ಚನ್ನಗಿರಿಯಲ್ಲಿ ಬಿಹಾರ ಮಾದರಿ ಘಟನೆ- ವಿಜಯೇಂದ್ರ

VK NEWS
By -
0

ಬೆಂಗಳೂರು: ಚನ್ನಗಿರಿ ಪ್ರಕರಣವನ್ನು ನೋಡಿದಾಗ ಹಿಂದೆ ಲಾಲೂ ಪ್ರಸಾದ್ ಯಾದವ್ ಆಡಳಿತದ ಬಿಹಾರ ರಾಜ್ಯ ಯಾವ ರೀತಿ ಇತ್ತೋ ಅದೇ ಸಂಭವಿಸಿದಂತಿದೆ. ಬಿಹಾರದಲ್ಲಿ ಸಂಪೂರ್ಣವಾಗಿ ಕಾನೂನು- ಸುವ್ಯವಸ್ಥೆ ಕುಸಿದು ಹಿಂದೆ ಜನರು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡುತ್ತಿದ್ದರೋ ಅಂಥ ಘಟನೆ ಚನ್ನಗಿರಿಯಲ್ಲಿ ಮರುಕಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.



ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯದ ಚುನಾಯಿತ ಕಾಂಗ್ರೆಸ್ ಸರಕಾರವು ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಯಾರಿಗೂ ಇವತ್ತು ಪೊಲೀಸ್ ವ್ಯವಸ್ಥೆ ಬಗ್ಗೆ ಭಯ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಲಾಕಪ್ ಡೆತ್ ಬಗ್ಗೆ ಸ್ಪಷ್ಟತೆ ಇನ್ನೂ ಬರಬೇಕಿದೆ. ಆದರೆ, ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂದು ಪೊಲೀಸ್ ಠಾಣೆಗೆ ನುಗ್ಗಿ ಕುರ್ಚಿಗಳನ್ನು ಧ್ವಂಸ ಮಾಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗಿದ್ದರೆ ರಾಜ್ಯದಲ್ಲಿ ಸರಕಾರ ಇದೆಯೇ? ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳನ್ನು ಕೇಳಿದರೆ ಅವರೆಲ್ಲರೂ ಅಮಾಯಕರೇ ಎಂದು ಹೇಳುತ್ತಾರೆ. ಅಮಾಯಕರು, ಅಮಾಯಕರು ಎಂದು ಹೇಳುತ್ತ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿಕೊಂಡು ಬಂದುದರ ಪರಿಣಾಮ ಇವತ್ತು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸರು ರಾಜ್ಯದ ಜನತೆಗೆ ರಕ್ಷಣೆ ಕೊಡಬೇಕು. ಆದರೆ, ಪೊಲೀಸರ ರಕ್ಷಣೆಗೆ ಪೊಲೀಸರು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನುಡಿದರು.


ಇದು ದುರದೃಷ್ಟಕರ. ರಾಜ್ಯ ಸರಕಾರ ಇನ್ಯಾವತ್ತು ಎಚ್ಚತ್ತುಕೊಳ್ಳುತ್ತೋ? ಎಂದ ಅವರು, ನಮ್ಮ ರಾಜ್ಯವನ್ನು ಆ ಭಗವಂತನೇ ಕಾಪಾಡಬೇಕು ಎಂದು ತಿಳಿಸಿದರು.

Post a Comment

0Comments

Post a Comment (0)