ಹೊಸ ಅಕ್ಷರ ವಿನ್ಯಾಸಕ್ಕಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಫ್ರಾನ್ಸ್‌ ವಿದ್ಯಾರ್ಥಿಗಳು

VK NEWS
By -
0

ಇಂಗ್ಲೀಷ್‌ನಲ್ಲಿ 26 ಅಕ್ಷರಗಳಿರುವುದು ಗೊತ್ತಿರುವ ಸಂಗತಿ. ಆದರೆ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ ಬೆಂಗಳೂರಿನ ವಿದ್ಯಾರ್ಥಿಗಳು 27ನೇ ಅಕ್ಷರ ವಿನ್ಯಾಸಗೊಳಿಸುವ ಸವಾಲು ಕೈಗೆತ್ತಿಕೊಂಡಿದ್ದು, ಆ ಮೂಲಕ ಇಂಗ್ಲೀಷ್‌ ಮತ್ತು ಫ್ರೆಂಚ್‌ ಭಾಷೆಯ ನಡುವಿನ ಅಂತರವನ್ನು ಕಡಿಮೆ ಮಾಡುವ  ಪ್ರಯತ್ನಕ್ಕೆ ಮುಂದಾಗಿದ್ದಾರೆ.





ಇಂದು ನಗರದ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ ನಲ್ಲಿ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ಬೆಂಗಳೂರು ಮತ್ತು ಫ್ರಾನ್ಸ್‌ನ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌, ಸ್ಟ್ರಾಸ್‌ಬರ್ಗ್‌ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಾಗಾರದ ಮುಖ್ಯ ಉದ್ದೇಶ ಹೊಸ ಅಕ್ಷರವನ್ನು ವಿನ್ಯಾಸಗೊಳಿಸುವುದಾಗಿತ್ತು.  ಮೊದಲ ಭಾಗವಾಗಿ ಮರದ ಹಲಗೆಯ ಮೇಲೆ ಅಕ್ಷರವನ್ನು ಕೆತ್ತನೆ ಮಾಡಿಕೊಂಡು, ತದನಂತರದಲ್ಲಿ ಅತ್ಯುತ್ತಮವಾಗಿ ಮೂಡಿಬಂದ ಅಕ್ಷರದ ವಿನ್ಯಾಸವನ್ನು
ಡಿಸೈನ್ ಸಾಫ್ಟ್‌ವೇರ್‌ಗಳಾದ‌ ಇನ್‌ಡಿಸೈನ್‌ ಇಲ್ಲಸ್ಟ್ರೇಟರ್‌ ಮೂಲಕ ಪ್ರಸ್ತುತ ಪಡಿಸಲಾಯಿತು.

ಈ ಕುರಿತಾಗಿ ಮಾತನಾಡಿದ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ಬೆಂಗಳೂರಿನ ಸಂಸ್ಥಾಪಕರು ಮತ್ತು ನಿರ್ದೇಶಕಿ ಅವಿ ಕೆಸ್ವಾನಿ, "ಭಾಷೆಯೊಂದು ಸಂವಹನ ಕ್ರಿಯೆಗೆ ನೆರವಾಗುವ ಮಾಧ್ಯಮ. ಇದಕ್ಕೆ ಉದಾಹರಣೆಯಾಗಿ ನಾವು ಸಾಮಾನ್ಯವಾಗಿ ಬಳಸುವ ʼಹಲೋʼ ಎಂಬ ಇಂಗ್ಲೀಷ್‌ ಶಬ್ದಕ್ಕೆ ವೈಜ್ಞಾನಿಕ
ಮಹತ್ವವಿಲ್ಲದಿದ್ದರೂ ಸಾಂಸ್ಕೃತಿಕ ಸಂಕೇತವಾಗಿ ಬಳಸಲ್ಪಡುತ್ತದೆ. ಅದರಂತೆ ಎಲ್ಲಾ ಅಕ್ಷರಗಳಿಗೂ ಅದರದ್ದೇ ಆದ ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ನಾವು ವಿನ್ಯಾಸಕಾರರು ಈ ಮೂಲಕ ಹೊಸ ಯೋಚನೆಗಳನ್ನು ಹೊರತರಲು ವೇದಿಕೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇವೆ. ಈ ಪ್ರಯತ್ನವು
ಮನೋಸಾಮರ್ಥ್ಯದ ಪರೀಕ್ಷೆಯಾಗಿದೆ. ಇಂಗ್ಲೀಷ್‌ ಕೇವಲ 26 ಅಕ್ಷರಗಳಿಗೇಕಷ್ಟೆ ಸೀಮಿತವಾಗಿರಬೇಕು ? ನಮ್ಮ ಉದ್ದೇಶ ಈ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಹೊಸ
ಸವಾಲೊಂದನ್ನು ನೀಡುವುದಾಗಿದೆ. ಮೂಲತಃ ಫ್ರೆಂಚ್‌ ಸ್ಕೂಲ್‌ ಆಫ್‌ ಡಿಸೈನ್‌ ಆಗಿರುವುದರಿಂದ
ಇಂಗ್ಲೀಷ್‌ ಮಾತನಾಡುವವರು ಕೆಲ ಫ್ರೆಂಚ್‌ ಉಚ್ಚಾರಣೆ ಮಾಡಲು ಕಷ್ಟಪಡುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ 27ನೇ ಅಕ್ಷರವನ್ನು ವಿನ್ಯಾಸಗೊಳಿಸುವ ಮೂಲಕ ಫ್ರೆಂಚ್‌ ಮತ್ತು ಇಂಗ್ಲೀಷ್‌ ಭಾಷೆಗೆ ಸೇತುವೆ ಕಲ್ಪಿಸುವುದಾಗಿದೆ" ಎಂದು ಹೇಳಿದರು.

ಇದೇ ವೇಳೆ ಕಾರ್ಯಾಗಾರಕ್ಕೆ ಆಗಮಿಸಿದ್ದ ಫ್ರೆಂಚ್‌ ಭಾಷಾ ತಜ್ಞೆ ಮಾಧುರಿ ವೆಲ್ಲಿಂಗ್‌ ಅವರು ಫೊನೆಟಿಕ್ಸ್‌ನ ಒಳನೋಟಗಳ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾಗಿ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರಗಳ ಸೂಕ್ಷ್ಮತೆ ಕುರಿತಂತೆ ಸಂಶೋಧನಾತ್ಮಕ ವಿವರಗಳನ್ನು ನೀಡಲಾಯಿತು. ಈ ಮೂಲಕ ಹೊಸ ಅಕ್ಷರದ ವಿನ್ಯಾಸಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಾಯಿತು.

ಲಿಸಾ ಸ್ಕೂಲ್ ಆಫ್ ಡಿಸೈನ್‌ನ ನಿರ್ದೇಶಕ ಗಿರೀಶ್ ಮಾತನಾಡಿ, "ಹೊಸ ಅಕ್ಷರದ ರಚನೆಗೆ ಆಧಾರವಾಗಿರುವ ಭಾಷಾ ಸೂಕ್ಷ್ಮತೆಗಳು ಮತ್ತು ಫೋನೆಟಿಕ್ ತತ್ವಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಆಳವಾದ ಸಂಶೋಧನೆಯನ್ನು ಕೈಗೊಳ್ಳುವ ಮೂಲಕ ಕಾರ್ಯಾಗಾರವು ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಾಯಿತು," ಎಂದರು

ಆದಾಗ್ಯೂ ಈ ಕಾರ್ಯಕ್ರಮವು ಡಿಜಿಟಲ್ ರಚನೆಗಷ್ಟೇ ಸೀಮಿತವಾಗುವುದಿಲ್ಲ. ಅಕ್ಷರವು ಒಂದು ಸ್ಪಷ್ಟವಾದ ಕಲಾಕೃತಿಯಾಗಿ ರೂಪಿಸಲು ಮರದ ಕೆತ್ತನೆ ಮತ್ತು ಮುದ್ರಣ ತಯಾರಿಕೆಯಂತಹ ಸಾಂಪ್ರದಾಯಿಕ ಕಲಾತ್ಮಕ ತಂತ್ರಗಳನ್ನು ವಿದ್ಯಾರ್ಥಿಗಳು ಅನುಸರಿಸಿದರು. ಈ ಹ್ಯಾಂಡ್-ಆನ್ ವಿಧಾನವು ಯೋಜನೆಗೆ ಒಂದು ಅನನ್ಯ ಆಯಾಮವನ್ನು ನೀಡುತ್ತದೆ. ಅಲ್ಲದೆ ಸಾಂಪ್ರದಾಯಿಕ ಕರಕುಶಲತೆಯೊಂದಿಗೆ ಆಧುನಿಕ ಡಿಜಿಟಲ್ ವಿನ್ಯಾಸವನ್ನು ಇದು ಸಂಯೋಜಿಸುತ್ತದೆ.

ಫ್ರಾನ್ಸ್‌ನ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ಸ್ಟ್ರಾಸ್‌ಬರ್ಗ್‌ನ ನಿರ್ದೇಶಕರಾದ ಬೆಂಜಮಿನ್‌ ಮಾತನಾಡಿ, " ಈ ಕಾರ್ಯಾಗಾರವು ಅಕ್ಷರ ವಿನ್ಯಾಸ ರೂಪಿಸುವುದರ ಆಚೆಗೂ ವಿದ್ಯಾರ್ಥಿಗಳಿಗೆ ಯೋಚಿಸುವ ಸಾಮರ್ಥ್ಯ ಬೆಳೆಸುತ್ತದೆ. ಇದು ಐತಿಹಾಸಿಕ ಹಿನ್ನೆಲೆಯುಳ್ಳ ಇಂಗ್ಲಿಷ್‌ ಭಾಷೆಗೆ ಗೌರವ ಸಲ್ಲಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆ ಹಾಗೂ ನಾವೀನ್ಯತೆಯನ್ನ ಪರೀಕ್ಷಿಸುವ ವಿಧಾನವೂ ಆಗಿದೆ. ಇಂಗ್ಲಿಷ್‌ನ 27ನೇ ಅಕ್ಷರ ವಿನ್ಯಾಸಗೊಳಿಸುವುದು ಎರಡು ಭಾಷೆಗಳನ್ನ  ಸೇತುವೆಯ ಮೂಲಕ ಬೆಸೆಯುವ ಪ್ರಯತ್ನವಾಗಿದೆ,ʼʼ ಎಂದರು

ಫ್ರಾನ್ಸ್‌ನ ವಿದ್ಯಾರ್ಥಿಗಳಿಗೆ ಕಾರ್ಯಾಗಾರದ ಜೊತೆಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದು, ಈ  ಮೂಲಕ ನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಕರಕುಶಲ ಕೇಂದ್ರ ಮತ್ತು ಮೈಸೂರಿನ ಅರಮನೆಯ ಪರಿಚಯ ಮಾಡಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651

Post a Comment

0Comments

Post a Comment (0)