---------------------------------
ಬೆಂಗಳೂರು : ನಗರದ ಬಸವನಗುಡಿಯ ರಸ್ತೆಯಲ್ಲಿರುವ ಶ್ರೀ ಗೋವರ್ಧನಗಿರಿ ಉಡುಪಿ ಶ್ರೀ ಪುತ್ತಿಗೆ ಮಠದಲ್ಲಿ ಉಭಯ ಶ್ರೀಪಾದಂಗಳವರ ಆದೇಶದಂತೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರಿಮತಿ ರಮ್ಯಾ ಸುಧೀರ್ ಅವರು "ಹರಿದಾಸರು ಕಂಡ ಶ್ರೀಕೃಷ್ಣ" ಎಂಬ ಶೀರ್ಷಿಕೆಯಲ್ಲಿ 'ಕರ್ನಾಟಕ ಸಂಗೀತ ಪಿತಾಮಹ' ಶ್ರೀ ಪುರಂದರದಾಸರ ರಚನೆಗಳಾದ "ಕೃಷ್ಣ ಬಾರೋ ಶ್ರೀಕೃಷ್ಣ ಬಾರೋ", "ಮೆಲ್ಲ ಮೆಲ್ಲನೆ ಬಂದನೆ", "ಕೈಯ್ಯಾ ತೋರೋ ಕರುಣಿಗಳರಸನೇ", "ಕುಣಿದಾಡೋ ಕೃಷ್ಣ", "ಹರಿನಾಮ ಜಿಹ್ವೆಯೊಳಗಿರಬೇಕು", "ಯಶೋದೆಯಮ್ಮಾ ಎತ್ತಿಕೋಯಮ್ಮಾ", ಶ್ರೀ ಮಹಿಪತಿದಾಸರ "ನಡಿರೆ ನಡಿರೆ ನೋಡುವ", ಶ್ರೀ ವ್ಯಾಸರಾಜರ "ಬಂದ ಕೃಷ್ಣ ಚೆಂದದಿಂದ", "ತುಳಸಿ ಮಧ್ಯದಿ ಇರುವ ಕೃಷ್ಣನ" ಶ್ರೀ ಶ್ರೀಪಾದರಾಜರ "ರಂಗ ಮನೆಗೆ ಬಾರೋ" ಮುಂತಾದ ಇನ್ನೂ ಹಲವಾರು ಹರಿದಾಸರ ಅಪರೂಪದ ಕೃತಿಗಳನ್ನು ಪ್ರಸ್ತುತಪಡಿಸಿ, ಪ್ರೇಕ್ಷಕರನ್ನು ಭಕ್ತಿಲೋಕಕ್ಕೆ ಕರೆದೊಯ್ದಿದ್ದರು. ಇವರ ಗಾಯನಕ್ಕೆ ಶ್ರೀ ಅಮಿತ್ ಶರ್ಮಾ ಕೀ-ಬೋರ್ಡ್ ವಾದನದಲ್ಲಿ ಹಾಗೂ ಶ್ರೀ ಶ್ರೀನಿವಾಸ ಕಾಖಂಡಕಿ ತಬಲಾ ವಾದನದಲ್ಲಿ ಸಾಥ್ ನೀಡಿದರು. ನಂತರ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ, ಅರ್ಘ್ಯ ಪ್ರದಾನ, ವಿವಿಧ ಪೂಜಾ ಕೈಂಕರ್ಯಗಳು, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಶ್ರೀಮಠದ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು, ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು. -ದೇಸು