ಭೀಮನ ಅಮಾವಾಸ್ಯೆ
ಆಷಾಡ ಮಾಸದ ಅಮಾವಾಸ್ಯೆ ಭೀಮನ ಅಮಾವಾಸ್ಯೆ ಎಂದು ಹೆಸರು ಪಡೆದಿದೆ. ಆ ದಿನ ನವ ವಿವಾಹಿತೆಯರು ಜ್ಯೋತಿರ್ ಭೀಮೇಶ್ವರ ವ್ರತ ಆಚರಿಸುತ್ತಾರೆ.ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿಯೋಣ.
ಜ್ಯೋತಿ ರ್ಭೀಮೇಶ್ವರ ವ್ರತವು ಪ್ರಮುಖ 16 ವ್ರತಗಳಲ್ಲಿ ಒಂದು.ಇದನ್ನು ನವ ವಿವಾಹಿತೆಯರೂ ಮದುವೆಯಾದ ಮೇಲೆ 9 ವರುಷ ಆಚರಿಸಿ ತಮ್ಮ ಸಹೋದರರಿಗೆ ಕಡೆ ವರುಷ ಜೋಡಿ ದೀಪ ಉಡುಗೊರೆಯಾಗಿ ನೀಡುವರು.ಮದುವೆಯಾಗದ ಹೆಣ್ಣು ಮಕ್ಕಳು ಕೂಡಾ ತಮಗೆ ಒಳ್ಳೆಯ ಪತಿ ದೊರಕಳೆಂದು ಪ್ರಾರ್ಥಿಸಿ ಈ ಪೂಜೆ ಮಾಡುವರು. ಈ ಪೂಜೆ ಅಮಾವಾಸ್ಯೆ ಇದ್ದಾಗಲೇ ಆಚರಿಸುವಂತದ್ದು.ಒಂದು ವೇಳೆ ಸಂಜೆಗೆ ಅಮಾವಾಸ್ಯೆ ಬಂದರೆ ಹೆಣ್ಣು ಮಕ್ಕಳು ಅಲ್ಲಿಯವರೆಗೂ ಉಪವಾಸ ಇದ್ದು ಪೂಜೆ ಮಾಡುವರು.ಇನ್ನು ವಿಧಾನವೆಂದರೆ, ಹೆಣ್ಣು ಮಕ್ಕಳು ಆ ದಿನ ಮಂಗಳ ಸ್ನಾನ ಅಂದರೆ ಎಣ್ಣೆ ಸ್ನಾನ ಮಾಡುವರು. ಮಡಿ ವಸ್ತ್ರ ಧರಿಸುವರು.ಎಣ್ಣೆಯ ಹಾಗು ತುಪ್ಪದ ದೀಪ ಇಡುವರು.ಅದೇ ಶಿವ ಪಾರ್ವತಿ ಸ್ವರೂಪ.ಎಣ್ಣೆ ದೀಪ ಶಿವನಾದರೆ, ತುಪ್ಪದ ದೀಪ ಪಾರ್ವತಿ.ದೇವರ ಫೋಟೋ ಕೂಡಾ ಇಡಬಹುದು.ನಂತರ ದೀಪದ ಕಂಬಕ್ಕೆ ದೇವರ ಆವಾಹನೆ ಮಾಡಿ ಷೋಡಶೋಪಚಾರ ಪೂಜೆ ಮಾಡುವರು.ಹಬ್ಬದ ಅಡಿಗೆ ನೈವೇದ್ಯ ಇಡುವರು.ಹಣ್ಣು , ಕಾಯಿ, ತಾಂಬೂಲ ಇಡುವರು. ಈ ದಿನದ ವಿಶೇಷ ಸಿಹಿ ಎಂದರೆ ಭಂಡಾರ ಹಾಗು ಭಕ್ಷ್ಯ.ಗೋಧಿ ಹಿಟ್ಟಿನಲ್ಲಿ ಕಣಕ ಮಾಡಿ ಕೊಬ್ಬರಿ ಸಕ್ಕರೆ ಹೂರಣ ಇಟ್ಟು ಮುಚ್ಚಿ ಪೂರಿ ಕರಿದರೆ ಅದು ಭಕ್ಷ್ಯ ಎಂದು.ಹಾಗೆಯೇ ಪೂರಿ ಒಳಗೆ ಹೂರಣದ ಬದಲಿಗೆ ಗೋಧಿ ಹಿಟ್ಟಿನ ಸಣ್ಣ ಉಂಡೆಗಳು ಹಾಗು ನಾಣ್ಯಗಳನ್ನು ಇಟ್ಟು ಪೂರಿ ಕರಿದರೆ ಅದು ಭಂಡಾರ ಎಂದು.ಇದರಲ್ಲಿ ಮೊದಲ ವರುಷ ವಿವಾಹಿತೆಯರು 100 ಉಂಡೆ ಇಡುವರು .ಹಾಗೆಯೇ ಪ್ರತಿ ವರುಷ 100 ಉಂಡೆ ಹೆಚ್ಚಿಸುತ್ತಾ ಒಂಭತ್ತನೇ ವರುಷ 900 ಉಂಡೆ ಇಡಬೇಕು.
ಉಂಡೆಗಳು ಸಣ್ಣ ಗುಳಿಗೆ ಗಾತ್ರ ಇದ್ದರೆ ಸಾಕು.ನಂತರ ಈ ಭಕ್ಷ್ಯ ಹಾಗು ಭಂಡಾರ ಎರಡನ್ನೂ ಮನೆಯ ಯಾವುದಾದರೂ ಹೊಸ್ತಿಲಿನ ಎರಡೂ ಬದಿ ವೀಳ್ಯದೆಲೆಯ ಮೇಲೆ ಇಡುವರು.ನಂತರ ಅಣ್ಣ ತಮ್ಮಂದಿರನ್ನು ಕರೆದು ಅವರಿಗೆ ಗಂಧ ಅಕ್ಷತೆ ನೀಡುವರು.ಸಹೋದರರು ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ, ಒಂದು ಕಾಲು ಹೊಸ್ತಿಲಿನ ಒಳ ಭಾಗಕ್ಕೆ ಇಟ್ಟರೆ, ಇನ್ನೊಂದು ಕಾಲು ಹೊರ ಭಾಗಕ್ಕೆ ಇಡುವರು.ನಂತರ ಬಲ ಮೊಳಕೈ ನಿನ್ದ ಎದುರಿನ ಪೂರಿಗಳನ್ನು ಒಡೆದು, ನಂತರ ತಾವು ತಿರುಗದೆ ಬರೀ ಬೆನ್ನು ತಿರುಗಿಸಿ ಹಿಂದಿನ ಭಾಗದ ಹೊಸ್ತಿಲಿನ ಪೂರಿ ಒಡೆಯುವರು.ನಂತರ ತಮ್ಮ ಸಹೋದರಿಯರನ್ನು ಭಕ್ಷ್ಯ ಬೇಕೋ? ಭಂಡಾರ ಬೇಕೋ ? ಎಂದು ಕೇಳುವರು.ಆಗ ಸಹೋದರಿಯರು ಭಂಡಾರ ಬೇಕು ಎನ್ನುವರು.ಭಂಡಾರ ದ ಪೂರಿ ಒಡೆದಿದ್ದನ್ನು ಸಹೋದರಿಯರಿಯರು ತೆಗೆದುಕೊಂಡು, ಸಹೋದರರಿಗೆ ತಾಂಬೂಲ ಉಡುಗೊರೆ ನೀಡುವರು.
ಈ ಪೂಜೆಗೆ 9 ಎಲೆಯ, 9 ಮುಡಿ, 9 ಗಂಟು ಇರುವ ಹಸಿ ದಾರ ಇಟ್ಟು ಪೂಜಿಸಿ ಪೂಜೆಯ ನಂತರ ತಮ್ಮ ಬಲ ಕೈಗೆ ಹೆಂಗಳೆಯರು ಕಟ್ಟಿ ಕೊಳ್ಳುವರು.ದಾರ ಗಂಡನ ಕೈಲಿ, ಅಥವಾ ಪುರೋಹಿತರ ಕೈಲಿ ಅಥವಾ ಹಿರಿ ಮುತ್ತೈದೆಯರ ಕೈಲಿ ಕಟ್ಟಿಸಿಕೊಳ್ಳಬೇಕು.ದಾರ ಕಟ್ಟಿಸಿಕೊಳ್ಳುವಾಗ ಕೈಲಿ ಬೊಗಸೆಯಲ್ಲಿ ತಾಂಬೂಲ ,ಫಲ ಹಿಡಿದುಕೊಂಡಿರಬೇಕು.
ಈ ಕಥೆ ನವ ವಿವಾಹಿತೇಯರು ಪೂಜೆಯ ನಂತರ ಓದುವರು.
ವೈಚಾರಿಕ ಹಿನ್ನಲೆಯಲ್ಲಿ ನೋಡಿದರೆ ಬಹುಶಃ ಶ್ರಾವಣದಿಂದ ಮಳೆಗಾಲ ಶುರುವಾಗಿ ಗಂಡಸರ ಕೆಲಸ ಹೊರಗಡೆ ಇರುವುದರಿಂದ ಇದೊಂದು ಪೂಜೆ,ಪ್ರಾರ್ಥನೆ ಬಂದಿರಬಹುದು.ಹಾಗೆಯೇ ನವ ವಿವಾಹಿತೆಯರಿಗೆ ತವರ ನೆನಪಾಗಿ ಸಹೋದರರು ಬರುವುದು ಹಾಗು ಅವರಿಗೆ ಉಡುಗೊರೆ ನೀಡುವುದು ಅವರ ತವರಿನ ಭಾಂದವ್ಯ ಬೆಳೆಯಲಿ ಎಂದು ಇರಬಹುದು.ನೆನಪಿರಲಿ ಹಿಂದೆ ಬಾಲ್ಯ ವಿವಾಹ ಸಾಮಾನ್ಯವಾಗಿತ್ತು.ಆಗ ಇದೊಂದು ಅರ್ಥಪೂರ್ಣ ಆಚರಣೆ.
ಪ್ರಸ್ತುತ ಸಹೋದರ ಸಹೋದರಿಯರ ಉತ್ತಮ ಭಾಂದವ್ಯಕ್ಕೆ ಈಗಲೂ ಇಂತಹ ಆಚರಣೆ ನಮಗೆ ಬೇಕು. ಈ ಹಬ್ಬ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತ.ಎಲ್ಲ ಹೆಣ್ಣು ಮಕ್ಕಳಿಗೂ ಉತ್ತಮ ಪತಿ ದೊರಕಲಿ ಎಂದು ಹಾರೈಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ
ರಾಧಿಕಾ ಜಿ.ಎನ್.
7019990492
ಟೀವೀ ಹೋಸ್ಟ್