ಅಯೋಧ್ಯೆ (ಉತ್ತರಪ್ರದೇಶ): ರಾಮನವಮಿ ಹಿನ್ನೆಲೆಯಲ್ಲಿ ಭವ್ಯ ರಾಮಮಂದಿರದಲ್ಲಿ ವಿಸ್ಮಯವೊಂದು ಜರುಗಿತು. ಬುಧವಾರ ಮಧ್ಯಾಹ್ನ ಸರಿಯಾಗಿ 12.02 ನಿಮಿಷಕ್ಕೆ ಸರಿಯಾಗಿ ಸೂರ್ಯನ ಕಿರಣಗಳು ರಘುವಂಶಜ ಬಾಲರಾಮನ ಹಣೆಗೆ ಸ್ಪರ್ಶಿಸಿತು. ಸೂರ್ಯನ ಕಿರಣಗಳು ರಾಮನ ಹಣೆಯ ಮೇಲೆ ಬಿದ್ದ ತಕ್ಷಣ, ರತ್ನದಂತೆ ಹೊಳೆಯಿತು.ಇದನ್ನು ಸೂರ್ಯಾಭಿಷೇಕ ಅಥವಾ ಸೂರ್ಯ ತಿಲಕ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ರಾಮನವಮಿಯಂದು ಸೂರ್ಯ ರಶ್ಮಿಯ ವಿಸ್ಮಯ ನೆರವೇರಿತು.
ಸರ್ವಾಲಂಕೃತ ಸುಂದರಮೂರ್ತಿ ರಾಮನಿಗೆ ಸೂರ್ಯನು ತನ್ನ ಕಿರಣಗಳಿಂದ ತಿಲಕ ಇಟ್ಟನು. ಮಧ್ಯಾಹ್ನ ಈ ಅಮೋಘ ವಿಸ್ಮಯ ಸಂಭವಿಸಿತು. ಈ ಅದ್ಭುತ ಗಳಿಗೆಯು ಮಾಧ್ಯಮಗಳಲ್ಲಿ ನೇರಪ್ರಸಾರ ಮಾಡಲಾಯಿತು. ಯೂಟ್ಯೂಬ್ಗಳಲ್ಲಿ ಇದರ ಪ್ರಸಾರ ಮಾಡಲಾಗುತ್ತಿದೆ.
500 ವರ್ಷಗಳ ಕಾಯುವಿಕೆ ಬಳಿಕ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಯಾಗಿದೆ. ಮೊದಲ ರಾಮನವಮಿ ಭವ್ಯ ಮಂದಿರದಲ್ಲಿ ವಿಜೃಂಭಣೆಯಿಂದ ಜರುಗುತ್ತಿದೆ. ಏಪ್ರಿಲ್ 16, 17, 18 ಮೂರು ದಿನ ಸತತ 20 ಗಂಟೆಗಳ ಮಂದಿರವು ಭಕ್ತರಿಗಾಗಿ ತೆರೆದಿರುತ್ತದೆ. ದೇಶ - ವಿದೇಶಗಳಿಂದ ಲಕ್ಷಾಂತರ ಭಕ್ತರು ಬಾಲರಾಮನ ದರ್ಶನಕ್ಕಾಗಿ ಹರಿದುಬರುತ್ತಿದ್ದಾರೆ. ಸುಮಾರು 40 ಲಕ್ಷ ಭಕ್ತರು ಅಯೋಧ್ಯೆಗೆ ಆಗಮಿಸುವ ಅಂದಾಜಿದ್ದು, ಟ್ರಸ್ಟ್ ವತಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಕೂಡ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಆಗಮಿಸಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಯೋಜನೆಯನ್ನು ರೂಪಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಯಂತ್ರವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಒಂದಿಷ್ಟು ನಿಮಿಷ ರಾಮನ ಹಣೆಯ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲಿದೆ. ಇಲ್ಲಿ ಅಳವಡಿಸಲಾದ ಆಪ್ಟೋಮೆಕಾನಿಕಲ್ ಸಿಸ್ಟಮ್ ಅತಿಗೆಂಪು ಫಿಲ್ಟರ್‌ನಿಂದ ಮಾಡಲ್ಪಟ್ಟಿದೆ. ಇದಕ್ಕೆ ನಿಖರ ಮಸೂರ ಮತ್ತು ಕನ್ನಡಿಗಳನ್ನು ಬಳಸಿ ವಿಶಿಷ್ಟ ವಿನ್ಯಾಸವನ್ನು ಒದಗಿಸಲಾಗಿದೆ. ಈ ಅಂಶಗಳು ನೈಸರ್ಗಿಕ ಸೂರ್ಯನ ಬೆಳಕನ್ನು ಬಳಸಿಕೊಂಡು ದೈವಿಕ ಸಂಕೇತವಾಗಿ ತಿಲಕವನ್ನು ಉಂಟು ಮಾಡಲಿದೆ.
ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಹೇಳುವಂತೆ, ಭಗವಂತ ರಾಮನು ಭೂಮಿಯ ಮೇಲೆ ಅವತರಿಸಿದಾಗ, ಸೂರ್ಯದೇವನು ಅಯೋಧ್ಯೆಯನ್ನು ಒಂದು ತಿಂಗಳು ಬಿಟ್ಟು ಹೋಗಲಿಲ್ಲ ಎಂಬ ಐತಿಹ್ಯವಿದೆ. ರಾಮನವಮಿಯನ್ನು ನಾವು ರಾಮನ ಜನ್ಮದಿನ ಆಚರಿಸುತ್ತೇವೆ. ಇಂದಿನ ಸುದಿನವೇ ಸೂರ್ಯನ ಕಿರಣಗಳು ಭವ್ಯ ಮಂದಿರದಲ್ಲಿ ವಿರಾಜಮಾನವಾಗಿರು ರಾಮನ ಹಣೆಗೆ ತಿಲಕಧಾರಿಯಾಗಲಿದೆ ಎಂದು ತಿಳಿಸಿದರು.