ಇಂದು ಪರಪ್ಪನ ಜೈಲಿಗೆ ದರ್ಶನ್‌ & ಗ್ಯಾಂಗ್?

VK NEWS
By -
0

ಬೆಂಗಳೂರು ಜೂನ್ 20: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಸಹಚರರು ಬಂಧಿತರಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಹತ್ತು ದಿನಗಳು ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸ್ ಕಸ್ಟಡಿ ಗುರುವಾರ ಅಂತ್ಯವಾಗಲಿದ್ದು, ನಟ ದರ್ಶನ್ ಸೇರಿದಂತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ. ಒಂದು ವೇಳೆ ನಾಳೆ ಪರಪ್ಪನ ಅಗ್ರಹಾರಕ್ಕೆ ಹೋದರೆ ದರ್ಶನ್ ೨ನೇ ಬಾರಿಗೆ ಅಲ್ಲಿ ತಮ್ಮ ದಿನಗಳನ್ನು ಕಳೆಯಲಿದ್ದಾರೆ.

ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಪ್ರಬಲ ಸಾಕ್ಷ್ಯಾಧಾರಗಳನ್ನು ಜಪ್ತಿ ಮಾಡಿದ್ದು, ಆರೋಪಿಗಳ ಡಿಎನ್ಎ ಪರೀಕ್ಷೆಗೆ ಮುಂದಡಿ ಇಟ್ಟಿದ್ದಾರೆ. ಜೂನ್ 8ರಂದು ರೇಣುಕಾಸ್ವಾಮಿ ಮೇಲೆ ಅಮಾನುಷ ಕ್ರೌರ್ಯ ಎಸಗಿ ಕೊಲೆಗೈದ ಪಟ್ಟಣಗೆರೆ ಶೆಡ್ನಲ್ಲಿ ದೊರೆತ ರಕ್ತದ ಕಲೆಗಳು, ತಲೆಗೂದಲು ಮತ್ತಿತರ ಸೂಕ್ಷ್ಮ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಈ ವಸ್ತುಗಳಿಗೂ ಆರೋಪಿಗಳಿಗೂ ಸಂಬಂಧವಿದೆ ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವ ಸಲುವಾಗಿ ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ.

ಬುಧವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಪಿ ದರ್ಶನ್, ಪವಿತ್ರಾಗೌಡ, ವಿನಯ್, ಪವನ್, ವಿನಯ್, ರಾಘವೇಂದ್ರ ಸೇರಿದಂತೆ 10 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರೋಪಿಗಳ ರಕ್ತದ ಮಾದರಿ, ತಲೆಗೂದಲು ಸಂಗ್ರಹಿಸಲಾಗಿದೆ.

ಕೃತ್ಯ ನಡೆದ ಸ್ಥಳ, ಆರೋಪಿಗಳ ಬಟ್ಟೆಗಳ ಮೇಲಿನ ರಕ್ತದ ಕಲೆ ಇನ್ನಿತರೆ ಸ್ಥಳಗಳಲ್ಲಿ ದೊರೆತ ರಕ್ತ, ಕೂದಲಿಗೆ ಮ್ಯಾಚ್ ಆಗುವುದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುದನ್ನು ರುಜುವಾತುಪಡಿಸಲು ಸಹಕಾರಿಯಾಗಲಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.


Post a Comment

0Comments

Post a Comment (0)