ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೇಥಿಯಲ್ಲಿ ಜನಬೆಂಬಲ ಸಿಗದೇ ಓಡಿ ಹೋದ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸಿದ್ದಾರೆ. ಇಲ್ಲೂ ಜನ ಬೆಂಬಲ ಸಿಗುವುದು ಕಷ್ಟವಾಗಿದೆ, ಹೀಗಾಗೀ ಅವರ ಗ್ಯಾಂಗ್ ಚುನಾವಣೆ ಮುಗಿಯಲು ಕಾಯುತ್ತಿದೆ. ಚುನಾವಣೆ ಮುಗಿಯುತ್ತಿದ್ದಂತೆ ವಯನಾಡಿನಿಂದಲೂ ಓಡಿ ಹೋಗಲಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ.
ಐ.ಎನ್.ಡಿ.ಐ.ಎ ಒಕ್ಕೂಟದ ನಾಯಕ ಯಾರು? ಎಂದು ಹೇಳಲು ವಿರೋಧ ಪಕ್ಷದ ನಾಯಕರು ವಿಫಲವಾಗಿದ್ದಾರೆ. ಅವರು (ಕಾಂಗ್ರೆಸ್) ಏನು ಬೇಕಾದರೂ ಹೇಳಿಕೊಳ್ಳಬಹುದು. ಆದ್ರೆ ವಾಸ್ತವವೆಂದರೆ ಚುನಾವಣೆಯ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಸೋಲನ್ನು ಒಪ್ಪಿಕೊಂಡಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದ ಅವರು ದೊಡ್ಡ ಪ್ರಮಾಣ ಮತದಾನ ಮಾಡುವ ಮೂಲಕ ಎನ್‌ಡಿಎ ಒಕ್ಕೂಟ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ನಿನ್ನೆ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. ಮತದಾನ ಮಾಡಿದ ಎಲ್ಲರಿಗೂ, ವಿಶೇಷವಾಗಿ ಮೊದಲ ಬಾರಿಗೆ ಮತದಾರರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ಮತದಾನ ಮುಗಿದ ನಂತರ ಬೂತ್ ಮಟ್ಟದಲ್ಲಿ ನಡೆಸಲಾದ ವಿಶ್ಲೇಷಣೆ ಪ್ರಕಾರ ಮೊದಲ ಹಂತದಲ್ಲಿ ಎನ್‌ಡಿಎಗೆ ಏಕಪಕ್ಷೀಯ ಮತದಾನವಾಗಿದೆ ಎಂದು ಹೇಳಿದರು.