ವಿಜಯೇಂದ್ರ, ಅಶೋಕ್ ಕ್ಷೇತ್ರಕ್ಕೆ ಅನುದಾನ: ರಾಜ್ಯ ಬಿಜೆಪಿಯಲ್ಲಿ ಸಂಚಲನ

VK NEWS
By -
0


 ಬೆಂಗಳೂರು : ವಿಧಾನ ಮಂಡಲದ ಮಳೆಗಾಲದ (2024) ಅಧಿವೇಶನ ಜುಲೈ 26ಕ್ಕೆ ಮುಗಿಯಬೇಕಿತ್ತು. ಆದರೆ, ವಿಪಕ್ಷಗಳ ನಿರಂತರ ಪ್ರತಿಭಟನೆಯ ಹಿನ್ನಲೆಯಲ್ಲಿ ಒಂದು ದಿನದ ಮೊದಲೇ ಮುಕ್ತಾಯಗೊಳಿಸಲಾಗಿದೆ. ಎರಡು ವಾರದ ಅಧಿವೇಶನದಲ್ಲಿ ಕಲಾಪ ನಡೆದದ್ದು ಬರೀ 37 ತಾಸು. 

ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಜುಲೈ 30ರಿಂದ ಎರಡು ದಿನ ಮೈಸೂರು ಚಲೋ ಪಾದಯಾತ್ರೆಗೆ ಸಿದ್ದರಾಗುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಮೈಸೂರು - ಬೆಂಗಳೂರು ಪಾದಯಾತ್ರೆಯನ್ನು ನಡೆಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಈ ಬೆಳವಣಿಗೆಯ ನಡುವೆ, ಬಿಜೆಪಿ ನಾಯಕರಿಬ್ಬರ ಹೊಂದಾಣಿಕೆ ರಾಜಕೀಯದ ಬಗ್ಗೆ ಗುಸುಗುಸು ಸುದ್ದಿಗಳು ಹರಿದಾಡಲಾರಂಭಿಸಿದೆ. 

ಬಿಜೆಪಿ ನಾಯಕರು ನಡೆಸಲು ಉದ್ದೇಶಿಸಿರುವ ಮೈಸೂರು ಯಾತ್ರೆಗೆ ಸ್ವಪಕ್ಷದಲ್ಲೇ ಭಿನ್ನರಾಗ ಎದ್ದಿದೆ. ಈ ಪಾದಯಾತ್ರೆ ಬರೀ ನಾಟಕ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಇಬ್ಬರು ಬಿಜೆಪಿ ನಾಯಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿದೆ ಎನ್ನುವ ಆರೋಪವನ್ನು ಮಾಡಿದ್ದಾರೆ. 

ಪ್ರತಿಭಟನೆ ಅಂದರೆ ಬರೀ ಧಿಕ್ಕಾರ, ಜೈಕಾರ ಕೂಗಿ ಜೈಲಿಗೆ ಹೊಗಿ ಟೀ ಕುಡಿದುಕೊಂಡು ಬರುವುದಲ್ಲ ಎಂದು ಯತ್ನಾಳ್ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕಿವಿ ಹಿಂಡಿದ್ದರು. ಇವರಿಬ್ಬರು ಪರೋಕ್ಷವಾಗಿ ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ಅವರನ್ನು ಟಾರ್ಗೆಟ್ ಮಾಡಿ ಹೇಳಿದ ಮಾತು ಇದಾಗಿತ್ತು. 

ಬಿಜೆಪಿಯ ಮೈಸೂರು ಪಾದಯಾತ್ರೆಯಿಂದ ಏನೂ ಲಾಭವಿಲ್ಲ. ಮೊದಲು, ನಮ್ಮ ಪಕ್ಷದಲ್ಲೇ ಸಾಕಷ್ಟು ಹುಳುಕಿದೆ. ಹೊಂದಾಣಿಕೆ ರಾಜಕೀಯ ನಿಲ್ಲದಿದ್ದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲು ಸಾಧ್ಯವಿಲ್ಲ ಎಂದು ಯತ್ನಾಳ್, ಯಡಿಯೂರಪ್ಪ ಕುಟುಂಬವನ್ನು ಬಹಿರಂಗವಾಗಿಯೇ ಯತ್ನಾಳ್ ಟೀಕಿಸಿದ್ದರು. 

ಸದನದಲ್ಲಿ ನಡೆದ ಅಹೋರಾತ್ರಿ ಧರಣಿಯ ಬಗ್ಗೆಯೂ ಪರೋಕ್ಷವಾಗಿ ಯತ್ನಾಳ್ ಗುರುತರ ಆರೋಪವನ್ನು ವಿಜಯೇಂದ್ರ ವಿರುದ್ದ ಮಾಡಿದ್ದರು. ನಾವು ಪ್ರತಿಭಟನೆ ನಡೆಸುತ್ತಿರಬೇಕಾದರೆ, ಉಪ ಮುಖ್ಯಮಂತ್ರಿಗಳ ಜೊತೆ ಅವರಿಗೇನು ಕೆಲಸ ಎಂದು ಕಿಡಿಕಾರಿದ್ದರು. ಕಂತೆಕಂತೆ ಫೈಲಿಗೆ ಸಹಿ ಹಾಕಿಸಿಕೊಳ್ಳಲಾ? ಎಂದು ಪ್ರಶ್ನಿಸಿದ್ದರು. 

ಜೊತೆಗೆ, ಶಿಕಾರಿಪುರ ಮತ್ತು ಪದ್ಮನಾಭ ನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿದೆ. ಆ ಮೂಲಕ, ವಿಜಯೇಂದ್ರ ಮತ್ತು ಅಶೋಕ್ ಅವರ ಬಾಯಿ ಮುಚ್ಚಿಸುವ ಕೆಲಸ ನಡೆದಿದೆ ಎನ್ನುವ ರೀತಿಯಲ್ಲಿ ಆಪಾದನೆ ಮಾಡಿದ್ದರು. ಸ್ವಪಕ್ಷೀಯದವರ ಆರೋಪ ಇಬ್ಬರು ನಾಯಕರಿಗೆ ಸದನದಲ್ಲಿ ತೀವ್ರ ಮುಜುಗರ ತಂದೊಡ್ಡಿತ್ತು. 

ಸಿದ್ದರಾಮಯ್ಯನವರ ಮನೆಗೆ ನೀವು ಹೋಗುತ್ತೀರಿ ಎಂದು ಸದನದಲ್ಲಿ ಅಶೋಕ್ ಅವರ ಕಾಲೆಳೆದಿದ್ದರು. ಬಿಜೆಪಿಯ ಉಚ್ಚಾಟಿತ ನಾಯಕ ಈಶ್ವರಪ್ಪ ಕೂಡಾ, ಅಪ್ಪಮಕ್ಕಳ ಹೊಂದಾಣಿಕೆಯ ರಾಜಕೀಯದ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಇದರ ಮಧ್ಯೆ, ಯತ್ನಾಳ್ ಅವರ ಅನುದಾನ ಬಿಡುಗಡೆಯಾದ ಆರೋಪ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

Post a Comment

0Comments

Post a Comment (0)