ಸಾವರ್ಕರ್‌ ಸಮಗ್ರ, ಸಂಪುಟ-1 ಲೋಕಾರ್ಪಣೆ ಕಾರ್ಯಕ್ರಮ

VK NEWS
By -
0

 ಸ್ವಾತಂತ್ರ್ಯವೀರ ಸಾವರ್ಕರ್‌ ಎಂಬ ಹೆಸರಿನಿಂದ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್‌, ಭಾರತದೇಶ ಕಂಡ ಮಹಾನ್‌ ಪ್ರತಿಭಾವಂತರಲ್ಲಿ, ಪ್ರಭಾವಶೀಲ ಸಾರ್ವಜನಿಕ ವ್ಯಕ್ತಿಗಳಲ್ಲಿ ಒಬ್ಬರು. ಅವರು ಆಧುನಿಕ ಭಾರತೀಯ ಹಿಂದೂ ಸಾಹಿತ್ಯದ ವಟವೃಕ್ಷ. ಕಳೆದ ಶತಮಾನದುದ್ದಕ್ಕೂ ಸಾವರ್ಕರ್‌ ಬರೆದ ಕವಿತೆ, ಲಾವಣಿ, ಕಾದಂಬರಿ, ನಾಟಕ, ಪ್ರಬಂಧ, ವ್ಯಂಗ್ಯ ಲೇಖನ, ವಿಚಾರ ಸಾಹಿತ್ಯಗಳು ಭಾರತೀಯರ ಬಾಳಿನ ರುಚಿಯನ್ನು ಹೆಚ್ಚಿಸಿವೆ. ಕನ್ನಡದಲ್ಲಿ ಸಾವರ್ಕರ್‌ ಕುರಿತ ಅನೇಕ ಕೃತಿಗಳು ಪ್ರಕಟವಾಗಿವೆಯಾದರೂ ಸಾವರ್ಕರ್‌ ಸಮಗ್ರ ವಾಙ್ಮಯ ಪ್ರಕಟವಾಗುತ್ತಿರುವುದು ಇದೇ ಮೊದಲು.

ಬೆಂಗಳೂರಿನ “ಸಾವರ್ಕರ್‌ ಸಾಹಿತ್ಯ ಸಂಘ” ಈ ಕಾರ್ಯವನ್ನು ಕೈಗೊಂಡಿದ್ದು, ಒಟ್ಟು 10 ಸಂಪುಟಗಳಲ್ಲಿ ಸಾವರ್ಕರ್‌ ಸಮಗ್ರ ಹೊರಬರುವ ಯೋಜನೆಯಿದೆ. ಸಾವರ್ಕರ್‌ ಸಮಗ್ರ ವಾಙ್ಮಯವನ್ನು ಕನ್ನಡಕ್ಕೆ ತರುವ ಕಾರ್ಯದ ಪ್ರಧಾನ ಸಂಪಾದಕರಾಗಿ ಖ್ಯಾತ ಲೇಖಕರಾದ ಡಾ. ಜಿ. ಬಿ. ಹರೀಶರಿದ್ದಾರೆ. ಸಂಪಾದಕೀಯ ಮಂಡಳಿಯಲ್ಲಿ ಡಾ. ಎಸ್‌.ಆರ್‌. ಲೀಲಾ, ರೋಹಿತ್‌ ಚಕ್ರತೀರ್ಥ, ಹರ್ಷ ಸಮೃದ್ಧ, ರಮೇಶ ದೊಡ್ಡಪುರ ಇದ್ದಾರೆ.




10 ಸಂಪುಟಗಳಲ್ಲಿ 6ನೇ ಸಂಪುಟವು 2023ರಲ್ಲಿ ಲೋಕಾರ್ಪಣೆಗೊಂಡು ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆಯನ್ನು ಪಡೆದಿದೆ, ಜನಮನ್ನಣೆ ಗಳಿಸಿದೆ. ಇದೀಗ 1ನೇ ಸಂಪುಟವು ಬಿಡುಗಡೆಗೆ ಸಿದ್ಧವಾಗಿದೆ.‌ ಇದೇ ತಿಂಗಳ 26ನೇ ತಾರೀಕು ಭಾನುವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ದಿಮಿಥಿಕ್ ಸೊಸೈಟಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 1ನೇ ಸಂಪುಟ ಲೋಕಾರ್ಪಣೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ರಂಗಕರ್ಮಿ ಶ್ರೀ ಎಸ್‌.ಎನ್‌. ಸೇತುರಾಂ ಮತ್ತು ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ವಿ ನಾಗರಾಜ್ ಅವರು ಇರುತ್ತಾರೆ.

900ಕ್ಕೂ ಹೆಚ್ಚು ಪುಟಗಳು ಇರುವ ಈ ಸಂಪುಟವನ್ನು ಜಾರ್ಖಂಡ್ ನಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀ ನಾಗ‌ ಹೆಚ್ ಹುಬ್ಳಿ‌ ಅನುವಾದಿಸಿದ್ದಾರೆ. ಈ ಸಂಪುಟದಲ್ಲಿ ಸಾವರ್ಕರ್ ಅವರ ಬಾಲ್ಯ, ಅವರ ಹುಟ್ಟೂರಾದ ಭಾಗುರ್‌, ನಾಸಿಕದಲ್ಲಿ ಕಳೆದ ಸಮಯ, ಲಂಡನ್ ದಿನಗಳ ಸಮಾಚಾರ - ಈ ವಿಚಾರಗಳು ವಿವರವಾಗಿ ಪ್ರಕಟವಾಗಿವೆ. ತನ್ನ ಕುಟುಂಬ, ಬಾಲ್ಯ ಮತ್ತು ತಾರುಣ್ಯದ ಅನೇಕ ರೋಚಕ ಕಥೆಗಳನ್ನು ಸ್ವತಃ ಸಾವರ್ಕರ್ ಅವರೇ ಬರೆದಿದ್ದಾರೆ. ಶತ್ರುಗಳ ನೆಲೆಯಲ್ಲಿಯೇ ನಿಂತು ಸಾವರ್ಕರ್ ಯಾವ್ಯಾವ ಚಟುವಟಿಕೆಗಳನ್ನು ನಡೆಸಿದರೆಂಬುದರ ವಿಸ್ತೃತ ಮಾಹಿತಿ ಈ ಸಂಪುಟದಲ್ಲಿದೆ. ಬಿಡುಗಡೆ ಕಾರ್ಯಕ್ರಮದಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಗೆ ಲಭ್ಯವಿದೆ.

ಸಾವರ್ಕರ್ ಅಭಿಮಾನಿಗಳೆಲ್ಲರೂ ತಿಳಿದುಕೊಳ್ಳಲೇಬೇಕಾದ ವಿವರಗಳಿರುವ ಸಮೃದ್ಧ ಸಂಪುಟ ಇದು. ಈ ಕುರಿತು ಸುದ್ದಿಯೊಂದನ್ನು ರಾಜ್ಯ ಪುಟದಲ್ಲಿ ಪ್ರಕಟಿಸಬೇಕು ಎಂದು ತಮ್ಮಲ್ಲಿ ಕಳಕಳಿಯ ಮನವಿ. ಹಾಗೆಯೇ ಕಾರ್ಯಕ್ರಮದ ದಿನದಂದು “ಇಂದಿನ ಕಾರ್ಯಕ್ರಮಗಳು” ವಿಭಾಗದಲ್ಲಿ ಪ್ರಕಟಿಸುವ ಜತೆಗೆ ಕಾರ್ಯಕ್ರಮ ವರದಿಗೆ ತಮ್ಮ ಘನತೆವೆತ್ತ ಸಂಸ್ಥೆಯ ವರದಿಗಾರರನ್ನು ನಿಯೋಜಿಸಿ ಉತ್ತಮ ಪ್ರಚಾರ ನೀಡಬೇಕು ಎಂದು ಮನವಿ ಮಾಡುತ್ತೇವೆ. ಈ ಪತ್ರಿಕಾ ಪ್ರಕಟಣೆಯೊಂದಿಗೆ 1ನೇ ಸಂಪುಟದ ಮುಖಪುಟ ಹಾಗೂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲಾಗಿದೆ.


 


ಕಾರ್ಯಕ್ರಮ ದಿನಾಂಕ: 26 ಮೇ 2024, ಭಾನುವಾರ

ಸಮಯ: ಬೆಳಗ್ಗೆ 11 ಗಂಟೆ

ಸ್ಥಳ:ದಿ ಮಿಥಿಕ್‌ ಸೊಸೈಟಿ, ನೃಪತುಂಗ ರಸ್ತೆ, ಬೆಂಗಳೂರು

ಮುಖ್ಯ ಅತಿಥಿಗಳು:

ಶ್ರೀ ಎಸ್‌.ಎನ್‌. ಸೇತುರಾಂ, ಖ್ಯಾತ ರಂಗಕರ್ಮಿ

ಶ್ರೀ ವಿ ನಾಗರಾಜ್, ಅಧ್ಯಕ್ಷರು, ದಿ ಮಿಥಿಕ್ ಸೊಸೈಟಿ

 

Post a Comment

0Comments

Post a Comment (0)