ವೇಶ್ಯಾವಾಟಿಕೆ ಸಂತ್ರಸ್ತೆ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ: ಉಚ್ಚನ್ಯಾಯಾಲಯ

VK NEWS
By -
0

ಬೆಂಗಳೂರು: ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಕ್ಷಣೆ ಮಾಡಿದ ಸಂತ್ರಸ್ತ ಮಹಿಳೆ ವಿರುದ್ಧ ಅನೈತಿಕ ಸಂಚಾರ ತಡೆ ಕಾಯ್ದೆ (Immoral Traffic Prevention Act) ಅಡಿ ಶಿಕ್ಷಾರ್ಹ ಅಪರಾಧಕ್ಕಾಗಿ ವಿಚಾರಣೆಗೆ ಗುರಿಪಡಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ತಮ್ಮ ವಿರುದ್ಧ ಅನೈತಿಕ ಸಂಚಾರ ತಡೆ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂತ್ರಸ್ತ ಮಹಿಳೆ (ಪ್ರಕರಣದ 8ನೇ ಆರೋಪಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.


ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಅನೈತಿಕ ಸಂಚಾರ ತಡೆ ಕಾಯ್ದೆಯ ಉದ್ದೇಶ ವೇಶ್ಯಾವಾಟಿಕೆಯನ್ನು ಅಥವಾ ವೇಶ್ಯೆಯರನ್ನು ನಿರ್ಮೂಲನೆ ಮಾಡುವುದಲ್ಲ. ಕಾನೂನಿನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಸಂತ್ರಸ್ತೆಯರಿಗೆ ದಂಡ ವಿಧಿಸುವ ನಿಯಮಗಳೂ ಇಲ್ಲ. ಬದಲಿಗೆ ವಾಣಿಜ್ಯ ಉದ್ದೇಶಗಳಿಗೆ ಲೈಂಗಿಕ ಶೋಷಣೆ ನಡೆಸುವುವರನ್ನು, ವೇಶ್ಯಾವಾಟಿಕೆಯಲ್ಲಿ ಮಹಿಳೆಯರನ್ನು ತೊಡಗಿಸಿ ಅದರಿಂದ ಹಣ ಗಳಿಸುವವರನ್ನು ಹಾಗೂ ಅಂತಹ ಸಂಪಾದನೆಯ ಮೇಲೆ ಜೀವನ ನಡೆಸುವವರನ್ನು ಶಿಕ್ಷಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ.” ಎಂದು ವಿವರಿಸಿದೆ.

ಅಲ್ಲದೇ, ಅರ್ಜಿದಾರ ಮಹಿಳೆ ಪ್ರಕರಣದ ಸಂತ್ರಸ್ತೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಹಾಗೆಯೇ ಕಾನೂನಿನಲ್ಲಿ ಸಂತ್ರಸ್ತೆಯ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ. ಸಂತ್ರಸ್ತೆಯ ವಿರುದ್ಧ ಪೊಲೀಸರು ಕಾಯ್ದೆಯ ಸೆಕ್ಷನ್ 5 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಸೆಕ್ಷನ್ 5 ರ ನಿಯಮವು “ವೇಶ್ಯಾವಾಟಿಕೆಗಾಗಿ ಮಹಿಳೆಯರನ್ನು ಕೂಡಿಡುವುದು, ಪ್ರೇರೇಪಿಸುವುದು ಅಥವಾ ಕರೆದೊಯ್ಯುವುದನ್ನು” ಶಿಕ್ಷಾರ್ಹ ಅಪರಾಧವಾಗಿಸುತ್ತದೆ. ಎಲ್ಲಿಯೂ ಸಂತ್ರಸ್ತ ಮಹಿಳೆಗೆ ಶಿಕ್ಷಿಸುವ ಕುರಿತು ಹೇಳುವುದಿಲ್ಲ. ಹೀಗಿದ್ದಾಗ ಪ್ರಕರಣವನ್ನು ಸಂತ್ರಸ್ತೆಯ ವಿರುದ್ಧ ಮುಂದುವರೆಯಲು ಬಿಟ್ಟರೆ ಕಾನೂನಿನ ದುರುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರ ಮಹಿಳೆಯ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರು ಮೂಲದ 29 ವರ್ಷದ ಮಹಿಳೆಯೂ ಸೇರಿದಂತೆ ಕೆಲ ಮಹಿಳೆಯರನ್ನು ಪ್ರಕರಣದ ಆರೋಪಿಗಳು ಉಡುಪಿಯಿಂದ ಗೋವಾಕ್ಕೆ ವೇಶ್ಯಾವಾಟಿಕೆ ಮೂಲಕ ಹಣ ಗಳಿಸಲು ತಲಾ 10 ಸಾವಿರ ಮುಂಗಡ ನೀಡಿ ಕರೆದೊಯ್ಯುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಠಾಣೆಯ ಮಹಿಳಾ ಪೊಲೀಸರು ಟೆಂಪೋ ಟ್ರಾವೆಲ್ಲರ್ ತಡೆದು ಅರ್ಜಿದಾರ ಮಹಿಳೆಯೂ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ವಿರುದ್ಧವೂ ಕಾಯ್ದೆಯ ಸೆಕ್ಷನ್ 5 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕುಂದಾಪುರ ಜೆ.ಎಂ.ಎಫ್.ಸಿ ಕೋರ್ಟ್ ಆರೋಪಿತರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ತಮ್ಮ ವಿರುದ್ದ ಕೇಸ್ ರದ್ದುಪಡಿಸುವಂತೆ ಮನವಿ ಮಾಡಿದ್ದರು.

Tags:

Post a Comment

0Comments

Post a Comment (0)