*ಬೆಂಗಳೂರು, ಮೇ 5, ಭಾನುವಾರ*
ಪ್ರಜ್ವಲ್ ರೇವಣ್ಣ ಇನ್ನೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂಸದರಾಗಿಯೇ ಇದ್ದಾರೆ. ಅವರು ಈ ಚುನಾವಣೆಯಲ್ಲಿ ಗೆದ್ದು ಎನ್‌ಡಿಎ ಅಭ್ಯರ್ಥಿಯಾದರೆ ಅವರ ವಿರುದ್ಧ ಪಕ್ಷದ ವತಿಯಿಂದ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಸ್ಪಷ್ಪಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ನಡೆಸಿದ ಮಹಿಳಾ ದೌರ್ಜನ್ಯದ ಘಟನೆಗಳು ಯಾವ ಸಮಯದಲ್ಲಿ ನಡೆದಿದೆ ಎಂದು ಇನ್ನೂ ತನಿಖಾ ತಂಡ ವರದಿ ನೀಡಬೇಕಿದೆ. ನಮ್ಮ ಹೊಂದಾಣಿಕೆಯಲ್ಲಿ ಇನ್ನೂ ಪ್ರಜ್ವಲ್ ರೇವಣ್ಣ ಗೆದ್ದಿಲ್ಲ. ಈಗ ಪ್ರಜ್ವಲ್ ಸಂಸದರಾಗಿರುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲೇ. ಜೆಡಿಎಸ್ ಪಕ್ಷ ಈಗಾಗಲೇ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಂಡಿದೆ. ಅವರು ಎನ್‌ಡಿಎ ಸಂಸದರಾದರೆ ನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
2019 ರ ಏಪ್ರಿಲ್ 17 ರಂದು ಕಡೂರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಜ್ವಲ್ ರೇವಣ್ಣ ಅವರನ್ನು *ಪಕ್ಕದಲ್ಲಿ ಕೂರಿಸಿಕೊಂಡು,* ಇವರನ್ನು ಗೆಲ್ಲಿಸಿಕೊಡಿ ಎಂದು ಜನರಲ್ಲಿ ಮನವಿ ಮಾಡಿದ್ದರು. ತೆನೆ ಹೊತ್ತ ಮಹಿಳೆಗೆ ಶಕ್ತಿ ನೀಡಿ ಎಂದು ಅವರೇ ಹೇಳಿದ್ದರು. ಪ್ರಜ್ವಲ್ ರೇವಣ್ಣನನ್ನು ಈಗ ರೇಪಿಸ್ಟ್ ಎಂದು ಕರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗ ಟ್ವೀಟ್ ಮಾಡಿ, *“ಹೀ ಈಸ್ ಎ ಯಂಗ್ ಲೀಡರ್ ವಿತ್ ಗ್ರೇಟ್ ವಿಶನ್, ಐ ರಿಕ್ವೆಸ್ಟ್ ಎವರಿವನ್ ಟು ಕಾಸ್ಟ್ ದೇರ್ ವೋಟ್ಸ್ ಇನ್ ಹೀಸ್ ಫೇವರ್”* ಎಂದು ಮನವಿ ಮಾಡಿದ್ದರು. ಮೈತ್ರಿ ಬಲಪಡಿಸಿ ಎಂದು ಕೋರಿದ್ದರು. ಪ್ರಜ್ವಲ್ ರೇವಣ್ಣ ಈಗಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಲೇ ಸಂಸದರಾಗಿ ಇದ್ದಾರೆ ಎಂದರು.
ಸಚಿವ ಎಂ.ಬಿ.ಪಾಟೀಲ್ ಅವರು ಪಾತಾಳಕ್ಕೆ ಹೋಗುವುದು ಬೇಡ, ಭೂಮಿಯಲ್ಲಿದ್ದಾಗಲೇ ಪ್ರಜ್ವಲ್‌ನನ್ನು ಬಂಧಿಸಬಹುದಿತ್ತು. ಆದರೆ ಆ ಕೆಲಸವನ್ನು ಸರ್ಕಾರ ಮಾಡಿಲ್ಲ. ಯಾವುದೇ ಕೇಂದ್ರ ಸರ್ಕಾರ ಸಂಸದರಿಗೆ ಸಹಜವಾಗಿಯೇ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡುತ್ತದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ನೀಡಿಲ್ಲ. ಕರ್ನಾಟಕದ ಗುಪ್ತಚರ ಇಲಾಖೆ ಸರಿಯಾಗಿ ಇದ್ದಿದ್ದರೆ, ಪ್ರಜ್ವಲ್ ತಪ್ಪಿಸಿಕೊಂಡು ಹೋಗುತ್ತಾರೆ, ದೇಶ ಬಿಡಲು ಅವಕಾಶ ನೀಡಬಾರದು ಎಂದು ವಿಮಾನ ನಿಲ್ದಾಣಕ್ಕೆ ಪ್ರಾಧಿಕಾರಕ್ಕೆ ತಿಳಿಸಬಹುದಿತ್ತು. ಶಾಸಕ ರೇವಣ್ಣ ಅವರ ಬಂಧನ ಸರಿಯಾಗಿಯೇ ಇದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಿಜೆಪಿಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ ಎಂದರು.