ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು; ದಲಿತ ದೌರ್ಜನ್ಯ ಕಾಯ್ದೆಯಡಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಎ1

VK NEWS
By -
0

 


ಯಾದಗಿರಿ, ಆಗಸ್ಟ್ 03: ಸೈಬರ್ ಠಾಣೆ ಪಿಎಸ್ಐ ಪರಶುರಾಮ  ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 17 ಗಂಟೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ದೂರು ಆಧರಿಸಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ವಿರುದ್ಧ ಜಾತಿ ನಿಂದನೆ ಆರೋಪದಡಿ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಎ1 ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಪುತ್ರ ಪಂಪನಗೌಡ ಆಗಿದ್ದಾರೆ.

ಪಿಎಸ್ಐ ಪರಶುರಾಮ  ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಡೆತ್ ನೋಟ್ ಬರೆದಿಟ್ಟಿಲ್ಲ. ಅವರನ್ನು ವರ್ಗಾವಣೆ ಮಾಡಿದ್ದಾರೆ ಅನ್ನೋ ಕಾರಣ ಕೊಟ್ಟಿದ್ದಾರೆ. ಇದನ್ನೆಲ್ಲ ತನಿಖೆ ಮಾಡಿ ಅಂತ ನಾನು ಸೂಚನೆ ಕೊಟ್ಟಿದ್ದೇನೆ. ತನಿಖಾ ವರದಿ ಬಂದ ಮೇಲೆ ನೋಡೋಣ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಪಿಎಸ್ಐ ಪರಶುರಾಮ ಪತ್ನಿ ಆರೋಪವನ್ನು ಪರಿಗಣಿಸುತ್ತೇನೆ. ಪ್ರಾಥಮಿಕವಾಗಿ ಕೆಲವೊಂದಿಷ್ಟು ಮಾಹಿತಿ ಕಲೆ ಹಾಕಬೇಕು. ಪರಿಶೀಲನೆ ಮಾಡಿ ಶೀಘ್ರದಲ್ಲೇ ಎಫ್ಐಆರ್ ದಾಖಲಿಸುತ್ತಾರೆ. ಯಾರೇ ಇದ್ದರು ಅವರ ವಿರುದ್ಧ ಎಫ್ಐಆರ್ ಹಾಕುತ್ತಾರೆ ಎಂದರು.

ಮೂರು ದಿನಗಳ ಹಿಂದೆಯಷ್ಟೇ ವರ್ಗಾವಣೆ ಬಗ್ಗೆ ನನ್ನ ಜೊತೆ ಮಾತಾಡಿದ್ದರು. ಒಂದು ವರ್ಷ ಕೂಡ ಆಗಿಲ್ಲ ಮತ್ತೆ ವರ್ಗಾವಣೆ ಮಾಡಿದ್ದಾರೆ ಎಂದಿದ್ದರು. ಮೃತ ಪಿಎಸ್ಐ ಪರಶುರಾಮ್ ಪತ್ನಿ ತುಂಬು ಗರ್ಭಿಣಿ, ಈ ರೀತಿಯಾದರೆ ಪ್ರಾಮಾಣಿಕ ಅಧಿಕಾರಿಗಳು ಏನು ಮಾಡಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಸದನದೊಳಗೆ ಮತ್ತು ಹೊರಗೂ ಯಾದಗಿರಿ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಪ್ರಸ್ತಾಪಿಸಿದ್ದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು, ಆದರೂ ಕ್ರಮ ಕೈಗೊಂಡಿಲ್ಲ. ಪಿಎಸ್ಐ ಸಾವಿಗೆ ಅಧಿಕಾರಿಗಳು ಹೊಣೆನಾ? ಮೇಲಧಿಕಾರಿಗಳು ಹೊಣೆನಾ? ಪರಶುರಾಮ್ ಸಾವು ಕೇಸ್ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಉನ್ನತಮಟ್ಟದ ತನಿಖೆಗೆ ಆಗ್ರಹಿಸಿ ಈಗಾಗಲೇ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಮೃತ ಪರಶುರಾಮ್ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಬೇಕು. ನನ್ನ ಎರಡು ತಿಂಗಳ ಸಂಬಳ ಮೃತ ಪರಶುರಾಮ ಕುಟುಂಬಕ್ಕೆ ನೀಡುತ್ತೇನೆ ಎಂದು ಹೇಳಿದರು.  


ಒಬ್ಬ ದಲಿತ ಅಧಿಕಾರಿಯ ವರ್ಗಾವಣೆಗೆ ಪ್ರಭಾವ ಬೀರಿದ ಚನ್ನಾರೆಡ್ಡಿ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಜನಪ್ರತಿನಿಧಿಯಾಗಿ ಮಾದರಿಯಾಗಿರಬೇಕಾಗಿದ್ದ ಶಾಸಕರು ಒಬ್ಬ ಅಧಿಕಾರಿಯ ಸಾವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಚನ್ನಾರೆಡ್ಡಿ ಅವರು ಕೂಡಲೇ ಈ ಸಾವಿಗೆ ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

Post a Comment

0Comments

Post a Comment (0)