ದಾಸಯ್ಯ ಇಕ್ಕುವ ಪದ್ಧತಿ

VK NEWS
By -
0

 ಹೆಸರೇ ಹೇಳುವಂತೆ ದಾಸಯ್ಯಗಳನ್ನು ಕರೆದು ಪೂಜಿಸಿ ಉಣಬಡಿಸುವ ವಿಶಿಷ್ಟ ಪದ್ಧತಿ ಇದು.

ಸಾಮಾನ್ಯವಾಗಿ ವೆಂಕಟೇಶ್ವರನ ಮನೆದೇವರಾಗಿ ಉಳ್ಳ ಮನೆಯವರು ಶ್ರಾವಣ ಶನಿವಾರ ಅಥವಾ ಇನ್ನು ಯಾವುದೇ ಶುಭ ಮಾಸದ ಶನಿವಾರ  ಹೀಗೆ ಆಚರಿಸುವುದುಂಟು.ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ಇದ್ದರೆ ಅದಕ್ಕೆ ಮುನ್ನ ಹಾಗು ನೂತನ ಗೃಹ ಪ್ರವೇಶದ ನಂತರ ಈ ಪೂಜೆ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ.

 ಈ ಪೂಜೆಯ ದಿನ ಇಬ್ಬರು ದಾಸಯ್ಯಗಳಿಗೆ ಶಂಖ, ಜಾಗಟೆ, ಭವನಾಸಿ ಅಂದರೆ ಅವರ ತಾಮ್ರದ ಭಿಕ್ಷಾ ಪಾತ್ರೆ ಜೊತೆ ಮಡಿಯಲ್ಲಿ ನಾಮ ಧರಿಸಿ ಬರಲು ಹೇಳಿರುತ್ತಾರೆ. ಈ ದಿನ ಮನೆಮಂದಿಯೆಲ್ಲ ಮಂಗಳ ಸ್ನಾನ ಮಾಡಿ , ಮನೆಯ ಗಂಡಸರೆಲ್ಲ ಮಡಿ ವಸ್ತ್ರ ಧರಿಸಿ ಪಂಚೆ ಶಲ್ಯ ಧರಿಸಿರುತ್ತಾರೆ.ನಂತರ ವೆಂಕಟೇಶ್ವರನ ಫೋಟೋ ಇಟ್ಟು ಅದ್ರ ಮುಂದೆ ಒಂದು ಮನೆಯ ಮೇಲೆ ಶಂಖ, ಜಾಗಟೆ ಹಾಗು ಭವನಾಷಿ ಇಕ್ಕೂತ್ತಾರೆ.ಕೆಲವು ಕಡೆ ಎರಡು ಶಂಖ, ಎರಡು ಜಾಗಟೆ, ಎರಡು ಭವನಾಷಿ ಇಡುವ ಪದ್ಧತಿ ಇದೆ.ನಂತರ ಅದ್ರ ಮುಂದೆ ಮನೆ ದೇವರ ವಿಗ್ರಹ ಇಟ್ಟು ಷೋಡಶೋಪಚಾರ ಪೂಜೆ ಮಾಡುತ್ತಾರೆ.ಭವನಾಶಿ ಒಳಗೆ ಅಕ್ಕಿ, ಹಣ , ಫಲ ಇಟ್ಟಿರುತ್ತಾರೆ.

 ಈ ದಿನ ದೇವರಿಗೆ ಪಾಯಸ, ಚಿತ್ರಾನ್ನ, ಹೂರಣದ ಒಬ್ಬಟ್ಟು, 2 ಬಗೆ ಪಲ್ಯ,2 ಬಗೆ ಕೋಸಂಬರಿ, ಮೊಸರು ಇತ್ಯಾದಿ ಅಡಿಗೆ ತಯಾರಿಸಿ ದೇವರ ಮುಂದೆ ಕುಡಿಬಾಳೆ ಎಲೆ ಮೇಲೆ ಅಡಿಗೆಯನ್ನು ಬಡಿಸುತ್ತಾರೆ.ಇದನ್ನು ದೇವರಿಗೆ ಎಡೆ ಹಾಕುವುದು ಎನ್ನುತ್ತಾರೆ.ನಂತರ ಆಹ್ವಾನಿಸಿದ ದಾಸಯ್ಯರಿಗೂ ಅಡಿಗೆಯನ್ನು ಬಾಳೆ ಎಲೆಯಲ್ಲಿ ಬಡಿಸುತ್ತಾರೆ.ಊಟದ ನಂತರ ದಾಸಯ್ಯ ಎಡೆಯನ್ನು ತೆಗೆದುಕೊಳ್ಳುತ್ತಾರೆ.ಅವರಿಗೆ ದಕ್ಷಿಣೆ ನೀಡಲಾಗುತ್ತದೆ.ನಂತರ ದಾಸಯ್ಯಗಳು ಶಂಖ ಊದಿ ಜಾಗಟೆ ಬಾರಿಸಿ ಮನೆ ಮಂದಿಗೆಲ್ಲ ಆಶೀರ್ವದಿಸಿ ತಮ್ಮ ಸಾಮಗ್ರಿಗಳೊಂದಿಗೆ ಅವರ ಮನೆಗೆ ಹಿಂದಿರುಗುತ್ತಾರೆ.

ನಂತರ ಮನೆಯವರೆಲ್ಲ ಹಬ್ಬದಡುಗೆ ಊಟ ಮಾಡುತ್ತಾರೆ.ಭವನಾಶಿಯಲ್ಲಿ ಹಾಕಿದ್ದ ಅಕ್ಕಿ ಹಣ ಹಾಗು ಹಣ್ಣುಗಳನ್ನು ಸ್ವಲ್ಪ ಪ್ರಸಾದ ಎಂದು ತೆಗೆದುಕೊಂಡು ಇರುತ್ತಾರೆ.

: ಸಾಮಾನ್ಯವಾಗಿ ಶ್ರಾವಣ ಶನಿವಾರ ದಾಸಯ್ಯ ಮನೆಗೆ ಭಿಕ್ಷೆ ಬೇಡಲು ಬರುವುದನ್ನು ಶುರು ಮಾಡಿಕೊಂಡಿರುತ್ತಾರೆ.ಕೆಲ ದಾಸಯ್ಯಗಳು ತಲೆಮಾರುಗಳಿಂದ ಈ ವೃತ್ತಿ ನಡೆಸುತ್ತಿರುತ್ತಾರೆ.ಆದರೆ ಈ ನಡುವೆ ವಿದ್ಯಾಭ್ಯಾಸ ಹಾಗು ಅನ್ಯ ವೃತ್ತಿಯ ಕಾರಣದಿಂದ ದಾಸಯ್ಯ ಭಿಕ್ಷಾ ವೃತ್ತಿ ಕಡಿಮೆ ಆಗಿದೆ.

 ವೈಚಾರಿಕವಾಗಿ ನೋಡಿದರೆ ದಾಸಯ್ಯ ಎಂಬ ಜನಾಂಗದ ಒಳಿತಿಗಾಗಿ ಈ ಸಂಪ್ರದಾಯ ಬಂದ ಹಾಗಿದೆ.ವೆಂಕಟೇಶ್ವರನ ಭಕ್ತರು ಹಿಂದೆಲ್ಲ ದೇವರ ಹೆಸರಿನಲ್ಲಿ ಈ ಜನಾಂಗಕ್ಕೆ ಸ್ವಲ್ಪ ಸಹಾಯ ಮಾಡಲು ಈ ಸಂಪ್ರದಾಯ ನೆರವಾಗಿದೆ.ಹಾಗು ಮನೆಯಲ್ಲಿ ಶಂಖ ಜಾಗಟೆಯ ಶಬ್ಬ ಸಕಾರಾತ್ಮಕ ಬೆಳವಣಿಗೆ ಉಂಟು ಮಾಡುತ್ತದೆ.


ಈ ಎಲ್ಲ ಮಾಹಿತಿ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಆಚರಣೆ ತಿಳಿಸುತ್ತದೆ.ಉಳಿದಂತೆ ಈ ಆಚರಣೆ ಅವರವರ ಮನೆಯ ಪೂರ್ವ ಸಂಪ್ರದಾಯದಂತೆ ಇರುವುದು

ರಾಧಿಕಾ ಜಿ.ಎನ್ - ಟೀವೀ ಹೋಸ್ಟ್ 

7019990492

Post a Comment

0Comments

Post a Comment (0)