ವಿಧಾನ ಪರಿಷತ್ತಿನ ಪ್ರತಿ ಪಕ್ಷದ ನಾಯಕರಾಗಿ ಛಲವಾದಿ ಟಿ. ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿರುವುದಾಗಿ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸದನದಲ್ಲಿ ತಿಳಿಸಿದರು.
ಈ ಸಮಯದಲ್ಲಿ ಛಲವಾದಿ ಟಿ. ನಾರಾಯಣ ಸ್ವಾಮಿ ಅವರು ಅಧಿಕೃತ ಜವಬ್ದಾರಿ ವಹಿಸಿಕೊಂಡ ಮೇಲೆ ಕಂದಾಯ ಸಚಿವರಾದ ಕೃಷ್ನಬೈರೇಗೌಡ ಅವರು ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡುತ್ತಾ, ಕೆಳ ಮನೆಗಿಂತ ಮೇಲ್ಮನೆಗೆ ಹೆಚ್ಚಿನ ಮಹತ್ವವಿದೆ. ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿ ಪಕ್ಷದ ನಾಯಕರಾಗಿ ಛಲವಾದಿ ಟಿ. ನಾರಾಯಣಸ್ವಮಿ ಅವರು ನೇಮಕವಾಗಿರುವುದು ಅಭಿನಂದನಾರ್ಹ. ಅವರು ಯಶಸ್ವಿಯಾಗಿ ಕಾರ್ಯ ನಿವರ್ಹಹಿಸಲಿ ಎಂದು ಶುಭ ಹಾರೈಸಿದರು. ಯಾವುದೇ ಒಂದು ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸಕಾರ್ಯಗಳನ್ನು ನಿರ್ವಹಿಸಬೇಕಾದಲ್ಲಿ ವಿರೋಧ ಪಕ್ಷದ ನಾಯಕತ್ವ ಇರಬೇಕು. ಪ್ರತಿ ಪಕ್ಷವು ಪರ್ಯಾಯ ಸರ್ಕಾರ. Shadow Government ಇದ್ದಂತೆ. ಸರ್ಕಾರಕ್ಕೆ ಪ್ರತಿ ಪಕ್ಷಗಳ ಸಲಹೆ ಸೂಚನೆಗಳು, ಟೀಕೆ ಟಿಪ್ಪಣಿಗಳು ಇದ್ದಲ್ಲಿ ಉತ್ತಮ ರೀತಿಯಲ್ಲಿ, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ಕೆಲವೊಂದು ಸಲ ಪ್ರತಿಭಟನೆಗಳು ಇರಬೇಕು. ರಚನಾತ್ಮಕವಾಗಿ ಹಾಗೂ ಸಕಾರತ್ಮಕವಾಗಿ ಕೆಲಸ ನಿರ್ವಹಿಸುವುದು ವಿರೋಧ ಪಕ್ಷದ ಕೆಲಸ. ಅದು ತಮ್ಮ ನಾಯಕತ್ವದಲ್ಲಿ ಆಗಲಿ. ರಾಜ್ಯದ ಜನರ ಹಿತ ಕಾಪಾಡುವ ದಿಕ್ಕಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ಎಲ್. ಭೋಜೆಗೌಡ ಪ್ರತಿ ಪಕ್ಷದ ನಾಯಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡುತ್ತಾ, ಪ್ರತಿಯೊಂದು ಹಂತದಲ್ಲೂ ಕೂಡ ಗುಣಾತ್ಮಕವಾದ ರಚನಾತ್ಮಕವಾದ ಟೀಕೆ ಟಿಪ್ಪಣಿಗಳು ಇರಬೇಕು. ಪ್ರತಿ ಪಕ್ಷದವರ ಟೀಕೆ ಟಿಪ್ಪಣಿಗಳನ್ನು ಸರ್ಕಾರವು ಸಂಯಮವಾಗಿ ಸ್ವೀಕರಿಸಿ ಸಮಾಜದ ಹಿತದೃಷ್ಠಿಯಿಂದ ಕೆಲಸ ನಿರ್ವಹಿಸಬೇಕು. ಎಲ್ಲರೂ ಒಟ್ಟಾಗಿ ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕೆಲಸ ಮಾಡಬೇಕು. ಅಧಿಕಾರ ಶಾಶ್ವತ ಅಲ್ಲ. ಅಧಿಕಾರದಲ್ಲಿ ಇದ್ದಾಗ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಸಲೀಮ್ ಅಹಮ್ಮದ್ ಮಾತನಾಡುತ್ತಾ, ವಿರೋಧ ಪಕ್ಷದ ನಾಯಕರ ಮೇಲೆ ಅತಿ ದೊಡ್ಡ ಜವಬ್ದಾರಿ ಇದೆ. ಅವರು ಹೋರಾಟ ಮಾಡುವ ಮನೋಭಾವದವರು.ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅದೇ ರೀತಿ ಸರ್ಕಾರಕ್ಕೆ ಅವರ ಸಂಪೂರ್ಣ ಬೆಂಬಲವಿರಬೇಕು. ಎಂದು ತಿಳಿಸಿ ಶುಭ ಹಾರೈಸಿ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಟಿ ರವಿ ಅವರು ಮಾತನಾಡುತ್ತಾ, ಸರ್ಕಾರವು ಸರಿಯಾದ ಹಾದಿಯಲ್ಲಿ ನಡೆಯ ಬೇಕಾದರೆ ವಿರೋಧ ಪಕ್ಷದ ನಾಯಕರ ಜವಬ್ದರಿ ಹೆಚ್ಚಿದೆ. ಅವರು ಸರ್ಕಾರವು ತಪ್ಪು ದಾರಿ ಹಿಡಿಯದಂತೆ ಸದಾ ಚಾಟಿಯನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿರಬೇಕು, ತಪ್ಪುದಾರಿಯಲ್ಲಿ ಹೆಚ್ಚೆ ಇಟ್ಟಾಗ ಚಾಟಿ ಬೀಸಿ ಎಚ್ಚರಿಸಬೇಕು ಎಂದು ತಿಳಿಸುತ್ತಾ ಶುಭ ಕೋರಿದರು.
ಸಭಾನಾಯಕರಾದ ಎನ್.ಎಸ್. ಭೋಸರಾಜು ಅವರು ಮಾತನಾಡುತ್ತಾ, ಹೋರಾಟದ ನಾಯಕರಾದ ಛಲವಾದಿ ಟಿ. ನಾರಾಯಣಸ್ವಾಮಿ ಅವರಿಗೆ ಇಂದು ವಿರೋಧ ಪಕ್ಷ ನಾಯಕ ಸ್ಥಾನ ಸಿಕ್ಕಿರುವುದು ಅಭಿನಂದನೀಯ. ಎಂದು ತಿಳಿಸಿದರು.
ಉಪ ಸಭಾಪತಿಗಳಾದ ಪ್ರಾಣೇಶ್ ಅವರು ಮಾತನಾಡುತ್ತಾ, ಇತಿಹಾಸ ನೋಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯು ಎಷ್ಟು ಗಟ್ಟಿಯಾಗಿದೆ. ಪ್ರಜಾಪ್ರಭುತ್ದ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕರ ಹಾಗೂ ಸಭಾ ನಾಯಕರ ಜವಬ್ದಾರಿ ಹೆಚ್ಚಿದೆ. ಎಲ್ಲರೂ ಸದನಕ್ಕೆ ಗೌರವ ತರುವಂತ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅದೇ ರೀತಿ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಶಾಂತರಾಂ ಬುಡ್ನ ಸಿದ್ದಿ, ಐವಾನ್ ಡಿ ಸೋಜಾ, ತಿಪ್ಪಣ್ಣ ಕಮಕನೂರ, ಎಸ್.ವಿ. ಸಂಕನೂರ, ಕೇಶವ ಪ್ರಸಾದ್, ಎನ್. ರವಿಕುಮಾರ್, ಗೋವಿಂದರಾಜು, ಪ್ರತಾಪಸಿಂಹ ನಾಯಕ, ಎಂ. ನಾಗರಾಜು, ವಸಂತ ಕುಮಾರ್, ಶ್ರೀಮತಿ ಭಾರತಿ ಶೆಟ್ಟಿ, ಟಿ.ಎ. ಶರವಣ, ಪಿ.ಹೆಚ್. ಪೂಜಾರ್, ಬಿ.ಕೆ. ಹರಿ ಪ್ರಸಾದ್, ಅನೀಲ್ ಕುಮಾರ್, ಶ್ರೀಮತಿ ಉಮಾಶ್ರೀ, ಶಶಿಲ್ ನಮೋಶಿ, ಅವರು ಸಹ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣ ಸ್ವಾಮಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸದರು.
ನಂತರ ಮಾತನಾಡಿ ಪ್ರತಿ ಪಕ್ಷದ ನಾಯಕರಾದ ಛಲವಾದಿ ಟಿ ನಾರಯಣಸ್ವಾಮಿ ಅವರು, ಅಭಿನಂದನೆ ಸಲ್ಲಿಸಿದ ಎಲ್ಲಾ ಸದಸ್ಯರಿರೂ ತಮ್ಮ ವಂದನೆಗಳನ್ನು ಸಲ್ಲಿಸಿ, ನಾನು ಬಹುದೂರ ಕ್ರಮಿಸಿ ಬಂದವನು. ನನ್ನ ದಾರಿ ಸುಗಮವಾಗಿರಲಿಲ್ಲ. ನಾನು ಎಂದು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದವನಲ್ಲ. ನಾನು ಸಮಾಜ ಸೇವೆ ಮಾಡಬೇಕು ಎಂಬ ಅಭಿಲಾಷೆಯೊಂದಿಗೆ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ನನ್ನ ತಂದೆ ತಾಯಿ ಕೂಲಿಕಾರರು. ನಾನು ಧೂಳಿನಿಂದ ಬಂದವನು. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಬಂದವನು. ನನಗೆ ವೈಯಕ್ತಿಕವಾಗಿ ಯಾರ ಮೇಲು ದ್ವೇಷ ಇಲ್ಲ. ನ್ಯೂನ್ಯತೆಗಳು ಕಂಡಾಗ ಎತ್ತಿ ಹಿಡಿದು ಹೋರಾಟ ಮಾಡುತ್ತೇನೆ. ಅದು ನನ್ನ ಕೆಲಸ. ಈ ಸ್ಥಾನಕ್ಕೆ ಬರಲು ನನ್ನನ್ನು ಗುರುತಿಸಿ ಆಯ್ಕೆ ಮಾಡಿದ ನಮ್ಮ ಪಕ್ಷದ ನಾಯಕರಿಗೆಲ್ಲರಿಗೂ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸ್ಥಾನದ ಘನತೆ ಗೌರವವನ್ನು ಎತ್ತಿ ಹಿಡಿಯುವ ಕೆಲಸವನ್ನು ನಾನು ಮಾಡುತ್ತೇನೆ. ಯಾರನ್ನು ಬದಿಗಿಡುವ, ತಿರಸ್ಕರಿಸುವ ಕೆಲಸ ನಾನು ಎಂದೂ ಮಾಡುವುದಿಲ್ಲ. ಸರ್ಕಾರದ ನ್ಯೂನ್ಯತೆಗಳನ್ನು ಎತ್ತಿ ಹಿಡಿದು ಸರಿದಾರಿಯಲ್ಲಿ ನಡೆಸುವ ಕೆಲಸವನ್ನು ನಾನು ಮಾಡುತ್ತೇನೆ.
ನಾನು ಬಹಳ ಕಲಿತಿದ್ದು, ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರಿಂದ. ಅವರಲ್ಲಿ ಇದ್ದ ಕೆಚ್ಚು ನನ್ನಲ್ಲಿ ಇದೆ. ನಾನು ಎಂದೆಂದಿಗೂ ಬಂಗಾರಪ್ಪನವರಿಗೆ ಗೌರವ ಕೊಡುತ್ತೇನೆ. ರಾಜಕೀಯದಲ್ಲಿ ಅಧಿಕಾರದ ಆಸೆ ಪಡುವುದು ತಪ್ಪೇನಿಲ್ಲ ಎಂದು ಬಂಗಾರಪ್ಪನವರು ಹೇಳುತ್ತಿದ್ದರು. ಅಧಿಕಾರವನ್ನು ಕೇಳಬೇಕು. ಕೇಳದೇ ರಾಜಿ ಮಾಡಿಕೊಂಡು ಕುಳಿತುಕೊಳ್ಳದೇ, ಅದು ಸಿಗದಿದ್ದಾಗ ವಿರುದ್ಧವಾಗಿಯಾದರೂ ಕುಳಿತುಕೊಳ್ಳಬೇಕು ಎಂದು ಹೇಳುತ್ತಿದ್ದರು. ಎಂದು ಬಂಗಾರಪ್ಪನವರು ತಿಳಿಸಿದ ಮಾತುಗಳನ್ನು ಇದೇ ಸಮಯದಲ್ಲಿ ನೆನಪು ಮಾಡಿಕೊಂಡರು.
ತಳ ಸಮುದಾಯದ ಜನಾಂಗದವರಿಗೆ ತೊಂದರೆ, ಮೋಸ, ವಂಚನೆ ಆದರೆ ನಾನು ಹೋರಾಟ ಮಾಡೇ ಮಾಡುತ್ತೇನೆ. ಅಂದರೆ ನಾನು ಬೇರೆ ಸಮುದಾಯಗಳ ವಿರೋಧಿಯಲ್ಲ. ನಾನು ಯೋಗದಿಂದ ಬಂದವನಲ್ಲ. ಯೋಗ್ಯತೆಯಿಒಂದ ಬಂದವನು. ಈ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಅದಕ್ಕೆ ಎಲ್ಲರ ಸಹಕಾರ ಬೆಂಬಲ ನನಗೆ ಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು, ಛಲವಾದಿ ಟಿ. ನಾರಾಯಣಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಿ ನೇಮಕ ಆಗಿರುವುದು ನನಗೆ ಸಂತೋಷ ತಂದಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಇಂದು ಈ ಸ್ಥಾನದಲ್ಲಿ ಕುಳಿತಿರುವುದು ನನಗೆ ಹೆಮ್ಮೆ ಅನಿಸಿದೆ. ಅವರು ಉತ್ತಮ ರೀತಿಯಲ್ಲಿ ಕೆಲವನ್ನು ನಿರ್ವಹಿಸಿ ಜವಬ್ದಾರಿಯುತ ಸ್ಥಾನವನ್ನು ನಿಭಾಯಿಸಿಕೊಂಡು ಹೋಗಬೇಕು. ವಿಧಾನ ಪರಿಷತ್ತಿನ ಘನತೆ ಗೌರವವನ್ನು ಉಳಿಸುವ ಕೆಲಸ ಮಾಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.