ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಗುರುವಾರ ಈ ಚುನಾವಣೆಯ ತಮ್ಮ ಕೊನೆಯ ಪ್ರಚಾರ ಸಭೆ ನಡೆಸಿದರು.
ಮೋದಿ ಅವರು ರೋಡ್ ಶೋ, ರ್‍ಯಾಲಿ, ಬಹಿರಂಗ ಪ್ರಚಾರ ಸೇರಿದಂತೆ ಒಟ್ಟು 206 ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಅವರು 68 ದಿನಗಳವರೆಗೆ 145 ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಅದನ್ನು ಮೀರಿಸಿ ಪ್ರಚಾರ ಸಭೆಗಳನ್ನು ನಡೆಸಿದ್ದು, ಒಟ್ಟು 76 ದಿನಗಳಲ್ಲಿ 206 ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ.
73ರ ವಯಸ್ಸಿನ ಮೋದಿ ಅವರು ಚುನಾವಣಾ ಪ್ರಚಾರದ ಸಭೆಗಳೇ ಅಲ್ಲದೇ 80 ಮಾಧ್ಯಮಗಳಿಗೆ ಸಂದರ್ಶನವನ್ನೂ ನೀಡಿದ್ದಾರೆ. ಅಂದರೆ ಮತದಾನ ಪ್ರಾರಂಭವಾದಾಗಿನಿಂದ ಅವರು ಪ್ರತಿದಿನ ಸರಾಸರಿ ಒಂದಕ್ಕಿಂತ ಹೆಚ್ಚು ಸಂದರ್ಶನ ನೀಡಿದ್ದಾರೆ.
ಪ್ರಸಕ್ತ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರೋಡ್‌ಶೋ ಮತ್ತು ರ‍್ಯಾಲಿಗಳನ್ನು ಒಳಗೊಂಡು ಕ್ರಮವಾಗಿ 107 ಹಾಗೂ 108 ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಡೆಸಿದ ರೋಡ್ ಶೋ, ಸಂವಾದ ಹಾಗೂ ಪ್ರಮುಖ ಪ್ರಚಾರ ಕಾರ್ಯಗಳಲ್ಲಿ 107ರಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 108ರಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ 100ಕ್ಕೂ ಹೆಚ್ಚು ಮಾಧ್ಯಮ ಹೇಳಿಕೆ, ಟಿ.ವಿ. ಸಂದರ್ಶನ ಹಾಗೂ ಐದು ಮುದ್ರಣ ಮಾಧ್ಯಮ ಸಂದರ್ಶನಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಬಾರಿ ಪ್ರಚಾರಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹರಿತವಾದ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು 16 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಸಾವಿರಾರು ಜನ ಸೇರಿದ್ದ ಎರಡು ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.