ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಂಬಂಧ ದಿಂಗಾಲೇಶ್ವರ ಸ್ವಾಮೀಜಿ ಈ ಹಿಂದೆ ಸರಣಿ ಸಭೆಗಳನ್ನು ನಡೆಸಿ ಭಕ್ತರ ಮತ್ತು ಹಲವು ಮಠಾದೀಶರ ಅಭಿಪ್ರಾಯ ಪಡೆದುಕೊಂಡಿದ್ದರು. ಇಂದು (ಏ.08) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆಂದು ಘೋಷಿಸಿದ್ದರು.
ಲಿಂಗಾಯತ ಮತಗಳು ಅಧಿಕವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ, ಬ್ರಾಹ್ಮಣ ಸಮಾಜದ ಪ್ರಲ್ಹಾದ್ ಜೋಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಕುರುಬ ಸಮಾಜದ ವಿನೋದ್ ಅಸೂಟಿ ಕಣದಲ್ಲಿದ್ದಾರೆ. ಈ ನಡುವೆ ಧಾರವಾಡ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ವೀರಶೈವ ಲಿಂಗಾಯತ ಸಮುದಾಯದ ಶಿರಹಟ್ಟಿ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಲಿಂಗಾಯತ ಸಮುದಾಯದ ಮುಖಂಡರು ಒತ್ತಡ ಹಾಕಿದ್ದರು. ದಿಂಗಾಲೇಶ್ವರ ಸ್ವಾಮೀಜಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಬಹಿರಂಗವಾಗಿಯೇ ಹೇಳಿದ್ದು, ಧಾರವಾಡ ಸಂಸದ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಕರೆ ನೀಡಿದ್ದರು. ನಾನು ಸ್ವಂತವಾಗಿ ಮಾತನಾಡುತ್ತಿಲ್ಲ, ಪ್ರಲ್ಹಾದ್ ಜೋಶಿಯವರ ಕೈಯಲ್ಲಿ ನೋವು ಅನುಭವಿಸಿದ ಜನರ ಧ್ವನಿಗಾಗಿ ನಾನು ಹೋರಾಟ ನಡೆಸುತ್ತಿದ್ದೆನೆ. ಅವರ ಆಡಳಿತ ವಿನಾಶಕಾರಿಯಾಗಿದೆ. ಮತ್ತು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಮತ್ತು ಲಿಂಗಾಯತ ಸಮುದಾಯದ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ನ್ಯಾಯುತವಾಗಿ ನಡೆಸಿಕೊಳ್ಳಲಾಗಿದೆ ಎಂದು ಪಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದರು.