ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ: ತಸ್ಮೈಶ್ರೀ ಗುರುವೇ ನಮಃ ||
ಆಷಾಢ ಮಾಸವೆಂದರೆ ವಿಶೇಷವಾದ ತಿಂಗಳು ಎಂದರ್ಥ. ಆಷಾಢ ಪೂರ್ಣಿಮೆಯು ವ್ಯಾಸ ಪೂರ್ಣಿಮೆಯೆಂದೇ ಪ್ರತೀತಿ. ಗುರುಗಳನ್ನು ಪೂಜಿಸುವ ಮಾಸವಿದು. ಅರ್ಥಾತ್ ಗುರು ಮಾಸವಿದು. ಅಧ್ಯಾತ್ಮ ಸಾಧಕರಿಗೆ ಪರಮಪವಿತ್ರವೂ ಹೌದು. ಅಜ್ಞಾನದ ಬದುಕಿಗೆ ಸುಜ್ಞಾನದ ಬೆಳಕನ್ನು ನೀಡಿ ಮುನ್ನಡೆಸುವ ಗುರುವಿನ ಅನಿವಾರ್ಯತೆ ಇದೆ.
ಪಂಚಾಂಗದ ಪ್ರಕಾರ, ಗುರು ಪೂರ್ಣಿಮಾವನ್ನು ಆಷಾಢ ಮಾಸದ ಪೂರ್ಣಿಮಾ ತಿಥಿಯಂದು (ಹುಣ್ಣಿಮೆಯ ದಿನ) ಆಚರಿಸಲಾಗುತ್ತದೆ. ಈ ವರ್ಷ, ಗುರು ಪೂರ್ಣಿಮೆಯನ್ನು ಜುಲೈ 21, 2024 ರಂದು ಆಚರಿಸಲಾಗುತ್ತಿದೆ.
ಪೂರ್ಣಿಮಾ ತಿಥಿ ಆರಂಭ - ಜುಲೈ 20, 2024 - 05:59 PM
ಪೂರ್ಣಿಮಾ ತಿಥಿ ಕೊನೆಗೊಳ್ಳುವ ಸಮಯ - ಜುಲೈ 21, 2024 - 03:46 PM
ಪುರಾಣಗಳ ಪ್ರಕಾರ ಈ ಮಂಗಳಕರ ದಿನವು ಋಷಿಗಳಲ್ಲಿ ಒಬ್ಬರು ಮತ್ತು ಋಷಿ ಪರಾಶರ ಪುತ್ರ ವ್ಯಾಸನ ಜನ್ಮವನ್ನು ಸೂಚಿಸುತ್ತದೆ. ಅಂದರೆ ವೇದ ವ್ಯಾಸರ ಜನನವಾದ ದಿನ ಎಂದು ಆಚರಿಸಲಾಗುತ್ತದೆ.
ಗುರುಪೂರ್ಣಿಮೆಯಂದು ಚಾತುರ್ಮಾಸ ಆರಂಭವಾಗುತ್ತದೆ. ಸನ್ಯಾಸಿಗಳು ಗುರುಪೂರ್ಣಿಮೆಯಂದು ವ್ರತ ಸಂಕಲ್ಪ ಮಾಡುತ್ತಾರೆ. ಸಾಮಾನ್ಯವಾಗಿ ಪರಿವ್ರಾಜಕರಾಗಿರುವ ಯತಿಗಳು ಆಷಾಢ ಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯ ವರೆಗೆ ಒಂದೇ ಪ್ರದೇಶದಲ್ಲಿದ್ದುಕೊಂಡು ನಾಲ್ಕು ತಿಂಗಳ ವ್ರತವನ್ನು ಕೈಗೊಳ್ಳುವ ಚಾತುರ್ಮಾಸ್ಯ ವ್ರತದ ಸಂಕಲ್ಪವನ್ನು ವ್ಯಾಸಪೂಜೆ ಮಾಡುವ ಮೂಲಕ ಕೈಗೊಳ್ಳುತ್ತಾರೆ.
ಚಾತುರ್ಮಾಸ್ಯ ವ್ರತ ಸಂಕಲ್ಪ : ಅದ್ವೈತ ಪರಂಪರೆಯ ಪ್ರಕಾರ ಬ್ರಹ್ಮವಿದ್ಯೆಯನ್ನು ತಿಳಿಸುವ ಗುರುಗಳಾದ ಮೂವರು ಆಚಾರ್ಯಗಳ ಪಂಚಕಗಳಿಗೆ ಷೋಡಶೋಪಚಾರ ಪೂಜೆ ನೆರವೇರಿಸುವ ಮೂಲಕ ವ್ಯಾಸಪೂಜೆ ಪ್ರಾರಂಭವಾಗುತ್ತದೆ. ವ್ಯಾಸಪೂಜೆ ವೇಳೆ ಬ್ರಹ್ಮಚಾರಿಗಳಾದ ಸನಕ, ಸನಂದನ, ಸನತ್ಸುಜಾತ ಮತ್ತು ಸನತ್ಕುಮಾರರು ಅನುಕ್ರಮವಾಗಿ ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ದಿಕ್ಕುಳಲ್ಲಿದ್ದು, ಮಧ್ಯದಲ್ಲಿ ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸಿರುವ ಕೃಷ್ಣ ಪಂಚಕಕ್ಕೆ ಪೂಜೆ ನೆರವೇರುತ್ತದೆ.
ನಂತರ ವೇದವ್ಯಾಸ ಪಂಚಕದಲ್ಲಿ, ವೇದವ್ಯಾಸರು ಮಧ್ಯದಲ್ಲಿರಲಿದ್ದು, ಅವರ ನಾಲ್ಕು ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ, ಸಮನ್ತರಿರುವ ವ್ಯಾಸ ಪಂಚಕಕ್ಕೆ ಪೂಜೆ ನಡೆಯಲಿದೆ.
ವ್ಯಾಸ ಪಂಚಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಆದಿಶಂಕರರ ಪಂಚಕಕ್ಕೆ ಪೂಜೆ ನಡೆಯಲಿದ್ದು, ಕೇಂದ್ರ ಭಾಗದಲ್ಲಿ ಆದಿ ಶಂಕರರು, ಸುತ್ತಲೂ ಅವರ ಶಿಷ್ಯರಾದ ಹಸ್ತಾಮಲಕಾಚಾರ್ಯರು, ಸುರೇಶ್ವರಾಚಾರ್ಯರು, ಪದ್ಮಪಾದಾಚಾರ್ಯರು, ತೋಟಕಾಚಾರ್ಯರಿರುವ ಪಂಚಕಕ್ಕೆ ಪೂಜೆ ನಡೆಯಲಿದೆ. ಈ ಮೂರು ಪಂಚಕಗಳಿಗೆ ಪೂಜೆ ಸಲ್ಲಿಸಿದ ಬಳಿಕ ಯತಿಗಳು ಆದಿ ಶಂಕರರಿಂದ ಪ್ರಾರಂಭವಾಗಿ ಅವರ ಹಿಂದಿನ ಗುರುಗಳವರೆಗೆ ನಡೆದು ಬಂದಿರುವ ಗುರುಪರಂಪರೆಗೆ ಪೂಜೆ ಸಲ್ಲಿಸಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ.