" ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ :

VK NEWS
By -
0

" श्री राघवेन्द्र वैभवं "

" ಶ್ರೀ ಅಪ್ಪಣ್ಣಾಚಾರ್ಯರ ಕಣ್ಣಲ್ಲಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು "

" ಶ್ರೀ ರಾಯರ ಸ್ತೋತ್ರದ ಬಗ್ಗೆ ನನ್ನ ಪ್ರೀತಿಯ ಹರಿದಾಸ ಸಾಹಿತ್ಯದ ಮಾರ್ಗದರ್ಶಕರಾದ ಕೀರ್ತಿಶೇಷ ಶ್ರೀ ರಾಜಗೋಪಾಲಾಚಾರ್ಯ ಮಾತುಗಳಲ್ಲಿ " ....

ಮುಂದೊಂದು ದಿನ...

ನಿಘಂಟು ಕರ್ತೃಗಳು " ಮಾತಾ " ಶಬ್ದಕ್ಕೆ " ತಾಯಿ - ಅಮ್ಮ " ಯೆನ್ನುವ ಪರ್ಯಾಯ ಶಬ್ದಕ್ಕೆ ಸೇರಿಸುವ ಮತ್ತೊಂದು ಸಮಾನಾರ್ಥ " ಶ್ರೀ ರಾಯರು ".

ಅಮ್ಮನಿಗೆ ಮಗು ಗೊತ್ತು.

ಮಗುವಿಗೆ ತಾಯಿ ಗೊತ್ತು.

ಬೆಳೆದಂತೆ ದೊಡ್ಡ ಮಗುವಿಗೆ ( ಮಗನ ) ಆಸೆ ಅಭಿಲಾಷೆ ತಾಯಿಗೆ ತಿಳಿಯುವುದಿಲ್ಲ.

ಅಮ್ಮನ ಒಳಭಾವನೆ ಅನಿಸಿಕೆ ಮಗನಿಗೆ ತಿಳಿಯಲಾಗದು.

ಮಡದಿಯನ್ನು ಮಗ ಬಿಟ್ಟಿರಲಾರ. 

ಮುಂದೆ.... ತಿಳಿದೇ ಇದೆ.

ಆದರೆ ಆ ತಾಯಿ ಗೊತ್ತೋ ಗೊತ್ತಿಲ್ಲದೆಯೋ ತಪ್ಪು ಮಾಡುವ ದೊಡ್ಡ ಮಗನನ್ನು ಕ್ಷಿಮಿಸುತ್ತಾಳೆ. 

ಎಂದಿನಂತೆ ಅದೇ ಪ್ರೀತಿ ಅದೇ ವಾತ್ಸಲ್ಯ.

ಆತ ಒಬ್ಬ ಋಷಿ.

ತತ್ತ್ವಾನ್ಯಾಸ - ಮಾತೃಕಾನ್ಯಾಸ - ಧ್ಯಾನ ಶ್ಲೋಕದೊಂದಿಗೆ ಪ್ರಪಂಚಕ್ಕೆ ಬೇಕಾದ - ಪ್ರಪಂಚ ಸ್ವೀಕರಿಸಿದ ಅಮೂಲ್ಯ ಸ್ತ್ರೋತ್ರವನ್ನು ನಾಡಿಗೆ ನೀಡಿದ.

ಆತ ಬೇರಾರೂ ಅಲ್ಲ.

" ಭಿಕ್ಷಾಲಯದ ಅಪ್ಪಣ್ಣಾಚಾರ್ಯ ".

ಆತ ತುಂಗಭದ್ರಾ ತೀರದ ಋಷಿ.

ಆ ಸ್ತೋತ್ರ ವೈಷ್ಣವರ ನಾಡಗೀತೆ! ರಾಷ್ಟ್ರಗೀತೆ!

ಶ್ರೀ  ರಾಯರ ಬಗ್ಗೆ 200ಕ್ಕೂ ಹೆಚ್ಚು ಸಂಸ್ಕೃತ ಶ್ಲೋಕ ರೂಪದ ಸ್ತೋತ್ರ ಸಾಹಿತ್ಯ ಉಪಲಬ್ಧವಿದ್ದು ಆ ಸ್ತೋತ್ರ ಸಾಮ್ರಾಜ್ಯದ ರಾಜ ಮುಕುಟ ಅಪ್ಪಣ್ಣಾಚಾರ್ಯರ " ಶ್ರೀ ರಾಘವೇಂದ್ರ ಸ್ತೋತ್ರ " ಆಗಿದೆ.

ಶ್ರೀಮದಾಚಾರ್ಯರನ್ನು  ಆರಂಭಗೊಂಡು ಇಂದಿನ ಸಾಧು ಸಂತರ ಬಗ್ಗೆ ಸ್ತೋತ್ರಗಳ ಸಾಗರವೇ ಇದೆ. 

ಕೆಲವು ಸ್ತೋತ್ರಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.

ಶ್ರೀ  ವಾಯುಸ್ತುತಿಗೆ ಶ್ರೀಮದಾಚಾರ್ಯರೇ ತಮ್ಮ ನುಡಿ ಸೇರಿಸಿ ಅದನ್ನು  ಶ್ರೀ ಸರಸ್ವತೀದೇವಿಯ ಮುಡಿಯನ್ನು ಸೇರಿಸಿದ್ದು ಕಾಣಬಹುದು.

ಆ ಪ್ರಸಂಗ ಹೊರತು ಪಡಿಸಿದರೆ ಇತಿಹಾಸದಲ್ಲಿ ಸಿಗುವ ಇನ್ನೊಂದು ನಿದರ್ಶನ ಶ್ರೀ ಅಪ್ಪಣ್ಣಾಚಾರ್ಯರ ಶ್ರೀ ಗುರುಸ್ತೋತ್ರಕ್ಕೆ ಬೃಂದಾವನದಿಂದ ಸಿಕ್ಕ ಮುದ್ರೆ, ಅಂಕಿತ, ಸಂಕೇತ " ಸಾಕ್ಷೀ ಹಯಾಸ್ಯೋsತ್ರ ಹೀ " .

ಈ ರಾಜ ಗೌರವ ಬೇರೆ ವೈಷ್ಣವರಿಗಾಗಲೀ, ವೈಷ್ಣವ ಸ್ತೋತ್ರಗಳಿಗಾಗಲೀ ಸಿಕ್ಕಿಲ್ಲ ಎನ್ನುವುದು ಗಮನಾರ್ಹ.

ಒಬ್ಬ ಬಾಲಕ ಕೂಡಾ ಇದರ ಆಕರ್ಷಣೆಯಿಂದ ಹೊರಗುಳಿಯಲಾರ. 

ಒಬ್ಬ ವಿದ್ವಾಂಸ, ಒಬ್ಬ ಯತಿ, ಒಬ್ಬ ಪೀಠಾಧಿಪತಿ, ಬೇರೆ ಮಠದ ಪೀಠಾಧಿಪತಿ, ಬೇರೆ ಮತಗಳ ಆಚಾರ್ಯರೂ, ಹಿಂಬಾಲಕರೂ ಕೂಡಾ ಶ್ರೀ ರಾಯರ ಸ್ತೋತ್ರದ ದಾಸಾನುದಾಸರು.

ಒಬ್ಬ ಕೃಷಿಕನಿಂದ ಹಿಡಿದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ವರೆಗೆ ಶ್ರೀ ರಾಯರ ಸ್ತೋತ್ರ ಅಚ್ಚುಮೆಚ್ಚು. ವೃಥಾ ಪ್ರಾಸವಿಲ್ಲ. 

ಅನಾವಶ್ಯಕ ಪ್ರಶಂಸೆ ಆವರಿಸಿಲ್ಲ. 

ಹೇಳಲು ಕಷ್ಟವಾದ ದೊಡ್ಡ ದೊಡ್ಡ ಪದಗಳ ಪ್ರಯೋಗಗಳಿಲ್ಲ. 

ಅದೊಂದು ಸರಳವಾದ ಸುಂದರ ಮಾಲೆ.

ಇದೊಂದು ಸರ್ವಕಾಲೀನ ಸ್ತೋತ್ರವಾಗಲಿಕ್ಕೆ ಕಾರಣ ಅಲ್ಲಿನ ಜನಪರ ಕಾಳಜಿ, ಸತ್ಯಧರ್ಮಗಳ ವಿವೇಚನೆ, ಶ್ರೀ ರಾಯರ ಸ್ವರೂಪದ ಚಿಂತನೆ ಪ್ರಮುಖವಾಗಿದೆ.

ಈ ಸ್ತೋತ್ರ ಗೃಹಸ್ಥರಾದ ಶ್ರೀ ಅಪ್ಪಣ್ಣಾಚಾರ್ಯರಿಂದ ರಚಿತವಾದರೂ, ಪೀಠಾಧಿಪತಿಗಳಾದ ಶ್ರೀ ಯೋಗೀ೦ದ್ರತೀರ್ಥರು ತಮ್ಮ ಸಂಪೂರ್ಣ ಗೌರವವನ್ನು ಸಲ್ಲಿಸಿರುತ್ತಾರೆ.

ಶ್ರೀ ರಾಯರ ಸ್ತೋತ್ರಕ್ಕೆ ಈ ಕೆಳಕಂಡ ಮಹನೀಯರು ತಮ್ಮ ಸುಂದರವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ.

1. ಶ್ರೀ ವಾದೀಂದ್ರತೀರ್ಥರ ಶಿಷ್ಯರಾದ " ಮಹಾಮುನಿ " ಗಳೂ;

2. ಶ್ರೀ ಸುಮತೀಂದ್ರತೀರ್ಥರು

3. ಶ್ರೀ ಧೀರೇಂದ್ರತೀರ್ಥರು

ಶ್ರೀ  ವಾಸುಸ್ತುತಿಗೆ ಸಿಕ್ಕ ಪುನಶ್ಚರಣದ ಅವಕಾಶ ಶ್ರೀ ರಾಯರ ಸ್ತೋತ್ರಕ್ಕೆ ಸಿಕ್ಕಿದೆ. 

ಶ್ರೀ ರಾಯರ ಸ್ತೋತ್ರದ ಪುನಶ್ಚರಣದ ಪದ್ಧತಿಯ ಬಗ್ಗೆ ಪ್ರಾಚೀನ ಹಸ್ತ ಪ್ರತಿಯಿಂದ ಪರಮಪೂಜ್ಯ ಶ್ರೀ ಸುವಿದ್ಯೆ೦ದ್ರತೀರ್ಥರು ಉಪಯುಕ್ತ ಮಾಹಿತಿಯನ್ನೊಳಗೊಂಡ ಗ್ರಂಥವನ್ನು ಶ್ರೀ ರಾಯರಿಗೆ ಸಮರ್ಪಿಸಿ ಈ ಸ್ತೋತ್ರದ ರಾಜ್ಯಮಾನ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

ಶ್ರೀಮನ್ನ್ಯಾಯಸುಧಾ ಓದುವ ವಿದ್ವಾಂಸರಿಗೂ ಶ್ರೀ ರಾಯರ ಸ್ತೋತ್ರ ಬೇಕೇ ಬೇಕು. 

ಸುಧಾ ಓದದ ಸಾಮಾನ್ಯರಿಗೂ ಶ್ರೀ ರಾಯರ ಸ್ತೋತ್ರ ಬೇಕು.

ಕಲ್ಪವೃಕ್ಷ ಯಾರಿಗೆ ಬೇಡ? 

ಕಾಮಧೇನುವನ್ನು ಯಾರು ಒಳ್ಳೆ ಎನ್ನುತ್ತಾರೆ?

****** ಜೈ ರಾಘವೇಂದ್ರ ***** ಜೈ ವಿಜಯರಾಯ *****

ಶ್ರೀ ರಾಘವೇಂದ್ರತೀರ್ಥರ 353ನೇ ಶುಭ ಸಂದರ್ಭದಲ್ಲಿ " ಶ್ರೀ ಆಹ್ಲಾದಾಂಶ ಅಪ್ಪಣ್ಣಾಚಾರ್ಯ ಕೃತ ಶ್ರೀ ರಾಘವೇಂದ್ರ ಸ್ತೋತ್ರಮ್ ನ್ನು ದೇವ ಭಾಷೆಯಾದ ಸಂಸ್ಕೃತದಲ್ಲಿ ರಚಿಸಿದರೆ - ಆ ಸಂಸ್ಕೃತ ಸ್ತೋತ್ರವನ್ನು ಶ್ರೀ  ಜಗನ್ನಾಥ- ದಾಸರ ಪ್ರೀತಿಯ ಶಿಷ್ಯರಾದ ಶ್ರೀ ಮನೋಹರವಿಠಲರು ಅತ್ಯಂತ ಸುಂದರ ಅಚ್ಚ ಕನ್ನಡದಲ್ಲಿ ಸರಳವಾಗಿ ರಚಿಸಿದ್ದಾರೆ.

ಶ್ರೀ ಅಪ್ಪಣ್ಣಾಚಾರೆಂಬ ಬ್ರಾಹ್ಮಣೋತ್ತಮರು.

 ಮಂತ್ರಾಲಯದಿಂದ ಕೆಳಮೈಲಿ ದೂರದಲ್ಲಿರುವ ಬಿಚ್ಚಾಲೆ ಗ್ರಾಮ ವಾಸಿಗಳು. 

ಶ್ರೀ ಗುರುಸಾರ್ವಭೌಮರ ವಿದ್ಯಾ ಶಿಷ್ಯರಾಗಿದ್ದು ಶ್ರೀ ಗುರುರಾಜರನ್ನು ನೆರಳಿನಂತೆ ಎಡಬಿಡದೆ ಯಾವಾಗಲೂ ಸೇವಿಸುತ್ತಿದ್ದವರು.

ಒಮ್ಮೆ ಅವಶ್ಯ ಕಾರ್ಯಕ್ಕಾಗಿ ತಮ್ಮ ಊರಿಗೆ ಹೋಗಿದ್ದಾಗ ಶ್ರೀ ಮಂತ್ರಾಲಯ ಪ್ರಭುಗಳು ಶ್ರೀ ಯೋಗೀ೦ದ್ರತೀರ್ಥರಿಗೆ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯವನ್ನು ಒಪ್ಪಿಸಿಕೊಟ್ಟರೆಂದೂ  =  ಸಶರೀರವಾಗಿ ಬೃಂದಾವನ ಪ್ರವೇಶಕ್ಕೆ ಸಿದ್ಧರಾದರೆಂದೂ ಸಮಾಚಾರವನ್ನು ಕೇಳಿದರು.

ಗುರುಗಳ ವಿರಹವನ್ನು ಸಹಿಸಲಾರದ ಶ್ರೀ ಅಪ್ಪಣ್ಣಾಚಾರ್ಯರು ಭಕ್ತಿಪಾರವಶ್ಯದಿಂದ - ಗುರುಗಳ ಪ್ರೇರಣೆಯಿಂದ - ತಾತ್ಕಾಲಿಕ ಸ್ಫೂರ್ತಿಯಿಂದ ಬಂದಿರುವ ವಾಗ್ಧೋರಣೆಯಿಂದ ಶ್ರೀ ಗುರುರಾಜರನ್ನು ಸ್ತುತಿಸುತ್ತಾ ಓದಿ ಬಂದರು.

ಮಂತ್ರಾಲಯಕ್ಕೆ ಬರುವಾಗ ಶ್ರೀ ರಾಯರು ಬೃಂದಾವನ ಪ್ರವೇಶ ಮಾಡಿದರು. 

ಮನೆಯಿಂದ ಹೊರಡುವಾಗ ' 

" ಶ್ರೀ ಪೂರ್ಣಬೋಧ 

ಗುರುತೀರ್ಥ ಪೆಯೊಬ್ಧಿಪಾರಾ " 

ಎಂಬ ನುಡಿಯನ್ನು ಆರಂಭಿಸಿ ವಾಯು ವೇಗದಿಂದ ಓಡುತ್ತಾ  ಎರಡು ಮೂರು ನಿಮಿಷಗಳಲ್ಲಿ ಬಹು ದೂರ ಪ್ರದೇಶವನ್ನು ದಾಟಿ  ಮಂತ್ರಾಲಯಕ್ಕೆ ಬಂದರು.

ಬೃಂದಾವನದ ಮುಂದೆ ನಿಂತು ಗುರು ವಿರಹದಿಂದ ಕಣ್ಣೀರನ್ನು ಸುರಿಸುತ್ತಾ ಗದ್ಗದ ಧ್ವನಿಯಿಂದ...

" ಯೋ ಭಕ್ತ್ಯಾ ಗುರು ರಾಘವೇಂದ್ರ 

ಚರಣದ್ವ೦ದ್ವ ಸ್ಮರನ್ ಯಃ ಪಠೇತ್

ಸ್ತೋತ್ರಂ ದಿವ್ಯಮಿದಂ ಸದಾ ನ ಹಿ 

ಭವೇತ್ ತಸ್ಯಾಸುಖಂ ಕಿಂಚನ ।

ಕಿಂತ್ವಿಷ್ಟಾರ್ಥ ಸಮೃದ್ಧಿರೇವ 

ಕಮಲಾನಾಥ ಪ್ರಸಾದೋದಯಾತ್

ಕೀರ್ತಿರ್ದಿಗ್ವಿದಿತಾ ವಿಭೂತಿರತುಲಾ......... "

ಯೆಂಬ ಕೊನೆಯ ಶ್ಲೋಕವನ್ನು ಪಠಿಸಿ ಮುಗಿಸುತ್ತಿರುವಾಗ ಇವರ ಭಕ್ತಿಗೆ ಮೆಚ್ಚಿದ ಶ್ರೀ ಗುರುಸಾರ್ವಭೌಮರು ಬೃಂದಾವನದ ಒಳಗಿನಿಂದ ಅಭಯ ಮುದ್ರೆಯನ್ನು ತೋರಿಸುತ್ತಾ ದರ್ಶನವನ್ನಿತ್ತರು. 

ಅಕಸ್ಮಾತ್ತಾಗಿ ಗುರುಗಳ ದರ್ಶನವು ಏರ್ಪಟ್ಟಿದ್ದರಿಂದ ಭಯ, ಆಶ್ಚರ್ಯ, ಭಕ್ತಿ ಮುಂತಾದ ಅನೇಕ ರಸಗಳ ವಶರಾದರು.

ಕೊನೆಯ ಶ್ಲೋಕದಲ್ಲಿ '

" ವಿಭೂತಿರತುಲಾ " 

ಎಂಬ ನುಡಿಯನ್ನು ಹೇಳುತ್ತಿರುವಾಗಲೇ ಶ್ರೀ ರಾಯರ ದರ್ಶನವಾದ್ದರಿಂದ ಭಯ ಮುಂತಾದ ಅನೇಕ ರಸಗಳ ಆವಿರ್ಭಾವದಿಂದ ಭಾವ ಪರವಶರಾದ ಶ್ರೀ ಅಪ್ಪಣ್ಣಾಚಾರ್ಯರ ಬಾಯಲ್ಲಿ ಅಲ್ಲೇ ಸ್ತಬ್ಧವಾಯಿತು -  ಮುಂದಿನ ಮಾತುಗಳು ಹೊರಡಲಿಲ್ಲ!!

ಶ್ರೀ ಹರಿಯ ಹಯಗ್ರೀವ ಮೂರ್ತಿಯನ್ನು ಆ ಸಮಯದಲ್ಲಿ ಧ್ಯಾನಿಸುತ್ತಿದ್ದ ಶ್ರೀ ಗುರುರಾಯರು ತಮ್ಮ ಶಿಷ್ಯರ ಈ ಗಡಿಬಿಡಿಯನ್ನು ನೋಡಿ - 

 " ಸಾಕ್ಷೀ ಹಯಾಸ್ಯೋsತ್ರ ಹೀ " 

ಎಂಬ ಅವರ ವಾಣಿಯಿಂದ ಇವರು ಗುರುಸ್ತುತಿಯಲ್ಲಿ ಹೇಳಿರುವ ಎಲ್ಲಾ ವಿಷಯಗಳಿಗೂ " ಸತ್ಯ " ವೆಂಬ ವಿಷಯದಲ್ಲಿ - 

 " ಶ್ರೀ ಹಯಗ್ರೀವನೇ ಸಾಕ್ಷಿ " 

ಎಂದು ಆಶಿಸಿ ಶ್ಲೋಕವನ್ನು ಮುಗಿಸಿದರು.

ಶ್ರೀ ಅಪ್ಪಣ್ಣಾಚಾರ್ಯರು ಗುರುಗಳನ್ನು ಸಂದರ್ಶಿಸಿದರು.

ಶ್ರೀ ಗುರುಗಳ ಅನುಗ್ರಹ ವಾಣಿಯನ್ನು ಕೇಳಿ ಮೈಮರೆತರು.

 ಸುತ್ತಲೂ ಇದ್ದ ಭಕ್ತ ವೃಂದವು ಶ್ರೀ ಗುರುರಾಯರನ್ನು ಕಾಣಲಿಲ್ಲ. 

ಆದರೆ ಅಮರವಾಣಿಯನ್ನು ಕೇಳಿ ಧನ್ಯವಾಯಿತು.

ಅಂದಿನಿಂದ ಶ್ರೀ ಗುರುಸಾರ್ವಭೌಮರಿಂದ ಅನುಗ್ರಹೀತವಾದ ಈ ಸ್ತೋತ್ರವನ್ನು ಯಾವಾಗಲೂ ಪಾರಾಯಣ ಮಾಡಿ ಧನ್ಯವಾಯಿತು!!

ಈ ಶ್ರೀ ರಾಘವೇಂದ್ರ  ಸ್ವಾಮಿಗಳ 353ನೇ ಆರಾಧನಾ ಶುಭ ಸಂದರ್ಭದಲ್ಲಿ ಶ್ರೀ ಮನೋಹರವಿಠಲರ ಉಪಕಾರವನ್ನು ಸ್ಮರಿಸೋಣ...

ಹೆಸರು : 

ಬೂರಲದಿನ್ನಿ ಶ್ರೀ ಮೋನಪ್ಪದಾಸರು

ಕಾಲ : 

ಕ್ರಿ ಶ 1703 - 1772

ಉಪದೇಶ ಗುರುಗಳು : 

ಶ್ರೀ  ಜಗನ್ನಾಥದಾಸರು

ಶ್ರೀ ಮನೋಹರವಿಠಲರು ಕನ್ನಡ ಶ್ರೀ ರಾಘವೇಂದ್ರ ಸ್ತೋತ್ರದ ಆರಂಭದವನ್ನು " ವಾರ್ಧಿಕ ಷಟ್ಪದಿ " ಯಲ್ಲಿ...

ಶ್ರೀ ಜನಕಜಾ ರಮಣನಂತೆ 

ಭಾಸ್ಕರ ಸೋಮ ।

ತೇಜ ರಾಜೀವ ಭವಭವ 

ವಿನುತ । ಭಕ್ತಸುರ ।

ಭೂಜ ಸದ್ಗುಣಸಾಂದ್ರ 

ಕವಿಕುಲಾಂಬುಧಿ ಚಂದ್ರ 

ರಾಜೇಂದ್ರ ರಾಘವೇಂದ್ರಾ ।।

ರಾಜಿಸುವ ತವ ನಾಮ ಧರಿಸಿ 

ಪೂಜಿಸುವ । ಗುರು ।

ರಾಜ ಮಂತ್ರಾಲಯ 

ನಿವಾಸ ನಮಲಸ್ತೋತ್ರ ।

ರಾಜಿಯಂ ವಿರಚಿಸುತೆ ಕನ್ನಡದಿ 

ಮನ್ಮತಿಗೆ ಮಂಗಳವನಿತ್ತು ಸಲಹೋ ।।

ಶ್ರೀಪೂರ್ಣಬೋಧ ಗುರುತೀರ್ಥ 

ಪಯೋಬ್ಧಿಪಾರಾ

ಕಾಮಾರಿಮಾಕ್ಷ ವಿಷ-

ಮಾಕ್ಷ ಶಿರಃ ಸ್ಪೃಶಂತೀ ।

ಪೂರ್ವೋತ್ತರಾಮಿತ 

ತರಂಗ ಚರತ್ಸು ಹಂಸಾ

ದೇವಾಲಿ ಸೇವಿತ ಪರಾಂಘ್ರಿ 

ಪಯೋಜಲಗ್ನಾ ।।

ಶ್ರೀಪೂರ್ಣ = ಕಾಂತಿಯಿಂದ ಪೂರ್ಣವಾದ

ಬೋಧಕ ತಂದೆ = ಬುಧನ ತಂದೆಯಾದ ಚಂದ್ರನ

ತೀರ್ಥ = ಉತ್ಪತ್ತಿ ಸ್ಥಾನವಾದ

ಪಯೋಬ್ಧಿ = ಸಮುದ್ರವೇ

ಪಾರಾ = ಅವಧಿಯಾಗಿರುವ

" ಶ್ರೀ ರಾಯರ ಮಾತೆಂಬ ಅರ್ಥದಲ್ಲಿ "

ಶ್ರೀ = ಲಕ್ಷ್ಮೀಯಿಂದ ಪೂರ್ಣಯುಕ್ತನಾದ ಭಗವಂತನ

ಬೋಧ = ಜ್ಞಾನವುಳ್ಳ

ಗುರು = ಶ್ರೀಮದಾಚಾರ್ಯರ

ತೀರ್ಥ = ಶಾಸ್ತ್ರವೆಂಬ

ಪಯೋಬ್ಧಿ = ಸಮುದ್ರವೇ

ಪಾರಾ = ತೀರಗಳುಳ್ಳ

ಕಾಮ = ಮನ್ಮಥನ

ಅರಿ = ಶತ್ರುವಾದ

ವಿಷಮಾಕ್ಷ = ಶ್ರೀ ರುದ್ರದೇವರ

ಶಿರಃ = ತಲೆಯನ್ನು

ಸ್ಪೃಶಂತೀ = ಸ್ಪರ್ಶಿಸುತ್ತಿರುವಾಗ

" ಶ್ರೀ ರಾಯರ ಮಾತಿನ ಪರವಾದ ಅರ್ಥದಲ್ಲಿ "

ಕಾಮ = ಕಾಮ ಕ್ರೋಧಾದಿಗಳ

ಅರಿ = ಶತ್ರುವಾದ

ಮಾ = ಜ್ಞಾನವೆಂಬ

ಅಕ್ಷ = ಇಂದ್ರಿಯದಿಂದ

ವಿಷಮ = ಸಮವಲ್ಲದ

ಅಕ್ಷ = ಕಣ್ಣುಗಳುಳ್ಳ ಜ್ಞಾನಿಗಳ

ಶಿರಃ = ತಲೆಯನ್ನು

ಸ್ಪೃಶಂತೀ = ಸ್ಪರ್ಶಿಸುವ ಅರ್ಥಾತ್ ಜ್ಞಾನಿಗಳಿಂದ ಶಿರಸಾ ಮಾನ್ಯವಾದ,

ಪೂರ್ವೋತ್ತರ = ಪೂರ್ವ ಪಶ್ಸಿಮ ಗಳಲ್ಲಿರುವ

ಅಮಿತ = ಅಪರಿಮಿತವಾದ

ತರಂಗ = ಅಲೆಗಳಲ್ಲಿ

ಚರತ್ಸು ಹಂಸಾ = ಸಂಚರಿಸುವ ಸುಂದರವಾದ ಹಂಸಗಳುಳ್ಳ

" ಶ್ರೀ ರಾಯರ ಪರವಾದ ಮಾತಿನ ಅರ್ಥದಲ್ಲಿ  "

ಪೂರ್ವೋತ್ತರ = ಪೂರ್ವ ಪಕ್ಷ ಸಿದ್ಧಾಂತಗಳನ್ನು

ಅಮಿತ ತರಂಗ = ಚೆನ್ನಾಗಿ ತಿಳಿಯುವವರಾದ

ಚರತ್ಸು ಹಂಸಾ = ಚೆನ್ನಾಗಿ ಸೇವಿಸುವ ಪರಮಹಂಸರುಗಳಿಂದ ಕೂಡಿರುವ

ದೇವಾಲಿ = ದುಂಬಿಗಳಿಂದ

ಸೇವಿತ = ಸೇವಿಸಲ್ಪಟ್ಟ ಪರಮಾತ್ಮನ

ಅಂಘ್ರಿಪಯೋಜ = ಪಾದಗಳೆಂಬ ಕಮಲಗಳಲ್ಲಿ

ಲಗ್ನಾ = ಸಂಬದ್ಧವಾದ

" ಶ್ರೀ ರಾಯರ ಮಾತಿನ ಪರವಾದ ಅರ್ಥದಲ್ಲಿ "

ದೇವಾಲಿ = ಬ್ರಹ್ಮಾದಿ ದೇವತೆಗಳ ಸಮೂಹದಿಂದ

ಸೇವಿತ = ಸೇವಿಸಲ್ಪಟ್ಟ

ಪರ = ಪರಮಾತ್ಮನ

ಅಂಘ್ರಿ = ಪಾದಗಳ ಅಥವಾ ಸ್ವರೂಪದಲ್ಲಿ

ಲಗ್ನಾ = ಇರುವ, ಭಗವಂತನ ಸ್ವರೂಪವನ್ನು ಪ್ರತಿಪಾದಿಸುವ ಮಾತು ಎಂಬ ಗಂಗೆಯು ಭಕ್ತರನ್ನು ಪಾಣನಗೊಳಿಸಲಿ!

ಶ್ರೀ ಗುರುಗಳ ಮಾತೆಂಬ ಗಂಗೆಯು ತನ್ನನ್ನು ಪುನೀತವನ್ನಾಗಿ ಮಾಡಲಿ.

* ಗಂಗೆಯಾದರೂ ಕಲಾಪೂರ್ಣನಾದ ಚಂದ್ರನ ಉತ್ಪತ್ತಿ ಸ್ಥಾನವಾದ ಸಮುದ್ರಕ್ಕೆ ಸೇರುತ್ತದೆ. 

ಅದರಂತೆ -

ಶ್ರೀ ರಾಯರ ಪ್ರತಿಯೊಂದು ಮಾತೂ ಸಹ ಪೂರ್ಣಪ್ರಮತಿಗಳಾದ ಶ್ರೀಮದಾಚಾರ್ಯರ ತತ್ತ್ವಗಳನ್ನೂ; ಉಪದೇಶಗಳನ್ನೂ ವ್ಯಕ್ತಪಡಿಸುತ್ತವೆ.

ಶ್ರೀ ಧೀರೇಂದ್ರತೀರ್ಥರ ವ್ಯಾಖ್ಯಾನ....

ಶ್ರಿಯಾ ಪೂರ್ಣ: = ಪೂರಿತಃ ಬೋಧಃ = ಬುಧಃ ತಸ್ಯ ಗುರು: ಪಿತಾ ತಸ್ಯ ತೀರ್ಥಂ ಯೋನಿ: ಸ ಚಾಸೌ ಪಯೋಧಿ: ಸ ಏವ ಪಾರಂ ಯಸ್ಯಾ: ಸಾ;  ಶ್ರಿಯಾ ಪೂರ್ಣ: ತಸ್ಯ ಬೋಧಃ ಯ ಸ್ಯ ಸಃ; ಸ ಚಾಸೌ ಗುರು: ತಸ್ಯ ತೀರ್ಥಂ ಶಾಸ್ತ್ರಂ ತದೇವ ಪಯೋಬ್ಧಿ: ಯಸ್ಯಾ: ಸಾ ।।

ಗಂಗೆಯು ಧುಮುಕುತ್ತಾ ಕಾಮನನ್ನು ದಹಿಸಿದ ಮುಕ್ಕಣ್ಣನ ಶಿರಸ್ಸನ್ನು ಏರಿದವಳು. 

ಅಂತೆಯೇ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವಾಣಿಯೂ ಕಾಮಕ್ರೋಧಾದಿಗಳನ್ನು ನೀಗುವ ತತ್ತ್ವಜ್ಞಾನದ ಕಣ್ಣಿನಿಂದ ಮುಕ್ಕಣ್ಣರೆನಿಸಿದ ವಿದ್ವಾಂಸರಿಂದಲೂ ಶಿರಸಾಮಾನ್ಯವಾಗಿದೆ.

ಆದ್ದರಿಂದ -

ಶ್ರೀ = ಮಹಾಲಕ್ಷ್ಮೀಯಿಂದ ಅಭಿಮನ್ಯವಾದ

 ಪೂರ್ಣಬೋಧ = ವೇದವೇ ಗುರುತೀರ್ಥ = ಉತ್ಕೃಷ್ಟವಾದ ಬೃಹತ್ತಾದ ಶಾಸ್ತ್ರ. 

ಇದುವೇ ದೊಡ್ಡ ಸಾಗರ. 

ಇದನ್ನು ಸೇರುವ ಗಂಗೆ ಶ್ರೀ ರಾಯರ ವಾಣಿ. 

ವೇದದ ಆಧಾರದಿಂದಲೇ ಶ್ರೀ ರಾಯರು ಎಲ್ಲಾ ವಿಷಯಗಳನ್ನೂ ಸಮರ್ಥಿಸುತ್ತಾರೆಂದು ತಾತ್ಪರ್ಯ.

ಶ್ರೀ = ಲಕ್ಷ್ಮೀ

ಪೂರ್ಣ = " ಬೃಹೃ೦ತೋ ಹ್ಯಸ್ಮಿನ್ ಗುಣಾ: " ಇತ್ಯಾದಿ ಶ್ರುತಿಗಳು ಹೇಳಿದಂತೆ ಗುಣಪೂರ್ಣನಾದವನು " ಬ್ರಹ್ಮ ".

ಬೋಧಃ = " ಸ ಏನಾನ್ ಬ್ರಹ್ಮಗಮಯತಿ " ಇತ್ಯಾದಿ ಶ್ರುತಿಗಳಿಂದ ವರ್ಣಿಸಲ್ಪಟ್ಟ ಗುರುವಾದ ಶ್ರೀ ವಾಯುದೇವರು.

ಹೀಗೆ ಈ ಮೂವರ ಮಹಿಮೆಯನ್ನು ವರ್ಣಿಸುವುದರಿಂದ...

" ಶ್ರೀಪೂರ್ಣಬೋಧ ಗುರುತೀರ್ಥ " -

 ಯೆಂದರೆ - 

" ವೇದ ". 

ಅದುವೇ ಪಯೋಬ್ಧಿಪಾರಾ = ಸೇರುವ ಸಾಗರ.

ಆ ವೇದವನ್ನೀ ಶ್ರೀ ರಾಯರ ವಾಣಿಯು ಸೇರುವಂಥಾದ್ದು ಎಂದರ್ಥ!

ಪೂರ್ಣಬೋಧ = ಪೂರ್ಣವಾದ ಬೋಧವುಳ್ಳವರು =

ಎಂದರೆ = ಶ್ರೀ ವೇದವ್ಯಾಸದೇವರು. 

ಅವರ - 

ಗುರು = ಶ್ರೇಷ್ಠವಾದ

ತೀರ್ಥ = ಶಾಸ್ತ್ರಗಳು

ವೇದ ಮತ್ತು ಶ್ರೀ ವೇದವ್ಯಾಸರ ಶಾಸ್ತ್ರ ಯೆಂದರೆ...

ಬ್ರಹ್ಮಸೂತ್ರ

ಅಷ್ಟಾದಶ ಪುರಾಣ

ಮಹಾಭಾರತ

ಶ್ರೀಮದ್ಭಾಗವತ ಮಹಾ ಪುರಾಣ

ಮೊದಲಾದವುಗಳೇ ಶ್ರೀ ರಾಯರ ವಾಣಿಗೆ ಆಧಾರ ಎಂದರ್ಥ.

ಶ್ರೀ ರಾಯರ ಮಾತು ಶ್ರೀ ವೇದವ್ಯಾಸದೇವರ ಶಾಸ್ತ್ರವನ್ನೇ ಸೇರುತ್ತದೆ. 

ಯೆಂದರೆ - 

 ಶ್ರೀ ವೇದವ್ಯಾಸದೇವರ ಶಾಸ್ತ್ರಗಳ ಕುರಿತಾಗಿಯೇ ಶ್ರೀ ರಾಯರು ಮಾತನಾಡುತ್ತಾರೆ ಎಂದರ್ಥ.

ಪೂರ್ವ ಮೀಮಾಂಸಾ - ಉತ್ತರ ಮೀಮಾಂಸಾ ಪ್ರಮೇಯಗಳ ಖಂಡನ - ಮಂಡನಗಳ ತರಂಗಗಳ ಮೇಲೆ ಪರಮಹಂಸರೆಂಬ ಹಂಸಗಳು ವಿಹರಿಸುವಂತೆ ಮಾಡುತ್ತವೆ.

ಈ ಗಂಗೆಯಲ್ಲಿ ಸುಂದರವಾದ ಕಮಲಗಳು ಆಶ್ರಯವನ್ನು ಪಡೆದಿವೆ. 

ಈ ಕಮಲಗಳು ದುಂಬಿಗಳು ಸೇವಿಸುತ್ತವೆ.

ಅಂತೆಯೇ ಗುರುಗಳ ವಾಣಿಯೆಂಬ ಗಂಗೆಯಲ್ಲಿಯೂ ಪರಮಾತ್ಮನ ಪಾದಗಳೆಂಬ ಕಮಲಗಳಿವೆ.

" ಉತ್ತಮಾನಾ೦ ಸ್ವರೂಪಂತು 

ಪಾದ ಶಬ್ದೇನ ಭಣ್ಯತೇ "

ಯೆಂಬ ವಾಕ್ಯದಂತೆ -

" ಪಾದ " 

ಯೆಂದರೆ - 

 " ಭಗವಂತನ ಸ್ವರೂಪ ".

ಶ್ರೀ ಭಗವಂತನ ಸ್ವರೂಪವನ್ನು ಶ್ರೀ ರಾಯರ ಮಾತುಗಳು ಸ್ಪಷ್ಟ ಮಾಡುತ್ತವೆ ಎಂದರ್ಥ.

ದೇವತೆಗಳೆಂಬ ದುಂಬಿಗಳು ಪರಮಾತ್ಮನ ಪಾದಗಳಿಗೆ ಎರಗಿವೆ ಅರ್ಥಾತ್ ಶ್ರೀ ರಾಯರ ಮಾತು ಯೆಂದರೆ ಅವರ ಗ್ರಂಥಗಳು ಪರಮಾತ್ಮನ ಸರ್ವೋತ್ತಮತ್ವವನ್ನೇ ಪ್ರತಿಪಾದಿಸುತ್ತಿವೆ.

ಈ ಮೇಲಿನ ಸಂಸ್ಕೃತ ಶ್ಲೋಕದ ಸಾರವನ್ನು ಶ್ರೀ ಮನೋಹರವಿಠಲರು ಕನ್ನಡದ ವಾರ್ಧಿಕ ಷಟ್ಪದಿಯಲ್ಲಿ ...

ಶ್ರೀ ಪೂರ್ಣಬೋಧ ಗುರುತೀರ್ಥ 

ಸುಪಯೋನಿಧಿಯ ।

ತಾ ಪಾರಗಂಡು ಸ್ಮರ-

ರಿಪುಮಾಕ್ಷ । ವಿಷಮಾಂಬ ।

ಕಾ ಪಿನಾಕಿಯ ಶಿರವ 

ಸಾರಿ ಪೂರ್ವೋತ್ತರದ 

ಸಿದ್ಧಾಂತಮೆಂಬೂರ್ಮಿಯಾ ।।

ಆ ಪರಮಹಂಸ -

ಚಾರಾದಿ । ದೇವಾಳಿಯಿಮ್ಮ ।

ಹಾ ಪೂಜೆಯಿಂದ 

ಸೇವಿತನಾದ । ಪರಮಾತ್ಮ ।

ನಾ ಪಾದಪದ್ಮಗಳರಸಜವನ್ನು 

ಪ್ರಕ್ಷಾಲನಂಗೈದು ಲಗ್ನವಾಗಿ ।। 1 ।।

ನಾಗರಾಜು ಹಾವೇರಿ...

ಸುಂದರ ಯತಿಯ ನೋಡೋಣ ಬಾರೆ ।

ಮಂದರೋದ್ಧಾರ ಕೃಷ್ಣನ ತಮ್ಮ । ಹೃ ।

ನ್ಮಂದಿರದೊಳು ಧೇನಿಪ  । ಸು ।

ಧೀಂದ್ರ ಕುವರಾ ಶ್ರೀ ರಾಘವೇಂದ್ರ ! ಮು !

ನೀoದ್ರ  ವೆಂಕಟನಾಥನ  ಸೇವಕ !!

" ವಿಶೇಷ ವಿಚಾರ  "

" ಶ್ರೀ ರಾಘವೇಂದ್ರ ಸ್ತೋತ್ರ ಕನ್ನಡದಲ್ಲಿ ಅನುವಾದ ಮಾಡಿದ್ದು  [ ಆಚಾರ್ಯ ನಾಗರಾಜು ಹಾವೇರಿ  ]



ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)