ಶ್ರಾವಣ ಶುದ್ಧ ಷಷ್ಠಿ, ನಾಗರ ಪಂಚಮಿಯ ಮರುದಿನ ಸಿರಿಯಾಳ ಷಷ್ಠಿ ಎಂದು ಕರೆಯಲ್ಪಡುತ್ತದೆ. ಈ ದಿನ ಶಿವನ ಪೂಜೆ ಮಾಡುತ್ತಾರೆ. ಈ ಹಬ್ಬ ಎಲ್ಲರ ಮನೆಯಲ್ಲೂ ಆಚರಿಸಲ್ಪಡುವ ಹಬ್ಬ ಅಲ್ಲ.ಹಾಗು ಈ ಹಬ್ಬ ಗಂಡು ಮಕ್ಕಳು ಇರುವವರು ಮಾತ್ರ ಆಚರಿಸುತ್ತಾರೆ.
ನಾಗರಪಂಚಮಿಯಂದು ನಾಗನನ್ನು ಪೂಜಿಸಿ ಮರು ದಿನ ಶಿವನನ್ನು ಪೂಜಿಸುವುದು ಸೋಜಿಗದ ಸಂಗತಿ.
ಈ ದಿನ ಮಹಿಳೆಯರು ಮಂಗಳ ಸ್ನಾನ ಮಾಡಿ ,ಮಡಿ ವಸ್ತ್ರ ಧರಿಸಿ, ಶಿವನನ್ನು ಪೂಜಿಸುವರು.ಸಿರಿಯಾಳನ ರಂಗೋಲಿ ಹಾಕುವರು.ದೇವರಿಗೆ ಷೋಡಶೋಪಚಾರ ಪೂಜೆ ಮಾಡುವರು. ಈ ದಿನ 4 ಬಗ್ಗೆಯ ಅನ್ನ ಅಂದರೆ ಬರೀ ಅನ್ನ, ತುಪ್ಪನ್ನ, ನಿಂಬೆ ಚಿತ್ರಾನ್ನ, ಕೇಸರಿಬಾತ್, ಮೊಸರನ್ನ ಹೀಗೆ ಅನ್ನ ಮಾಡುವರು, 2 ಬಗೆ ಕೋಸಂಬರಿ, 2 ಬಗೆ ಪಲ್ಯ, ಪಾಯಸ, ಬೇಳೆ ಒಬ್ಬಟ್ಟು, ತೊವ್ವೆ, ಸಾರು, ಹುಳಿ ಇತ್ಯಾದಿ ಹಬ್ಬದಡುಗೆ ಮಾಡಿ ದೇವರಿಗೆ ನಿವೇದಿಸುವರು.ನಂತರ ಗಂಡು ಮಕ್ಕಳು ಇರುವ ಮುತ್ತೈದೆ ಯರನ್ನು ಮೊದಲೇ ಊಟಕ್ಕೆ ಹೇಳಿರುತ್ತಾರೆ.ಅವರನ್ನು ಕರೆದು,ಕುಂಕುಮ,ಮಂಗಳ ದ್ರವ್ಯ ನೀಡಿ ಭೋಜನ ವ್ಯವಸ್ಥೆ ಮಾಡುವರು.ಇದನ್ನು ಮಾಡುವಾಗ ಗಂಡು ಮಕ್ಕಳು ಮನೆಯಲ್ಲಿ ಇರಬಾರದು ಎನ್ನುವ ಪ್ರತೀತಿ ಇದೆ.ಇದನ್ನು ಬಿಸಿ ಬಾಗಿನ ಕೊಡುವುದು. ಎನ್ನುವರು.
ಬಿಸಿ ಬಾಗಿನ.....ಕೆಲವರು ಮುತ್ತೈದೆಯರಿಗೆ ಅಕ್ಕಿ, ಕಾಯಿ, ಬೆಲ್ಲ, ತರಕಾರಿ, ಕಾಳು, ಬೇಳೆ, ಹಾಲು, ಮೊಸರು, ತುಪ್ಪ, ಎಣ್ಣೆ, ಉಪ್ಪು,ಹಣ್ಣು ಇತ್ಯಾದಿ ಬಾಗಿನ ಕೊಡುವರು.ಇದಕ್ಕೆ ಹಸಿ ಬಾಗಿನ ಎನ್ನುವರು.
ಹಸಿ ಬಾಗಿನ.....
ನಂತರ ಮುತ್ತೈದೆಯರಿಗೆ ನಮಿಸಿ ತಮ್ಮ ಗಂಡು ಮಕ್ಕಳನ್ನು ಕರೆದು ಮುತ್ತೈದೆಯರಿಗೆ ನಮಸ್ಕಾರ ಮಾಡಲು ಹೇಳುವರು ಹಾಗು ಅವರ ದೀರ್ಘ ಆಯುಷ್ಯಕ್ಕಾಗಿ ಮುತ್ತೈದೆಯರಿಗೆ ಆಶೀರ್ವಾದ ಮಾಡಲು ಬಾಗಿನ ನೀಡುವರು.ಪತಿ ಇಲ್ಲದವರು ಕೂಡಾ ಈ ಬಾಗಿನ ಮುತ್ತೈದೆಯರಿಗೆ ನೀಡುವರು.ಹಾಗು ಮನೆಯಲ್ಲಿ ಎಷ್ಟು ಹೆಂಗಸರು ಗಂಡು ಮಕ್ಕಳನ್ನು ಪಡೆದಿರುವರೋ ಅಷ್ಟು ಸಂಖ್ಯೆಯ ಮುತ್ತೈದೆಯರಿಗೆ ಬಾಗಿನ ನೀಡುತ್ತಾರೆ.
ಈ ಲೇಖನ ಸ್ಮಾರ್ತ, ಹೊಯ್ಸಳ ಕರ್ನಾಟಕ ಸಂಪ್ರದಾಯದ ಶಿವಮೊಗ್ಗ ಭಾಗದ ಆಚರಣೆ ಬಗ್ಗೆ ತಿಳಿಸಿದೆ.ಉಳಿದಂತೆ ಬೇರೆ ಪಂಗಡಗಳಲ್ಲಿ ಅವರ ಮನೆತನದ ಸಂಪ್ರದಾಯದಂತೆ ಹಬ್ಬಗಳ ಆಚರಣೆ ಇರುತ್ತದೆ.
ವೈಚಾರಿಕವಾಗಿ ನೋಡಿದರೆ ಈ ಹಬ್ಬ ಹೆಂಗಳೆಯರ ಹಬ್ಬ.ಹಸಿ ಬಾಗಿನ, ಬಿಸಿ ಬಾಗಿನದ ಹೆಸರಲ್ಲಿ ಮುತ್ತೈದೆಯರಿಗೆ ಹೊಸ ಬೇಳೆ ಹಾಗು ವಸ್ತ್ರ ನೀಡುವುದು ಇದರ ಗೂಢಾರ್ಥ.ಸಿರಿಯಾಳನ ಕಥೆಯಲ್ಲಿ ಅವನ ಮಗ ಸತ್ತು ಬದುಕಿ ಬರುವುದರಿಂದ , ತಮ್ಮ ಗಂಡು ಮಕ್ಕಳು ಹಾಗೆಯೇ ಎಲ್ಲ ಗಂಡಗಳನ್ನು ದಾಟಿ ಶಿವನ ಅನುಗ್ರಹದಿಂದ ಬದುಕಲಿ ಎನ್ನುವುದು ಹಬ್ಬದ ಆಶಯ. ಈ ಹಬ್ಬ ಗಂಡು ಮಕ್ಕಳ ಪ್ರಾಮುಕ್ಯತೆ ಎತ್ತಿ ಹಿಡಿಯುತ್ತದೆ.ಸಿರಿಯಾಲನ ಕಥೆ ಎಲ್ಲರಿಗೂ ತಿಳಿದಿದೆ.ಚಲನಚಿತ್ರವು ಬಂದಿದೆ.
ಒಟ್ಟಿನಲ್ಲಿ ಶ್ರಾವಣದ ಮಳೆಗಾಲ ದಿಂದ ಹಬ್ಬಗಳ ಸಾಲು ಶುರುವಾಗುತ್ತದೆ.ಶಿವ, ನಾಗ, ನಂತರ ಗೌರಿ, ಗಣಪತಿ, ಅನಂತ ಹೀಗೆ ಮುಂದುವರೆಯುತ್ತದೆ.ಹೀಗಾಗಿ ಶ್ರಾವಣ ಮಾಸ ಬರುವ ಮುಂಚೆ ಹತ್ತಿ, ಬತ್ತಿ, ಎಳೆಗಳು,ಮನ್ಗಳ ದ್ರವ್ಯಗಳು,ಬಳೆ, ರವಿಕೆ ಕಣಗಳು,ಇತ್ಯಾದಿಗಳ ಖರೀದಿ ಹೆಂಗಳೆಯರು ಮಾಡುತ್ತಾರೆ.
ಶಿವನ ಹಾಗು ಶಿವನ ಪರಿವಾರಕ್ಕೆ ಸಂಬಂಧಿಸಿದ ಹಬ್ಬಗಳಲ್ಲಿ, ಹೊಸ ಮಣ್ಣು, ರಂಗೂಲಿ, ಹೊಸಾ ಬೆಳೆ ಇತ್ಯಾದಿ ಪ್ರಾಮುಖ್ಯತೆ ಪಡೆದಿವೆ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
7019990492