ಬಿಎಂಟಿಸಿ ಬಸ್ಸಿಗೆ ಕೇರಳದ ಚಾಲಕರು

VK NEWS
By -
0

ಕನ್ನಡಿಗರ ತೆರಿಗೆಯಲ್ಲಿ ಕೇರಳದವರನ್ನು ಸಾಕಲು ಮುಂದಾಗಿರುವ ಸಿದ್ದರಾಮಯ್ಯ; ಬಿಜೆಪಿ ಆಕ್ರೋಶ

ಬೆಂಗಳೂರು, ಮೇ 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಗೆ ಎಲೆಕ್ಟ್ರಿಕ್ ಬಸ್ಗಳನ್ನು ಪೂರೈಸುವ ಕಂಪನಿ ಕೇರಳದ ಯುವಕರನ್ನು ಹೆಚ್ಚಾಗಿ ನೇಮಕಾತಿ ಮಾಡಿಕೊಳ್ಳುತ್ತಿರುವುದನ್ನು ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಪ್ರಶ್ನೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬಿಎಂಟಿಸಿ ಗುತ್ತಿಗೆ ಆಧಾರದ ಮೇಲೆ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ಒಡಿಸುತ್ತಿದೆ. ನಗರದಲ್ಲಿ ಮೂರು ಕಂಪನಿಗಳಿಂದ ಒಟ್ಟು 640ಕ್ಕೂ ಅಧಿಕ ಬಸ್ಗಳಿವೆ. ಇವುಗಳಿಗೆ ಚಾಲಕರನ್ನು ಬಿಎಂಟಿಸಿ ನೇಮಕಾತಿ ಮಾಡುವುದಿಲ್ಲ.

ಬಸ್ ಪೂರೈಕೆ ಮಾಡುವ ಕಂಪನಿಯೇ ಚಾಲಕರನ್ನು ನೀಡಬೇಕು. ಆದರೆ ನಿರ್ವಾಹಕರನ್ನು ಬಿಎಂಟಿಸಿಯಿಂದ ನೀಡಲಾಗುತ್ತದೆ. ಕೇರಳದ ಅನುಭವ ಇಲ್ಲದ ಯುವಕರನ್ನು ಚಾಲಕರಾಗಿ ನೇಮಕ ಮಾಡುತ್ತಿದ್ದು, ಕನ್ನಡ ಬಾರದ ಚಾಲಕರ ಜೊತೆ ಕೆಲಸ ಮಾಡುವುದು ನಿರ್ವಾಹಕರಿಗೆ ಸಹ ಕಿರಿಕಿರಿ ಉಂಟು ಮಾಡಿದೆ.

ಕೆಲವು ದಿನಗಳ ಹಿಂದೆ ವಿವಿಧ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳನ್ನು ಒಡಿಸುವ ಚಾಲಕರು ನಗರದಲ್ಲಿ ಬಸ್ ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ನಗರದಲ್ಲಿ ಎಲೆಕ್ಟ್ರಿಕ್ ಬಸ್ಗಳ ಸಂಚಾರದಲ್ಲಿ ಕೆಲವು ಗಂಟೆಗಳ ಕಾಲ ವ್ಯತ್ಯಯ ಉಂಟಾಗಿತ್ತು.

ಎಲೆಕ್ಟ್ರಿಕ್ ಬಸ್ ಓಡಿಸುವ ಚಾಲಕರಿಗೆ 20,000 ರೂ. ವೇತನವಿದ್ದು, 18,000 ರೂ. ಕೈಗೆ ಸಿಗುತ್ತದೆ. ವೇತನ ಕಡಿಮೆ ಇದ್ದು, ಹೆಚ್ಚಳ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಚಾಲಕರು ಪ್ರತಿಭಟನೆ ನಡೆಸಿದ್ದರು.

ಪ್ರತಿಪಕ್ಷ ನಾಯಕ ಆರ್. ಅಶೋಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಕರ್ನಾಟಕದ ಯುವಕರಿಗೆ ಯುವನಿಧಿ ಮೋಸ ಮಲಯಾಳಿ ಯುವಕರಿಗೆ ಸರ್ಕಾರಿ ಕೆಲಸ. ಬಿಎಂಟಿಸಿ ಎಲಕ್ಟ್ರಿಕ್ ಬಸ್ ಚಾಲಕರ ಹುದ್ದೆಗೆ ಖಾಸಗಿ ಏಜೆನ್ಸಿ ಮೂಲಕ 22,500 ರೂಪಾಯಿ ವೇತನ ಕೊಟ್ಟು ಕೇರಳದ ಮಲಯಾಳಿ ಯುವಕರನ್ನು ನೇಮಕ ಮಾಡಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಕರ್ನಾಟಕದ ನಿರುದ್ಯೋಗಿ ಯುವಕರಿಗೆ ಮಾತ್ರ ಯುವನಿಧಿ ಗ್ಯಾರೆಂಟಿ ಹೆಸರಿನಲ್ಲಿ ಪಂಗನಾಮ ಹಾಕಿದೆ' ಎಂದು ಆರೋಪಿಸಿದ್ದಾರೆ.

'ಸಿಎಂ ಸಿದ್ದರಾಮಯ್ಯನವರೇ, ಬಿಎಂಟಿಸಿ ಬಸ್ಸು ಚಾಲಕರ ಹುದ್ದೆಗೆ ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳಲು ಕರ್ನಾಟಕದಲ್ಲಿ ಉದ್ಯೋಗಾಕಾಂಕ್ಷಿಗಳೇ ಇಲ್ಲವೇ?. ಕನ್ನಡಿಗರ ತೆರಿಗೆ ಹಣದಲ್ಲಿ ನಡೆಯುವ ಬಿಎಂಟಿಸಿ ಸಂಸ್ಥೆಯ ದುಡ್ಡನ್ನು ಕರ್ನಾಟಕದ ಯುವಕರಿಗೆ ಉದ್ಯೋಗ ನೀಡಲು ಬಳಸದೆ ಕೇರಳದ ಪಾಲಾಗಲು ಬಿಡುವುದು ಯಾವ ಸೀಮೆ ನ್ಯಾಯ?. ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ?, ಕರ್ನಾಟಕದ ಯುವಕರ ಮೇಲೆ ಯಾಕಿಷ್ಟು ತಾತ್ಸಾರ?' ಎಂದು ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 'ಕನ್ನಡಿಗರಿಗೆ ಪಂಗನಾಮ ಹಾಕಿ ಕೇರಳದ ಯುವಕರಿಗೆ ಅವಕಾಶ ಕೊಡುವಂಥ ಮಹಾನುಭಾವರು ಕರ್ನಾಟಕ ಕಾಂಗ್ರೆಸ್ದವರು. ಬಿಎಂಟಿಸಿ ಎಲಕ್ಟ್ರಿಕ್ ಬಸ್ ಚಾಲಕರ ಹುದ್ದೆಗೆ ಕನ್ನಡಿಗರ್ಯಾರೂ ಸಿದ್ಧರಿರಲಿಲ್ಲವೇ?. ಖಾಸಗಿ ಏಜೆನ್ಸಿ ಮೂಲಕ ನೇಮಕವಾದದ್ದು ಅನ್ನೋದು ಬರಿಯ ಸಬೂಬು. ಕಾಂಗ್ರೆಸ್ ಯುವನಿಧಿ ಗ್ಯಾರಂಟಿಯ ಹಕೀಕತ್ತು ಇದೇ!!. ಕನ್ನಡಿಗರ ತೆರಿಗೆಯಲ್ಲಿ ಕೇರಳದವರನ್ನು ಸಾಕಲು ಮುಂದಾಗಿರುವ ಸಿದ್ದರಾಮಯ್ಯನವರ ನಿಷ್ಠೆ ಕರ್ನಾಟಕ ಅಥವಾ ಕನ್ನಡಿಗರ ಪರವಾಗಿಲ್ಲ ಅನ್ನೋದು ಸ್ಪಷ್ಟವಾಗಿದೆ. ಕರ್ನಾಟಕದ ನೆಲ, ಜಲ, ಗಾಳಿ ಬೇಕು. ಮತ ಹಾಕಲು ಕನ್ನಡದವರೇ ಬೇಕು ಆದ್ರೆ ನಿಯತ್ತು ಮಾತ್ರ ಬೇರೆಲ್ಲೋ ಯಾಕೆ ಸಿದ್ದಣ್ಣನವರೇ?' ಎಂದು ಕೇಳಿದ್ದಾರೆ.

 

Post a Comment

0Comments

Post a Comment (0)