ಬೆಂಗಳೂರು, ಮೇ 03 (ಕರ್ನಾಟಕ ವಾರ್ತೆ): ಆಯುಷ್ ಇಲಾಖೆಯಿಂದ ಆರೋಗ್ಯಕರ ಆಯುಷ್ ಚಿಂಚಾ ಪಾನಕ (ಹುಣಸೆ ಹಣ್ಣಿನ ಪಾನಕ) ವನ್ನು ಪರಿಚಯಿಸಿದೆ.
ಆಯುಷ್ ಚಿಂಚಾ ಪಾನಕ ತಯಾರಿಸುವ ವಿಧಾನ ಹುಣಸೆ ಹಣ್ಣು 100 ಗ್ರಾಂ, ಬೆಲ್ಲದ ಪುಡಿ 400 ಮಿಲಿ, ಜೀರಿಗೆ ಪುಡಿ 10 ಗ್ರಾಂ, ಕಾಳು ಮೆಣಸು ಪುಡಿ 5 ಗ್ರಾಂ, ಸೈಂದವ ಲವಣ 5 ಗ್ರಾಂ ಒಳಗೊಂಡಿರಬೇಕು.
ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ಇಡೀ ರಾತ್ರಿ ನೆನಸಿಡಬೇಕು. ಮರುದಿನ ಬೆಳಿಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸುಕಿ ಸೋಸಿಕೊಳ್ಳಬೇಕು. (ಗಾಢವಾದ ಹುಣಸೆ ಮಿಶ್ರಣ ಬಾಟಲಿಗಳಲ್ಲಿ ತುಂಬಿಸಿಕೊಂಡು ಪಾನಕ ತಯಾರಿಸುವಾಗ ಬೇಕಾದಷ್ಟು ಬಳಸಿ), ಅಗತ್ಯ ಪ್ರಮಾಣದಷ್ಟು ನೀರನ್ನು ಪಾತ್ರೆಗೆ ಹಾಕಿಕೊಳ್ಳಬೇಕು. ಅಗತ್ಯ ಪ್ರಮಾಣದಷ್ಟು ಹುಣಸೆ ಹಣ್ಣಿನ ಮಿಶ್ರಣವನ್ನು ನೀರಿನ ಪಾತ್ರೆಗೆ ಹಾಕಬೇಕು. ನಿರ್ದಿಷ್ಟ ಪ್ರಮಾಣದ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಬೇಕು. ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಸೈಂದವ ಲವಣವನ್ನು ಸೇರಿಸಬೇಕು. 50 ರಿಂದ 100 ಮಿಲಿ ಮಾತ್ರ ಸೇವನೆ ಮಾಡಬೇಕು. ಅಗತ್ಯವಿದ್ದಲ್ಲಿ ನೀರು ಸೇರಿಸಿಕೊಳ್ಳಬೇಕು.
ಆಯುಷ್ ಚಿಂಚಾ ಪಾನಕದ ಉಪಯೋಗ:
ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಮಲಬದ್ಧತೆ ನಿವಾರಿಸುವುದು. ಶರೀರದ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಆಯುಷ್ ಆಸ್ಪತ್ರೆ / ಚಿಕಿತ್ಸಾಲಯಕ್ಕೆ ಭೇಟಿ ನೀಡಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.