" ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ "

VK NEWS
By -
0

" ನಾಡಿನ ಸಮಸ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತ / ಶಿಷ್ಯ  ವೃಂದಕ್ಕೆ  ಶುಭಾಶಯಗಳು  "

" ಸಕಲ ಯಾತ್ರೆಗಳ - ತೀರ್ಥಗಳ ಫಲವೂ ಮಂಚಾಲೆಯಲ್ಲಿ...... "

ಶ್ರೀ ಆಹ್ಲಾದಾಂಶ ಶ್ರೀ ಅಪ್ಪಣ್ಣಾಚಾರ್ಯರ ಮಾತಲ್ಲಿ....

ಸರ್ವಯಾತ್ರಾಫಲಾ-

ವಾಪ್ತ್ಯೈಥಾಶಕ್ತಿ ಪ್ರದಕ್ಷಿಣಂ ।

ಕರೋಮಿ ತವ ಸಿದ್ಧಸ್ಯ 

ವೃಂದಾವನಗತಂ ಜಲಂ ।

ಶಿರಸಾಧಾರಯಾಮ್ಯದ್ಯ 

ಸರ್ವತೀರ್ಥಫಲಾಪ್ತಯೇ ।। 20 ।।

ಶ್ರೀ ರಾಘವೇಂದ್ರತೀರ್ಥರ ವೃಂದಾವನದಲ್ಲಿ ಸಕಲ ಕ್ಷೆತ್ರಗಳಲ್ಲಿರುವ ದೇವತೆಗಳೂ - ಸಕಲ ತೀರ್ಥಾಭಿಮಾನಿದೇವತೆಗಳೂ ಸನ್ನಿಹಿತರಾಗಿದ್ದಾರೆ.




ಆದ್ದರಿಂದ ಶ್ರೀ  ರಾಘವೇಂದ್ರ ಗುರುರಾಯರ ಬೃಂದಾವನಕ್ಕೆ ಪ್ರದಕ್ಷಿಣೆ ಮಾಡಿದರೆ ಎಲ್ಲಾ ಕ್ಷೇತ್ರಗಳ ಯಾತ್ರೆಯನ್ನು ಮಾಡಿದ ಫಲವು ಬರುತ್ತದೆ.

ಬೃಂದಾವನಕ್ಕೆ ಅಭಿಷೇಕ ಮಾಡಿದ ಜಲವು ಬೃಂದಾವನಗತ ಸಕಲ ತೀರ್ಥಾಭಿಮಾನಿ ದೇವತೆಗಳ ಸರ್ಶವನ್ನೂ ಪಡೆದಿರುವುದರಿಂದ ಗಂಗೆಯಲ್ಲಿ ಪ್ರವೇಶಿಸಿದ ಇತರ ಜಲವು ಬಗೆ ಬಗೆಯ ಅಂತಸ್ಸನ್ನು ಪಡೆದಂತೆ ಸಕಲ ತೀರ್ಥಗಳ ಅಂತಸ್ಸನ್ನು ಪಡೆಯುತ್ತದೆ.

ಆದ್ದರಿಂದ ಆ ಜಲವನ್ನು ಶಿರಸ್ಸಿನಲ್ಲಿ ಧರಿಸಿದರೆ ಸಕಲ ತೀರ್ಥಗಳಲ್ಲಿ ಸ್ನಾನ ಮಾಡಿದ ಫಲವು ಬರುತ್ತದೆ.

ಆದರೆ ಬೃಂದಾವನದಲ್ಲಿ ಎಲ್ಲಾ ಕ್ಷೇತ್ರಾಭಿಯಾನಿ ದೇವತೆಗಳೂ - ಎಲ್ಲಾ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ ಎಂಬ ತಿಳಿವಳಿಕೆಯಿಂದಲೂ - ಶ್ರದ್ಧೆಯಿಂದಲೂ ಬೃಂದಾವನಕ್ಕೆ ಪ್ರದಕ್ಷಿಣೆ ಮಾಡುವವನಿಗೂ -  ಬೃಂದಾವನಾಭಿಷೇಕ ಜಲ ಪ್ರೋಕ್ಷಣವನ್ನು ಮಾಡಿಕೊಳ್ಳುವವನಿಗೂ ಈ ಫಲವು ಸಿಗುತ್ತದೆ. ಇತರರಿಗೆ ಇಲ್ಲ!!!

ಅದರಲ್ಲಿಯೂ ಒಂದೊಂದು ಕ್ಷೇತ್ರಾಭಿಮಾನಿ- ದೇವತೆಯನ್ನೂ, ತೀರ್ಥಾಭಿಮಾನಿ ದೇವತೆಯನ್ನೂ ಪ್ರತ್ಯೇಕವಾಗಿ ಸ್ಮರಿಸುತ್ತಾ ಪ್ರದಕ್ಷಿಣೆ ಮತ್ತು ಜಲ ಪ್ರೋಕ್ಷಣವನ್ನು ಮಾಡಿಕೊಳ್ಳುವವನಿಗೆ ಮಾತ್ರ ಆ ಕ್ಷೇತ್ರದ  ಯಾತ್ರಾ,ಆ ತೀರ್ಥದ ಸ್ನಾನಾದಿಗಳ ಫ್ಲ್ಯಾವು ಸಿಗುತ್ತದೆ.

ಹಾಗೆ ಮಾಡದೇ - 

 " ಎಲ್ಲಾ ದೇವತೆಗಳೂ ಇದ್ದಾರೆಂದು " 

ಸಾಮಾನ್ಯವಾಗಿ ತಿಳಿದುಕೊಂಡರೆ ಸಾಮಾನ್ಯ ಪುಣ್ಯ ಲಭಿಸುತ್ತದೆಯೇ ಹೊರತು ಆಯಾ ಕ್ಷೇತ್ರ ಯಾತ್ರಾದಿಗಳಿಂದ ಬರುವ ವಿಶೇಷ ಪುಣ್ಯವು ಬರಲಾರದು.

ಆದ್ದರಿಂದ ಬದರೀ ಕ್ಷೇತ್ರ ಯಾತ್ರೆಯ ಫಲವು ಸಿಗಬೇಕಾದರೆ ಬೃಂದಾವನಾಂತರ್ಗತ ಶ್ರೀ ಬದರೀನಾರಾಯಣನನ್ನು ಸ್ಮರಿಸುತ್ತಾ ಪ್ರದಕ್ಷಿಣೆಯನ್ನೂ - ಗಂಗಾ ಸ್ನಾನ ಫಲವು ಸಿಗಬೇಕಾದರೆ ಗಂಗೆಯನ್ನೂ ಸ್ಮರಿಸುತ್ತಾ ಬೃಂದಾವನಕ್ಕೆ ಅಭಿಷೇಕ ಮಾಡಿದ ಜಲವು ಪ್ರೋಕ್ಷಣೆಯನ್ನೂ ಮಾಡಿಸಿಕೊಳ್ಳಬೇಕು.

ಈ ರೀತಿಯಿಂದ ಒಂದು ಕ್ಷೇತ್ರದ ಯಾತ್ರೆಯ ಫಲಕ್ಕಾಗಿ ಒಂದು ಪ್ರದಕ್ಷಿಣೆಯಂತೆ ಸಕಲ ಕ್ಷೇತ್ರಗಳ ಯಾತ್ರೆಯ ಫಲಕ್ಕಾಗಿ ಅಸಂಖ್ಯ ಪ್ರದಕ್ಷಿಣೆಗಳನ್ನೂ, ಒಂದು ತೀರ್ಥದ ಸ್ನಾನದ ಫಲಕ್ಕಾಗಿ ಒಂದುಸಲ ಬೃಂದಾವನ ಜಲದ ಪ್ರೋಕ್ಷಣೆಯಂತೆ ಸಕಲ ತೀರ್ಥಗಳಲ್ಲಿ ಸ್ನಾನದ ಫಲಗಳಿಗಾಗಿ ಅಸಂಖ್ಯ ಪ್ರೋಕ್ಷಣೆಗಳನ್ನೂ ಮಾಡಿಕೊಳ್ಳಬೇಕು.

ಆ ಅಸಂಖ್ಯ ಪ್ರೋಕ್ಷಣೆಗಳನ್ನೂ, ಅಸಂಖ್ಯ ಪ್ರದಕ್ಷಿಣೆಗಳನ್ನೂ ಮಾಡಿಕೊಕ್ಕುವ ಶಕ್ತಿಯು ಉತ್ತಮ ಅಧಿಕಾರಿಗಳಿಗೆ ಇದ್ದೀತೇ ಹೊರತು ಸಾಮಾನ್ಯಾಧಿಕಾರಿಗಳಿಗೆ ಇರುವುದಿಲ್ಲ!!

ಶ್ರೀ ಗುರುರಾಜರ ಭಕ್ತರು ಯಾವ ಯಾವ ಕ್ಷೇತ್ರಾಭಿಮಾನಿ ದೇವತೆಗಳನ್ನೂ ಸ್ಮರಿಸುತ್ತಾ ಎಷ್ಟು ಪ್ರದಕ್ಷಿಣೆಗಳನ್ನು ಮಾಡುತ್ತಾರೆಯೋ ಅಷ್ಟೂ ಕ್ಷೇತ್ರಗಳ ಯಾತ್ರೆಯ ಫಲಗಳೂ - ಎಷ್ಟು ಸಲ ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆಯೋ ಅಷ್ಟು ತೀರ್ಥಗಳಲ್ಲಿ ಸ್ನಾನಗಳು ಮಾಡಿದ ಫಲಗಳೂ ಬರುತ್ತವೆ.

ಈ ತತ್ತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀ ಆಹ್ಲಾದಾಂಶ ಅಪ್ಪಣ್ಣಾಚಾರ್ಯರು ಶ್ರೀ ಪ್ರಹ್ಲಾದಾಂಶ ರಾಯರನ್ನು....

ಓ ಗುರುಸಾರ್ವಭೌಮರೇ! 

ನೀವು ನಿಮ್ಮ ತಪಸ್ಸಿನ ಸಿದ್ಧಿಯನ್ನು ಪಡೆದಿರುವ ಮಹಾಪುರುಷರು. 

ನಿಮ್ಮ ಈ ಬೃಂದಾವನದಲ್ಲಿ ನಿಮ್ಮ ತಪಸ್ಸಿಗೆ ಮೆಚ್ಚಿರುವ ಸಕಲ ಕ್ಷೇತ್ರಾಭಿಮಾನಿಗಳೂ - ಸಕಲ ತೀರ್ಥಾಭಿಮಾನಿ ದೇವತೆಗಳೂ ಸನ್ನಿಹಿತರಾಗಿದ್ದಾರೆ.

ಆದ್ದರಿಂದ ನಿಮ್ಮ ಬೃಂದಾವನವನ್ನು ನನ್ನ ಶಕ್ತಿಯನ್ನನುಸರಿಸಿ ಪ್ರದಕ್ಷಿಣೆ ಮಾಡುತ್ತಿರುವೆನು. 

ನಾನು ಮಾಡಿದ ಪ್ರದಕ್ಷಿಣೆಗಳಿಗೆ ಯೋಗ್ಯವಾದ ಎಲ್ಲಾ ಕ್ಷೇತ್ರಗಳ ಯಾತ್ರೆಯ ಫಲವನ್ನೂ ನೀವು ನನಗೆ ಅನುಗ್ರಹಿಸಬೇಕು.

ಹಾಗೆಯೇ ನಾನು ನಿಮ್ಮ ಬೃಂದಾವನಕ್ಕೆ ಅಭಿಷೇಕವನ್ನು ಮಾಡಿದ ಜಲವನ್ನು ನನ್ನ ಶಕ್ತ್ಯಾನುಸಾರವಾಗಿ ಪ್ರೋಕ್ಷಣೆ ಮಾಡಿಕೊಳ್ಳುತ್ತಿದ್ದೇನೆ. 

ಅವುಗಳಿಗೆ ಯೋಗ್ಯವಾದ ತೀರ್ಥ ಸ್ನಾನಗಳ ಫಲಗಳನ್ನೂ ಅನುಗ್ರಹಿಸಬೇಕೆಂದು ನಮ್ಮ ಪರವಾಗಿ ಶ್ರೀ ಆಹ್ಲಾದಾಂಶ ಅಪ್ಪಣ್ಣಾಚಾರ್ಯರು ಶ್ರೀ ಪ್ರಹ್ಲಾದಾಂಶ ಶ್ರೀ ರಾಘವೇಂದ್ರತೀರ್ಥರನ್ನು ಪ್ರಾರ್ತಿಸಿದ್ದಾರೆ!!!!

-ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)