು ಬೇಕಾದರೂ ಮಾಡಬಹುದು. 


ಹಿಮಗಿರಿ ತಾನಯೇ ಹೇಮಲತೆ ಅಂಬ

ಈಶ್ವರಿ ಶ್ರೀ ಲಲಿತೆ  ಮಾಮವ!!

ರಮಾ ವಾಣಿ ಸಂಸೇವಿತ ಸಕಲೇ

ರಾಜರಾಜೇಶ್ವರಿ ರಾಮ ಸಹೋದರಿ!!

ಪಾಶಾಂಕುಶೇಶು  ದಂಡಕರೇ ಅಂಬ

ಪರತ್ಪರೆ ನಿಜ ಭಕ್ತಪರೇ

ಆಚಾಂಬರೆ ಹರಿಕೇಶ ವಿಲಾಸೇ

ಆನಂದ ರೂಪೇ ಅಮಿತ ಪ್ರತಾಪೆ  !!

ವಂದನೆಗಳೊಂದಿಗೆ,

ಬರಹ:- ಆಶಾ ನಾಗಭೂಷಣ.

Post a Comment

0Comments

Post a Comment (0)