ಶುಕ್ರವಾರ ಅಕ್ಷಯ ತೃತೀಯ ದಿನವಾಗಿದ್ದು, ಈ ದಿನ ಶುಭ ದಿನವಾಗಿ ಚಿನ್ನಾಭರಣ ಖರೀದಿಸಲಾಗುತ್ತದೆ. ಅಕ್ಷಯ ತೃತೀಯದ ಈ ಶುಭ ಸಂದರ್ಭದಲ್ಲಿ ಗಜಕೇಸರಿ ಯೋಗ, ರವಿಯೋಗ, ಧನಯೋಗ, ಮಾಳವ್ಯ ರಾಜಯೋಗ ಸೇರಿದಂತೆ ಹಲವು ಶುಭ ಯೋಗಗಳು ಬರಲಿವೆ. ಹೀಗಾಗಿ ಜನರು ಚಿನ್ನಾಭರಣ ಮಳಿಗೆಗಳತ್ತ ಮುಗಿಬಿದ್ದಿದ್ದು ಚಿನ್ನಾಭರಣ ಖರೀದಿಗೆ ಮುಂದಾಗಿದೆ.
ಹಿಂದೂ ಪುರಾಣದ ಪ್ರಕಾರ, ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದ ದಿನವೇ ಅಕ್ಷಯ ತೃತೀಯ. ಅಂದಹಾಗೆ, ಅನ್ನಪೂರ್ಣ ದೇವಿಯು ಅಕ್ಷಯ ತೃತೀಯದಂದು ಜನಿಸಿದಳು ಎಂದು ನಂಬಲಾಗಿದೆ. 'ಅಕ್ಷಯ' ಇದರರ್ಥ 'ಎಂದಿಗೂ ಕಡಿಮೆಯಾಗುವುದಿಲ್ಲ'. ಈ ಹಬ್ಬದಂದು ಚಿನ್ನವನ್ನು ಖರೀದಿಸುವುದರಿಂದ ನಮ್ಮ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಅಕ್ಷಯ ತೃತೀಯವನ್ನು ಮಂಗಳಕರವೆಂದು ಪರಿಗಣಿಸುವ ಈ ದಿನದಂದು ಅನೇಕ ಜನರು ಹೊಸ ಉದ್ಯಮಗಳನ್ನು ಪ್ರಾರಂಭಿಸುತ್ತಾರೆ. ಈ ದಿನದಂದು ಅಮೂಲ್ಯವಾದ ಲೋಹಗಳನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಹಲವರು ನಂಬುತ್ತಾರೆ.
ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ಅತ್ಯಂತ ಅನುಕೂಲಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ನಮ್ಮ ಜೀವನದಲ್ಲಿ ಶಾಶ್ವತ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ನೆಪದಲ್ಲಿ ಜನರು ಈ ದಿನ ಚಿನ್ನಾಭರಣ ಖರೀದಿಸಲು ಇಷ್ಟಪಡುತ್ತಾರೆ. ಆಭರಣ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಲು ವಿಶೇಷ ಅಲಂಕಾರಗಳಿಂದ ತುಂಬಿದ್ದವು, ಮಲ್ಲೇಶ್ವರಂನ ಆರ್ ಆರ್ ಗೋಲ್ಡ್ ಪ್ಯಾಲೇಸ್‌ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಚಿನ್ನಾಭರಣಗಳನ್ನು ಖರೀದಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಈ ಅಂಗಡಿಯ ಸಿಇಒ ಆರ್.ರಮೇಶ್ ಮಾತನಾಡಿ, ಜನರು ತಮ್ಮ ನೆಚ್ಚಿನ ಮತ್ತು ವಿಶ್ವಸನೀಯ ಅಂಗಡಿಗಳಲ್ಲಿ ಈ ಮಂಗಳಕರ ದಿನದಂದು ಚಿನ್ನವನ್ನು ಖರೀದಿಸುತ್ತಾರೆ, ಅಲ್ಲಿ ಅವರು ಇತ್ತೀಚಿನ ವಿನ್ಯಾಸದ ವಿವಿಧ ಗುಣಮಟ್ಟದ ಚಿನ್ನದ ವಸ್ತುಗಳನ್ನು ಕೊಳ್ಳುತ್ತಾರೆ. ನಂಬಿಕೆಯಂತೆ ಜನರನ್ನು ಉತ್ತೇಜಿಸಲು, ನಗರದ ಆಭರಣ ಮಳಿಗೆಗಳು ಸಹ ಗ್ರಾಹಕರನ್ನು ಆಕರ್ಷಿಸಲು ವಿಶೇಷ ರಿಯಾಯಿತಿ ಮತ್ತು ಉಡುಗೊರೆಗಳನ್ನು ನೀಡಿವೆ.
ಅಕ್ಷಯ ತೃತೀಯ ದಿನದಂದು ಗ್ರಾಹಕರು ಉತ್ಸಾಹದಿಂದ ಚಿನ್ನ ಖರೀದಿಸಿದರು. ಚಿನ್ನದ ಬೆಲೆ ಹೆಚ್ಚಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ. ಇದೇ ಸಮಯದಲ್ಲಿ, ಅನೇಕ ಆಭರಣ ಅಂಗಡಿಗಳಲ್ಲಿ ಅಯೋಧ್ಯೆಯ ಬಾಲ ರಾಮನ ಚಿತ್ರವಿರುವ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ನಾಣ್ಯಗಳು ಬೇಡಿಕೆಯಲ್ಲಿವೆ. ಅಕ್ಷಯ ತೃತೀಯ ನಿಮಿತ್ತ ಬುಧವಾರದಿಂದಲೇ ಬಹಳಷ್ಟು ಗ್ರಾಹಕರು ಆಭರಣಗಳನ್ನು ಮುಂಗಡವಾಗಿ ಖರೀದಿಸಿದ್ದರು. ಒಟ್ಟಿನಲ್ಲಿ ಅಕ್ಷಯ ತೃತೀಯ ಹಿಂದೂಗಳ ಪ್ರಕಾರ ಶುಭದಿನ.