NEET :ನೀಟ್ ವ್ಯವಸ್ಥೆ ಕೊನೆಯಾದರೆ ಮಾತ್ರ ಮಕ್ಕಳಿಗೆ ನ್ಯಾಯ ಸಿಗುತ್ತದೆ: ಮೋಹನ್ ದಾಸರಿ

VK NEWS
By -
0

ಬೆಂಗಳೂರು: ನೀಟ್‌ ವ್ಯವಸ್ಥೆ ದೇಶವನ್ನು 30 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ನಮ್ಮ ರಾಜ್ಯದಲ್ಲಿದ್ದ ಸಿಇಟಿ ಮುಖಾಂತರ ರಾಜ್ಯದಲ್ಲಿ ಮೂಲೆ ಮೂಲೆಗಳಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಅರ್ಹತೆ ಪಡೆಯುತ್ತಿದ್ದರು. ಆದರೆ ನೀಟ್‌ನಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು. 




ನೀಟ್ ಹಗರಣದ ವಿರುದ್ಧ ಆಮ್ ಆದ್ಮಿ ಪಾರ್ಟಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಕಳೆದ ಐದಾರು ವರ್ಷದಲ್ಲಿ ನೀಟ್‌ನಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಮೊದಲ ರ್‍ಯಾಂಕ್ ಪಡೆಯುತ್ತಿದ್ದರೆ ಈ ಬಾರಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದಾರೆ. ಈ ಬಾರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದರು.

ನೀಟ್ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ನಮ್ಮ ನಾಡಿನ ಮೆಡಿಕಲ್ ಕಾಲೇಜುಗಳು ನಮ್ಮ ಮಕ್ಕಳಿಗೆ ಇರಬೇಕು, ನೀಟ್ ಪರೀಕ್ಷೆಯಲ್ಲಿ ಒಂದೇ ಕೊಠಡಿಯಲ್ಲಿ ಆರು ಮಕ್ಕಳು 720 ಕ್ಕೆ 720 ಅಂಕ ಪಡೆಯುತ್ತಾರೆ ಎಂದರೆ ಇದು ಅಕ್ರಮವಲ್ಲದೆ ಇನ್ನೇನು ಎಂದರು. 

ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಸಮಿತಿ ರಚನೆ ಮಾಡಿ, ನಮ್ಮ ರಾಜ್ಯಕ್ಕೆ ನೀಟ್ ಅವಶ್ಯಕತೆ ಇಲ್ಲ ಎಂದು ಕಾನೂನಾತ್ಮಕವಾಗಿ ಹೋರಾಟ ಮಾಡಲಿ. ನೀಟ್‌ನಿಂದ ರಾಜ್ಯಕ್ಕೆ ವಿನಾಯಿತಿ ಸಿಗುವ ಮಸೂದೆಯನ್ನು ಅಂಗೀಕರಿಸಲಿ. ಪಿಯುಸಿ ಮತ್ತು ಸಿಇಟಿಯಲ್ಲಿ ಪಡೆಯುವ ಅಂಕಗಳನ್ನು ಮಾತ್ರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮಾನದಂಡವಾಗಿ ಪರಿಗಣಿಸಲಿ. ರಾಜ್ಯದ ಎಲ್ಲಾ ಶಾಸಕರು, ಸಂಸದರು ಲೋಕಸಭೆ ಮುಂದೆ ಹೋರಾಟ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಎಲ್ಲರೂ ನೀಟ್ ವಿರುದ್ಧ ದನಿ ಎತ್ತಬೇಕು. ಅದರಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮೋಹನ್ ದಾಸರಿ ಹೇಳಿದರು. 

ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿ, ಕಳೆದ 15-20 ದಿನಗಳಿಂದ ಇಡೀ ದೇಶ ಈ ಹಗರಣದ ಬಗ್ಗೆ ಮಾತನಾಡುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಇದರ ಬಗ್ಗೆ ಪ್ರಶ್ನೆ ಮಾಡಿದೆ. ಆದರೂ ಕೂಡ, ಕೇಂದ್ರ ಸಚಿವರು ಮಾತ್ರ ಯಾವುದೇ ಹಗರಣ ಎಂದು ಹೇಳುತ್ತಲೇ ಇದ್ದಾರೆ. ಇವರಂತಹ ಭ್ರಷ್ಟರು ಮತ್ತೆಲ್ಲೂ ಇರಲು ಸಾಧ್ಯವಿಲ್ಲ ಎಂದರು. 

'ನೀಟ್ ಇಂದ ರಾಜ್ಯದ ಮಕ್ಕಳಿಗೆ ಅನ್ಯಾಯ ಮಾಡುತ್ತಿರುವ ಮೋದಿ ಸರ್ಕಾರಕ್ಕೆ ಧಿಕ್ಕಾರ', 'ನೀಟ್ ಒಕ್ಕೂಟ ವ್ಯವಸ್ಥೆ ವಿರೋಧಿ', 'ನೀಟ್ ಹಗರಣದಲ್ಲಿ ಭಾಗಿಯಾದ ಮೋದಿ ಸರ್ಕಾರಕ್ಕೆ ಧಿಕ್ಕಾರ' ಎನ್ನುವ ಘೋಷಣೆಗಳನ್ನು ಕೂಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Post a Comment

0Comments

Post a Comment (0)