ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ಹಗರಣದ ಆರೋಪಿಯಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಯಲ್ಲಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಾಲಯದ (ಸಿಸಿಎಚ್-82) ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಮುಂದೆ ಬೆಳಗ್ಗೆ 11.30ಕ್ಕೆ ಹಾಜರುಪಡಿಸಲಾಯಿತು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ಹಾಜರಾದ ಇ.ಡಿ ವಕೀಲ ಪಿ.ಪ್ರಸನ್ನ ಕುಮಾರ್ ಅವರು, ಪ್ರಕರಣದ ಮತ್ತೊಬ್ಬ ಆರೋಪಿಯಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಹೈದರಾಬಾದ್ನ ಸತ್ಯನಾರಾಯಣ ವರ್ಮ ಅವರನ್ನು ಬಾಡಿ ವಾರಂಟ್ ಮುಖಾಂತರ ವಶಕ್ಕೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು.
ಈ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಆರೋಪಿ ಸತ್ಯನಾರಾಯಣ ವರ್ಮ ಅವರನ್ನು ಮಂಗಳವಾರ (ಜುಲೈ 23) ಕೋರ್ಟ್ಗೆ ಹಾಜರುಪಡಿಸುವಂತೆ ಆದೇಶಿಸಿದರು. ಅಂತೆಯೇ, ನಾಗೇಂದ್ರ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.